Asia Cup Hockey 2025: ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದ ಪಾಕಿಸ್ತಾನ

Asia Cup Hockey 2025: ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಿಂದ ಪಾಕಿಸ್ತಾನ ತನ್ನ ತಂಡವನ್ನು ಹಿಂತೆಗೆದುಕೊಂಡಿದೆ. ಭಾರತದಲ್ಲಿನ ಭದ್ರತಾ ಕಾಳಜಿ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಉಲ್ಲೇಖಿಸಿ ಪಾಕಿಸ್ತಾನ ಹಾಕಿ ಫೆಡರೇಶನ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಆಟಗಾರರು ಭಾರತಕ್ಕೆ ಬರುವುದಕ್ಕೆ ಇಚ್ಛಿಸದಿರುವುದು ಕೂಡ ಈ ನಿರ್ಧಾರಕ್ಕೆ ಕಾರಣವಾಗಿದೆ. ಈ ಬಗ್ಗೆ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್‌ಗೆ ಪಾಕಿಸ್ತಾನ ತಿಳಿಸಿದೆ.

Asia Cup Hockey 2025: ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದ ಪಾಕಿಸ್ತಾನ
Hockey Team

Updated on: Jul 21, 2025 | 4:35 PM

ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜಗೀರ್ ಕ್ರೀಡಾಂಗಣದಲ್ಲಿ ಹಾಕಿ ಏಷ್ಯಾಕಪ್ (Asia Cup Hockey 2025
) ನಡೆಯಲಿದೆ. ಆದರೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಹಾಕಿ ತಂಡ ಭಾರತಕ್ಕೆ ಬರುತ್ತಿಲ್ಲ ಎಂದು ವರದಿಯಾಗಿದೆ. ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಭದ್ರತಾ ಕಾಳಜಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್, ಅಂತರರಾಷ್ಟ್ರೀಯ ಹಾಕಿ ಫೆಡರೇಶನ್​ಗೆ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ PHF ಮುಖ್ಯಸ್ಥ ತಾರಿಕ್ ಬುಗ್ತಿ, ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸದಿರುವ ನಿರ್ಧಾರವನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (FIH) ಮತ್ತು ಏಷ್ಯನ್ ಹಾಕಿ ಫೆಡರೇಶನ್ (AHF) ಗೆ ಪತ್ರ ಬರೆದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಭಾರತಕ್ಕೆ ಹೋಗಲು ಸಿದ್ಧರಿಲ್ಲ

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪಾಕಿಸ್ತಾನ ಹಾಕಿ ಫೆಡರೇಶನ್ ಮುಖ್ಯಸ್ಥ ತಾರಿಕ್ ಬುಗ್ತಿ, ‘ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ತಂಡವು ಭಾರತಕ್ಕೆ ಬಂದರೆ ಅಲ್ಲಿ ಭದ್ರತಾ ಬೆದರಿಕೆಗಳನ್ನು ಎದುರಿಸಬಹುದು. ಅಲ್ಲದೆ ನಮ್ಮ ಆಟಗಾರರು ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ಹೋಗಲು ಸಿದ್ಧರಿಲ್ಲ. ಹೀಗಾಗಿ ನಾವು ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುತ್ತಿಲ್ಲ. ಈ ಪಂದ್ಯಾವಳಿ ಮುಂಬರುವ ಹಾಕಿ ವಿಶ್ವಕಪ್‌ಗೆ ಅರ್ಹತಾ ಪಂದ್ಯಾವಳಿಯೂ ಆಗಿರುವ ಕಾರಣ ಪಂದ್ಯಾವಳಿ ಮತ್ತು ಪಾಕಿಸ್ತಾನದ ಪಂದ್ಯಗಳಿಗೆ ಸಂಬಂಧಿಸಿದಂತೆ ಏನು ಮಾಡಬೇಕೆಂದು ನಿರ್ಧರಿಸುವುದು ಎಫ್‌ಐಎಚ್ ಮತ್ತು ಎಎಚ್‌ಎಫ್‌ಗೆ ಬಿಟ್ಟದ್ದು’ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು ‘ ಎಫ್​ಐಹೆಚ್ ಮತ್ತು ಎಎಚ್‌ಎಫ್‌ಗೆ ಬರೆದಿರುವ ಪತ್ರದಲ್ಲಿ ನಮ್ಮ ಆಟಗಾರರು ಭಾರತದಲ್ಲಿ ಸುರಕ್ಷಿತವಾಗಿರುತ್ತಾರೆ ಮತ್ತು ಪಂದ್ಯಾವಳಿಯತ್ತ ಗಮನ ಹರಿಸಲು ಸಾಧ್ಯವಾಗುತ್ತದೆ ಎಂಬುದಕ್ಕೆ ಖಾತರಿ ಏನು ಎಂದು ಕೇಳಿದ್ದೇವೆ’ ಎಂದಿದ್ದಾರೆ. ಆದಾಗ್ಯೂ ಈ ವಿಷಯದ ಬಗ್ಗೆ ಪಾಕಿಸ್ತಾನ ಸರ್ಕಾರ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಇತ್ತೀಚೆಗೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಂಡವು ಭಾರತಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದರು.

ಕ್ರೀಡಾ ಸಚಿವಾಲಯ ಹೇಳಿದ್ದೇನು?

ಈ ಹಿಂದೆ, ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಹಾಕಿ ತಂಡ ಭಾಗವಹಿಸುವುದನ್ನು ತಡೆಯುವುದಿಲ್ಲ ಎಂದು ಭಾರತೀಯ ಕ್ರೀಡಾ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿದ್ದವು. ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಯಾವುದೇ ತಂಡ ಭಾಗವಹಿಸುವುದನ್ನು ನಾವು ವಿರೋಧಿಸುವುದಿಲ್ಲ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಪಿಟಿಐಗೆ ತಿಳಿಸಿದ್ದವು.

‘ಅದರಲ್ಲಿ ಯಾವುದೇ ಸತ್ಯವಿಲ್ಲ’; ಏಷ್ಯಾಕಪ್ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ಬಿಸಿಸಿಐ ಕಾರ್ಯದರ್ಶಿ

ಭಾರತ ಐದು ಬಾರಿ ಏಷ್ಯಾಕಪ್ ಗೆದ್ದಿದೆ

2011 ರಲ್ಲಿ ಆರಂಭವಾದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಐದು ಬಾರಿ ಪ್ರಶಸ್ತಿ ಗೆದ್ದಿದ್ದರೆ, ಪಾಕಿಸ್ತಾನ ಮೂರು ಬಾರಿ ಚಾಂಪಿಯನ್‌ ಆಗಿದೆ. ಉಳಿದಂತೆ 2021 ರಲ್ಲಿ ಢಾಕಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ದಕ್ಷಿಣ ಕೊರಿಯಾ ಒಮ್ಮೆ ಈ ಪ್ರಶಸ್ತಿಯನ್ನು ಗೆದ್ದಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Mon, 21 July 25