
ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ದಿನಗಣನೆ ಶುರುವಾಗಿದೆ. ಈ ಪಂದ್ಯಕ್ಕೂ ಮುನ್ನವೇ ಪಾಕ್ ತಂಡದ ಮಾಜಿ ಸ್ಪಿನ್ನರ್ ಸಖ್ಲೈನ್ ಮುಷ್ತಾಕ್ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಪಾಕಿಸ್ತಾನದ ಚಾನೆಲ್ ಚರ್ಚೆಯಲ್ಲಿ ಕಾಣಿಸಿಕೊಂಡ ಸಖ್ಲೈನ್ ಈ ಬಾರಿ ಪಾಕಿಸ್ತಾನ್ ಭಾರತಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾರತ ತಂಡವು ಪಾಕಿಸ್ತಾನದಲ್ಲಿ ಪಂದ್ಯಾವಳಿ ಆಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಇಂದು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬಿಸಿಸಿಐನ ಇಂತಹ ಬೇಡಿಕೆಗಳು ತರ್ಕಬದ್ಧವಲ್ಲ. ಹೀಗಾಗಿ ಪಾಕ್ ಪಡೆ ಈ ಸಲ ಭಾರತ ತಂಡವನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕು ಸಖ್ಲೈನ್ ಮುಷ್ತಾಕ್ ಆಗ್ರಹಿಸಿದ್ದಾರೆ.
ಇದೇ ವೇಳೆ ಭಾರತೀಯ ರಾಯಭಾರ ಕಚೇರಿಯು ವೀಸಾ ನೀಡದಿರುವ ಘಟನೆಯನ್ನು ನೆನಪಿಸಿಕೊಂಡ ಸಖ್ಲೈನ್ ಮುಷ್ತಾಕ್, ಭಾರತದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾನು ನ್ಯೂಝಿಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಭಾರತೀಯ ರಾಯಭಾರ ಕಚೇರಿಯು ವೀಸಾಗಾಗಿ ನನ್ನನ್ನು ತಿಂಗಳುಗಳ ಕಾಲ ಕಾಯುವಂತೆ ಮಾಡಿತ್ತು.
ನಾನು ಮೂರು ತಿಂಗಳುಗಳ ಕಾಲ ಕಾದಿದ್ದೆ. ಆದರೆ ಅವರಿಂದ ನನಗೆ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ ನಾನು ನ್ಯೂಝಿಲೆಂಡ್ ತಂಡದೊಡನೆ ಕಾರ್ಯ ನಿರ್ವಹಿಸಲು ಸಾಧ್ಯವಾಗಿರಲಿಲ್ಲ ಎಂದು ಸಖ್ಲೈನ್ ಮುಷ್ತಾಕ್ ಹೇಳಿದ್ದಾರೆ.
ಪಾಕಿಸ್ತಾನದ ಯುವಕರು ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ನೋಡಲು ಬಯಸುತ್ತಾರೆ. ಆದರೆ ಇವರೆಲ್ಲಾ ಯಾವ ಲೋಕದಲ್ಲಿದ್ದಾರೆ? ಏನನ್ನು ಸಾಧಿಸಲು ಬಯಸುತ್ತಾರೆಂದು ನನಗೆ ತಿಳಿಯುತ್ತಿಲ್ಲ. ಇವರು ಯಾವಾಗ ಸುಧಾರಿಸುತ್ತಾರೆ? ಇವರ ಮನಸ್ಥಿತಿ ಯಾವಾಗ ಬದಲಾಗುತ್ತೊ ಎಂಬುದೇ ನನ್ನ ಪ್ರಶ್ನೆ.
ಟೈ ಧರಿಸಿ ಇಂಗ್ಲಿಷ್ ಮಾತನಾಡಿದರೆ, ನೀವು ನಾಗರಿಕರಾಗಿದ್ದೀರಿ ಎಂದು ನೀವು ಭಾವಿಸುತ್ತೀರಿ. ಆದರೆ ಅದಲ್ಲ ನಾಗರೀಕತೆ ಅದಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು ಎಂದು ಸಖ್ಲೈನ್ ಮುಷ್ತಾಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ 13 ಆಟಗಾರರು ಔಟ್
ಇದಕ್ಕಾಗಿ ಪಾಕಿಸ್ತಾನವು ಒಂದು ನಿಲುವನ್ನು ತೆಗೆದುಕೊಂಡು ಅವರಿಗೆ ತಕ್ಕ ಪಾಠ ಕಲಿಸಬೇಕು. ಈ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿಯ ಅವಿವೇಕದ ತಂತ್ರಗಳಿಗೆ ಪ್ರತ್ಯುತ್ತರ ನೀಡಬೇಕೆಂದು ಪಿಸಿಬಿಯನ್ನು ಸಖ್ಲೈನ್ ಮುಷ್ತಾಕ್ ಒತ್ತಾಯಿಸಿದ್ದಾರೆ.