Asia Cup 2022: ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ್ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕಾಣಿಸಿಕೊಂಡಿದ್ದರು. ಇದೇ ವೇಳೆ ದ್ರಾವಿಡ್ ಉಭಯ ತಂಡಗಳ ಸಾಮರ್ಥ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟರು. ಈ ವೇಳೆ ಪಾಕ್ ಪತ್ರಕರ್ತರು ಕೇಳಿದ, ಬೌಲಿಂಗ್ ಲೈನ್ ಅಪ್ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, ಪಾಕಿಸ್ತಾನ್ ತಂಡವು ಉತ್ತಮ ಬೌಲರ್ಗಳನ್ನು ಹೊಂದಿದ್ದಾರೆ ಎಂಬುದನ್ನು ನಾನು ಗೌರವಿಸುತ್ತೇನೆ. ಹಾಗೆಯೇ ನಮ್ಮಲ್ಲೂ ಅತ್ಯುತ್ತಮ ಬೌಲರ್ಗಳಿದ್ದಾರೆ. ಏಕೆಂದರೆ ನಮ್ಮ ಬೌಲರ್ಗಳೂ ಕೂಡ ಫಲಿತಾಂಶವನ್ನು ನಿರ್ಧರಿಸುವಂತಹ ಪ್ರದರ್ಶನ ನೀಡಿದ್ದಾರೆ ಎಂದರು.
ಅಷ್ಟೇ ಅಲ್ಲದೆ ಮಾತು ಮುಂದುವರೆಸಲು ಮುಂದಾದ ದ್ರಾವಿಡ್ ಆ ಒಂದು ಪದವನ್ನು ಬಳಸಲು ಹಿಂಜರಿದರು. ನಾನು ಆ ಒಂದು ಪದವನ್ನು ಬಳಸಲು ಬಯಸಿದ್ದೆ. ಆದರೆ ಅದನ್ನು ಹೇಳಲು ಸಾಧ್ಯವಿಲ್ಲ ಎಂದೇಳಿ ದ್ರಾವಿಡ್ ನಗಲಾರಂಭಿಸಿದರು. ಇದೇ ವೇಳೆ ಪತ್ರಕರ್ತರು ಕೂಡ ಅದು ಅತಿರಂಜಿತ ಪದವೇ ಎಂದು ಪ್ರಶ್ನಿಸಿದರು. ಇದಕ್ಕೆ ನಗುತ್ತಾ ಉತ್ತರಿಸಿದ ದ್ರಾವಿಡ್, ಹೌದು, S ನಿಂದ ಪ್ರಾರಂಭವಾಗುತ್ತದೆ ಎಂದರು. ಅಲ್ಲದೆ ಅದು ನಾಲ್ಕು ಅಕ್ಷರಗಳ ಪದ ಎಂಬ ಕ್ಲೂ ಕೂಡ ನೀಡಿದರು.
ಆ ಬಳಿಕ ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್ ಗ್ಲಾಮರಸ್ ಆಗಿ ಕಾಣದೇ ಇರಬಹುದು. ಇದಾಗ್ಯೂ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ದ್ರಾವಿಡ್ ವಿಶ್ಲೇಷಣೆ ನೀಡಿದರು. ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್ ತಮ್ಮ ಮಾತಿನ ನಡುವೆ ಬಳಸಲು ಮುಂದಾಗಿದ್ದ ಪದ ಯಾವುದೆಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
Jammy Sir trying to avoid using ‘Sexy’ for pak bowlers ? #indvPakpic.twitter.com/lT2AAmnNuv
— Mon (@4sacinom) September 3, 2022
ಹೀಗಾಗಿಯೇ ಇದೀಗ ದ್ರಾವಿಡ್ ಅವರ ಸುದ್ದಿಗೋಷ್ಠಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದಹಾಗೆ ರಾಹುಲ್ ದ್ರಾವಿಡ್ ಬಳಸಲು ಹಿಂಜರಿದ ಪದ ಯಾವುದೆಂಬ ಕುತೂಹಲ ನಿಮ್ಮಲ್ಲಿದ್ದರೆ ಉತ್ತರ- SE_Y (ದ್ರಾವಿಡ್ ಆ ಪದವನ್ನು ಬಳಸದಿರುವ ಕಾರಣ ಒಂದು ಅಕ್ಷರವನ್ನು ಹೊರತುಪಡಿಸಿ ಇಲ್ಲಿ ನೀಡಲಾಗಿದೆ).
Published On - 5:00 pm, Sun, 4 September 22