ಶಿಮ್ಲಾ: 2015ರಲ್ಲಿ ಆರ್ಸಿಬಿ ತಂಡದಲ್ಲಿದ್ದ ಸರ್ಫರಾಜ್ ಖಾನ್ ಅನ್ನೋ ಹುಡುಗನೊಬ್ಬ ರಾಜಸ್ಥಾನ್ ರಾಯಲ್ಸ್ ಬೌಲರ್ಗಳನ್ನ ಚೆಂಡಾಡಿಬಿಟ್ಟಿದ್ದ. ಕೇವಲ 20 ಎಸೆತಗಳಲ್ಲೇ 45 ರನ್ಗಳಿಸಿ ಅಬ್ಬರಿಸಿದ್ದ. ಆವತ್ತು ಈ ಸಿಡಿಲ ಮರಿಯ ಆರ್ಭಟ ಕಂಡು ಸ್ವತಃ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಏನ್ ಆಡ್ತೀಯಪ್ಪಾ ನೀನು ಅಂತಾ ಕೈ ಮುಗಿದಿದ್ರು.
ಆವತ್ತು ಈ ಸರ್ಫರಾಜ್ ಖಾನ್ ಆಟ ನೋಡಿದವರೆಲ್ಲ, ಈತ ಭಾರತದ ಭವಿಷ್ಯದ ಸ್ಟಾರ್ ಕ್ರಿಕೆಟಿಗ ಅಂತಾ ಮಾತನಾಡಿದ್ರು. ಆದ್ರೆ ನಂತರದಲ್ಲಿ ಸರ್ಫರಾಜ್ ಸುದ್ದಿಯಲ್ಲೂ ಇರಲಿಲ್ಲ, ಸದ್ದೂ ಮಾಡಲಿಲ್ಲ. ಯಾಕಂದ್ರೆ ಆರ್ಸಿಬಿ ಈತನನ್ನ ಕೈ ಬಿಟ್ಟಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಸೇರಿಕೊಂಡಿದ್ದ ಸರ್ಫರಾಜ್ಗೆ ಅಷ್ಟಾಗಿ ಸದ್ದು ಮಾಡಿಯೂ ಇರಲಿಲ್ಲ. ಆದ್ರೀಗ ರಣಜಿ ಕ್ರಿಕೆಟ್ನಲ್ಲಿ ಸರ್ಫರಾಜ್ ಖಾನ್, ಸಿಡಿದೆದ್ದ ಸಿಂಹದಂತೆ ಘರ್ಜಿಸೋದಕ್ಕೆ ಶುರುಮಾಡಿದ್ದಾನೆ. ಶತಕವೆಲ್ಲಾ ಲೆಕ್ಕಕ್ಕಿಲ್ಲ ಬಿಡಿ, ತ್ರಿಬಲ್ ಸೆಂಚುರಿ ಡಬಲ್ ಸೆಂಚುರಿ ಸಿಡಿಸಿ ಸದ್ದು ಮಾಡ್ತಿದ್ದಾನೆ.
ಯುಪಿ ವಿರುದ್ಧ ತ್ರಿಶತಕ.. ಹಿಮಾಚಲ ಪ್ರದೇಶ ವಿರುದ್ಧ ದ್ವಿಶತಕ:
ಆದ್ರೀಗ ಹಿಮಾಚಲ್ ಪ್ರದೇಶ ವಿರುದ್ಧದ ಪಂದ್ಯದಲ್ಲೂ ಅಬ್ಬರಿಸಿದ ಸರ್ಫರಾಜ್ ಖಾನ್, ಭರ್ಜರಿ ದ್ವಿಶತಕ ಸಿಡಿಸಿದ್ದಾನೆ. ಧರ್ಮಶಾಲಾದಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್ ಮಾಡೋದಕ್ಕೆ ನಿರ್ಧರಿಸಿತ್ತು. ಆದ್ರೆ 16 ರನ್ಗಳಿಸುವಷ್ಟರಲ್ಲೇ ಮುಂಬೈ ಪ್ರಮುಖ 3 ವಿಕೆಟ್ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಮುಂಬೈ ಪರ ದಿನದಾಟದಂತ್ಯವರೆಗೂ ಒಂಟಿ ಸಲಗದಂತೆ ಅಬ್ಬರಿಸಿದ ಸರ್ಫರಾಜ್, ಭರ್ಜರಿ ದ್ವಿಶತಕ ಸಿಡಿಸಿದ್ದಾನೆ.
ಹಿಮಾಚಲ ಪ್ರದೇಶ ವಿರುದ್ಧ 213 ಎಸೆತಗಳನ್ನ ಎದುರಿಸಿದ ಸರ್ಫರಾಜ್ ಖಾನ್, 32 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಹಿತ ಅಜೇಯ 226 ರನ್ಗಳಿಸಿದ್ದಾನೆ. ಇಂದು ಮತ್ತೊಂದು ತ್ರಿಶತಕ ಸಿಡಿಸೋ ಉತ್ಸಾಹದಲ್ಲಿದ್ದಾನೆ.
ಪಾಂಡಾ ಅಂತಾ ನಿಂದಿಸಿಕೊಳ್ಳುತ್ತಿದ್ದ ಸರ್ಫರಾಜ್ ಇಂದು ದಾಖಲೆ ವೀರ!
ಆದ್ರೆ ಸರ್ಫರಾಜ್ನನ್ನ ಆರ್ಸಿಬಿ ತಂಡ ಕೈ ಬಿಟ್ಟಿತ್ತು. ಸ್ವತಃ ನಾಯಕ ವಿರಾಟ್ ಕೊಹ್ಲಿಯೇ ಸರ್ಫರಾಜ್ಗೆ, ನೀನು ಮುಂದಿನ ಹಂತದ ಕ್ರಿಕೆಟ್ ಆಡೋದಕ್ಕೆ ಫಿಟ್ ಆಗಿಲ್ಲಾ ಅಂತಾ ನೇರವಾಗೇ ಹೇಳಿದ್ರು. ಅದು ನಿಜವೂ ಆಗಿತ್ತು. ತಿಂಡಿ ಪೋತನಾಗಿದ್ದ ಸರ್ಫರಾಜ್ಗೆ, ಫಿಟ್ನೆಸ್ ಬಗ್ಗೆ ಅರಿವೇ ಇರಲಿಲ್ಲ. ಹೀಗಾಗೇ ಡ್ರೆಸ್ಸಿಂಗ್ ರೂಮ್ನಲ್ಲಿ ಸರ್ಫರಾಜ್ಗೆ ಪಾಂಡಾ ಅಂತಾ ಕರೆಯುತ್ತಿದ್ರು.
ಈ ಎಲ್ಲಾ ನಿಂದನೆಗೆ ಒಂದು ದಿನ ಉತ್ತರ ಕೊಡಲೇಬೇಕು ಅಂತಾ ನಿರ್ಧರಿಸಿದ್ದ ಸರ್ಫರಾಜ್, ಪ್ರತಿನಿತ್ಯ ವರ್ಕೌಟ್ ಮಾಡೋದಕ್ಕೆ ಶುರುಮಾಡಿದ. ತಿಂಡಿಪೋತನಾಗಿದ್ದವ ಕ್ರಮಬದ್ಧವಾದ ಆಹಾರ ಪದ್ಧತಿಯನ್ನ ಅನುಸರಿಸತೊಡಗಿದ. ಕ್ರಿಕೆಟ್ ಕೌಶಲ್ಯದ ಜೊತೆಯಲ್ಲೇ ಫಿಟ್ನೆಸ್ ಮಹತ್ವವನ್ನ ಅರಿತ ಸರ್ಫರಾಜ್, ಇವತ್ತು ದಾಖಲೆ ವೀರನಾಗಿ ಹೊರಹೊಮ್ಮಿದ್ದಾನೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಭಾರತ ತಂಡವನ್ನ ಪ್ರತಿನಿಧಿಸೋ ಆಟಗಾರ ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ದಾನೆ.