‘ಬದುಕು ಇಲ್ಲಿಗೆ ಮುಗಿದಿಲ್ಲ’; ವಿನೇಶ್​​ರಂತೆಯೇ ಅನರ್ಹಗೊಂಡಿದ್ದ ಕುಸ್ತಿಪಟುವಿನಿಂದ ಸ್ಪೂರ್ತಿ ಸಂದೇಶ

|

Updated on: Aug 10, 2024 | 7:20 PM

Paris Olympics 2024: ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪುರುಷರ 57 ಕೆ.ಜಿ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಜಪಾನ್‌ನ ರೇ ಹಿಗುಚಿ ತನ್ನ ಹಿಂದಿನ ಕಹಿ ಅನುಭವವನ್ನು ಉದಾಹರಣೆ ನೀಡುವುದರೊಂದಿಗೆ ವಿನೇಶ್​ರನ್ನು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.

‘ಬದುಕು ಇಲ್ಲಿಗೆ ಮುಗಿದಿಲ್ಲ; ವಿನೇಶ್​​ರಂತೆಯೇ ಅನರ್ಹಗೊಂಡಿದ್ದ ಕುಸ್ತಿಪಟುವಿನಿಂದ ಸ್ಪೂರ್ತಿ ಸಂದೇಶ
ವಿನೇಶ್ ಫೋಗಟ್, ರೇ ಹಿಗುಚಿ
Follow us on

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿಯ ಫೈನಲ್ ಪಂದ್ಯಕ್ಕೂ ಮುನ್ನ ಅಧಿಕ ತೂಕ ಹೊಂದಿದ್ದಕ್ಕಾಗಿ ಸ್ಪರ್ಧೆಯಿಂದ ಅನರ್ಹಗೊಂಡಿದ್ದ ವಿನೇಶ್ ಫೋಗಟ್, ಈ ನಿರ್ಧಾರದ ವಿರುದ್ಧ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪ್ರಕರಣದ ತೀರ್ಪು ಇಷ್ಟರಲ್ಲೇ ಹೊರಬೀಳಲಿದೆ. ಆದರೆ ಅದಕ್ಕೂ ಮುನ್ನ ಆಘಾತಕ್ಕಾರಿ ಸಂಗತಿಯೆಂದರೆ ಅನರ್ಹತೆಯ ಆಘಾತದಿಂದ ಹೊರಬರದ ವಿನೇಶ್ ಫೋಗಟ್​ ಕುಸ್ತಿಗೆ ವಿದಾಯ ಹೇಳಿರುವುದು. ವಿನೇಶ್ ಅವರ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ಅನುಭವಿಗಳಿಂದ ಹಿಡಿದು, ಅಭಿಮಾನಿಗಳವರೆಗೆ ಎಲ್ಲರೂ ವಿನೇಶ್ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡುತ್ತಿದ್ದಾರೆ. ಇದೀಗ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪುರುಷರ 57 ಕೆ.ಜಿ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಜಪಾನ್‌ನ ರೇ ಹಿಗುಚಿ ತನ್ನ ಹಿಂದಿನ ಕಹಿ ಅನುಭವವನ್ನು ಉದಾಹರಣೆ ನೀಡುವುದರೊಂದಿಗೆ ವಿನೇಶ್​ರನ್ನು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.

ಅನರ್ಹರಾಗಿದ್ದ ಜಪಾನ್‌ನ ರೇ ಹಿಗುಚಿ

ವಾಸ್ತವವಾಗಿ ಜಪಾನ್‌ನ ರೇ ಹಿಗುಚಿ ಕೂಡ 2020 ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇದೇ ಅಧಿಕ ತೂಕದ ಕಾರಣದಿಂದಾಗಿ ಅನರ್ಹತೆಗೆ ಒಳಗಾಗಿದ್ದರು. ರೇ ಹಿಗುಚಿ ಕಳೆದ ಒಲಿಂಪಿಕ್ಸ್​ನಲ್ಲಿ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ ಅವರ ತೂಕ ನಿಗದಿಗಿಂತ 50 ಗ್ರಾಂ ಹೆಚ್ಚಿದ್ದ ಕಾರಣ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಆದರೆ ಛಲ ಬಿಡದ ಅವರು 50 ಕೆ.ಜಿ ವಿಭಾಗದ ಬದಲು 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದರು. ಅದರಂತೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರೇ ಹಿಗುಚಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ನಿಮ್ಮ ನೋವು ನನಗೆ ಅರ್ಥವಾಗುತ್ತದೆ; ರೇ ಹಿಗುಚಿ

ಇದೀಗ ಚಿನ್ನದ ಪದಕವನ್ನು ಗೆದ್ದ ಬಳಿಕ ತನ್ನ ಕಥೆಯನ್ನೇ ಉದಾಹರಣೆಯನ್ನಾಗಿ ನೀಡಿರುವ ರೇ ಹಿಗುಚಿ, ವಿನೇಶ್ ಅವರಿಗೆ ಧೈರ್ಯ ತುಂಬವನ್ನು ಕೆಲಸವನ್ನು ಮಾಡಿದ್ದಾರೆ. ವಿನೇಶ್ ಅವರ ನಿವೃತ್ತಿಯ ಟ್ವೀಟ್​ಗೆ ರೀ ಟ್ವೀಟ್ ಮಾಡಿರುವ ರೇ ಹಿಗುಚಿ, ‘ವಿನೇಶ್, ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ನಾನು ಕೂಡ ಕೇವಲ 50 ಗ್ರಾಂ ಅಧಿಕ ತೂಕದಿಂದ ಅನರ್ಹತೆಗೆ ಒಳಗಾಗಿದ್ದೆ. ನಿನ್ನ ಸುತ್ತಮುತ್ತಲಿನ ಜನರು ಮಾತನಾಡುವುದರ ಬಗ್ಗೆ ನೀನು ಚಿಂತಿಸಬೇಡ. ಜೀವನವು ಮುಂದುವರಿಯುತ್ತದೆ, ವೈಫಲ್ಯವನ್ನು ಜಯಿಸುವುದೇ ಜೀವನದ ನಿಜವಾದ ಅರ್ಥ ಎಂದು ಬರೆದುಕೊಂಡಿದ್ದಾರೆ.

ಇಂದು ತೀರ್ಪು ಹೊರಬೀಳಲಿದೆ

ಇನ್ನು ಕೇವಲ 100 ಗ್ರಾಂ ಅಧಿಕ ತೂಕದ ಸಲುವಾಗಿ ತನ್ನನ್ನು ಅನರ್ಹಗೊಳಿಸಿರುವುದರ ವಿರುದ್ಧ ವಿನೇಶ್ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಜಂಟಿ ಬೆಳ್ಳಿ ಪದಕಕ್ಕಾಗಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಮೊರೆ ಹೋಗಿದೆ. ಇದೀಗ ಸಿಎಎಸ್ ನೀಡುವ ತೀರ್ಪಿಗಾಗಿ ಇಡೀ ದೇಶವೇ ಕಾಯುತ್ತಿದೆ. ವಿನೇಶ್ ಪರವಾಗಿ ವಾದಿಸಲು ದೇಶದ ಹೆಸರಾಂತ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರನ್ನು ನೇಮಿಸಲಾಗಿದೆ. ಇಂದು ರಾತ್ರಿ 9:30 ಕ್ಕೆ ಈ ಪ್ರಕರಣದ ಕುರಿತಾಗಿ ತೀರ್ಪು ಹೊರಬೀಳಲಿದೆ ಎಂದು ಕೋರ್ಟ್ ಆಫ್ ಆರ್ಬಿಟ್ರೇಶನ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Sat, 10 August 24