ಮನು ಭಾಕರ್… ಕೇವಲ 10 ದಿನಗಳ ಹಿಂದೆ ಈ ಹೆಸರು ಅಷ್ಟಾಗಿ ಯಾರಿಗೂ ತಿಳಿದಿರಲಿಲ್ಲ. ಆದರೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕೇವಲ 6 ದಿನಗಳ ಅಂತರದಲ್ಲಿ ದೇಶಕ್ಕೆ ಎರಡೆರಡು ಪದಕ ಗೆದ್ದುಕೊಟ್ಟ 22 ವರ್ಷದ ಮನು ಭಾಕರ್, ಇದೀಗ ಇಡೀ ದೇಶದ ಮನೆ ಮಾತನಾಗಿದ್ದಾರೆ. ಕಳೆದ ಬಾರಿ ನಡೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ತನ್ನ ಪಿಸ್ತೂಲ್ನಲ್ಲಿ ಕಂಡುಬಂದ ದೋಷದಿಂದಾಗಿ ಪದಕ ಸ್ಪರ್ಧೆಯಿಂದ ಹೊರಬಿದ್ದಿದ್ದ ಮನು, ಇದೀಗ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ದೇಶವೇ ಹೆಮ್ಮೆಪಡುವಂತಹ ಕೆಲಸ ಮಾಡಿದ್ದಾರೆ. ಹೀಗಾಗಿ ಕ್ರೀಡಾ ಜಗತನ್ನು ಹೊರತುಪಡಿಸಿಯೂ ಮನು ಹೆಸರು ಎಲ್ಲೆಡೆ ಸದ್ದು ಮಾಡುತ್ತಿದೆ. ಮನು ಜನಪ್ರಿಯತೆಯನ್ನು ಲಾಭವಾಗಿಸಿಕೊಳ್ಳುವ ಇರಾದೆಯಲ್ಲಿರುವ ಹಲವರು ಕಂಪನಿಗಳು ಕೂಡ ಮನು ಅವರನ್ನು ತಮ್ಮ ಬ್ರ್ಯಾಂಡ್ನ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಸ್ಪರ್ಧೆಗೆ ಬಿದ್ದಿವೆ.
ವರದಿಯ ಪ್ರಕಾರ 40 ಕ್ಕೂ ಹೆಚ್ಚು ಬ್ರ್ಯಾಂಡ್ಗಳು ಮನು ಜೊತೆಗೆ ಜಾಹೀರಾತು ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿವೆ ಎಂದು ತಿಳಿದುಬಂದಿದೆ. ಇತ್ತ ಮನು ಭಾಕರ್ ಕೂಡ ತಮ್ಮ ಜನಪ್ರಿಯತೆಗೆ ಸರಿಯಾಗಿ ತಮ್ಮ ಬ್ರ್ಯಾಂಡ್ ಮೌಲ್ಯವನ್ನು ಸಹ ಬರೋಬ್ಬರಿ 6 ಪಟ್ಟು ಹೆಚ್ಚಳ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದಕ್ಕೂ ಮುನ್ನ ಮನು ಅವರು ಒಂದು ಬ್ರ್ಯಾಂಡ್ನ ಬ್ರ್ಯಾಂಡ್ ಅಂಬಾಸಿಡರ್ ಆಗಲು ಸುಮಾರು 20 ಲಕ್ಷ ರೂಗಳನ್ನು ಶುಲ್ಕವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಅವರ ಬ್ರ್ಯಾಂಡ್ ಮೌಲ್ಯವನ್ನು 1 ರಿಂದ 1.5 ಕೋಟಿ ರೂಗೆ ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮನು ಅವರ ಮ್ಯಾನೇಜಿಂಗ್ ಏಜೆನ್ಸಿ ಐಒಎಸ್ ಸ್ಪೋರ್ಟ್ಸ್ ಮತ್ತು ಎಂಟರ್‌ಟೈನ್‌ಮೆಂಟ್, ‘ಮನು ಪದಕ ಜಯಿಸಿದ ಬಳಿಕ 40 ಕ್ಕೂ ಹೆಚ್ಚು ಬ್ರ್ಯಾಂಡ್ಗಳು ಮನು ಅವರಿಗಾಗಿ ಹಿಂದೆ ಬಿದ್ದಿವೆ. ಅಲ್ಲದೆ ಕೆಲವು ಬ್ರಾಂಡ್‌ಗಳು ತಮ್ಮ ಲೋಗೋದೊಂದಿಗೆ ಮನು ಅವರ ಫೋಟೋವನ್ನು ಬಳಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುತ್ತಿವೆ. ಸುಮಾರು 150 ರಿಂದ 200 ಬ್ರ್ಯಾಂಡ್‌ಗಳು ಈ ಕೆಲಸ ಮಾಡಿವೆ. ಇದು ಕಾರ್ಪೊರೇಟ್ ಇಂಡಿಯಾದ ವೃತ್ತಿಪರವಲ್ಲದ ನಡವಳಿಕೆ. ಹೀಗಾಗಿ ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು’ ಎಂದಿದ್ದಾರೆ.
‘ಇದಲ್ಲದೆ ಮನು ಅವರ ಫೋಟೋವನ್ನು ಅನುಮತಿಯಲ್ಲಿದೆ ಬಳಸಿರುವ ಬ್ರ್ಯಾಂಡ್‌ಗಳಿಗೆ ಏಜೆನ್ಸಿಯು ಈಗಾಗಲೇ ಸುಮಾರು 50 ಲೀಗಲ್ ನೋಟಿಸ್‌ಗಳನ್ನು ಕಳುಹಿಸಿದೆ. ಹಾಗೆಯೇ ಇತರ ಬ್ರ್ಯಾಂಡ್‌ಗಳಿಗೆ ಎಚ್ಚರಿಕೆಯನ್ನು ಸಹ ನೀಡುತ್ತಿದೆ. ಮನು ಭಾಕರ್ ಅವರ ಬ್ರ್ಯಾಂಡ್ ಮೌಲ್ಯ ಬೆಳೆಯುತ್ತಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಒಪ್ಪಂದಗಳು ಅಲ್ಪಾವಧಿಗೆ ಮತ್ತು ದೀರ್ಘಾವಧಿಗೆ ನಡೆಯುತ್ತಿವೆ’ ಎಂದಿದ್ದಾರೆ.
‘ಕಳೆದ 2-3 ದಿನಗಳಲ್ಲಿ ನಮ್ಮನ್ನು ಸುಮಾರು 40ಕ್ಕೂ ಹೆಚ್ಚು ಜನರು ಸಂಪರ್ಕಿಸಿದ್ದಾರೆ. ನಾವು ಇದೀಗ ದೀರ್ಘಾವಧಿಯ ಒಪ್ಪಂದಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಇದಲ್ಲದೆ ಈಗಾಗಲೇ ಕೆಲವು ಬ್ರ್ಯಾಂಡ್‌ಗಳ ಜೊತೆ ಒಪ್ಪಂದವನ್ನು ಸಹ ಪೂರ್ಣಗೊಳಿಸಿದ್ದೇವೆ. ಸಹಜವಾಗಿ, ಅವರ ಬ್ರ್ಯಾಂಡ್ ಮೌಲ್ಯವು ಐದರಿಂದ ಆರು ಪಟ್ಟು ಹೆಚ್ಚಾಗಿದೆ. ಈ ಮೊದಲು ನಾವು ಒಂದು ಜಾಹೀರಾತು ಒಪ್ಪಂದಕ್ಕೆ ಸುಮಾರು 20 ರಿಂದ 25 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದೆವು. ಈಗ ಒಂದು ಜಾಹೀರಾತಿನ ಒಪ್ಪಂದಕ್ಕೆ ಸುಮಾರು 1.5 ಕೋಟಿ ರೂಪಾಯಿಗಳನ್ನು ಶುಲ್ಕವಾಗಿ ವಿಧಿಸಲಾಗುತ್ತದೆ’ ಎಂದು ಮನು ಅವರ ಮ್ಯಾನೇಜಿಂಗ್ ಏಜೆನ್ಸಿ ತಿಳಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Sat, 3 August 24