ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ 20 ಪಂದ್ಯಾವಳಿಯ ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 14 ರನ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತೀಯ ತಂಡದಿಂದ 182 ರನ್ ಗಳಿಸುವ ಗುರಿಯ ಪ್ರತಿಕ್ರಿಯೆಯಾಗಿ, ಶ್ರೀಲಂಕಾದ ವೆಟರನ್ಸ್ ತಂಡವು 20 ಓವರ್‌ಗಳಲ್ಲಿ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಯೂಸುಫ್ ಮತ್ತು ಇರ್ಫಾನ್ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಅತಿದೊಡ್ಡ ಪಾತ್ರವಹಿಸಿದರು. ಈ ಜೋಡಿ ಬ್ಯಾಟಿಂಗ್ ಮತ್ತು ಬೌಲಿಂಗ್ನೊಂದಿಗೆ ಅದ್ಭುತ ಪ್ರದರ್ಶನ ನೀಡಿದರು. ಒಟ್ಟಾಗಿ ಅವರು 8 ಓವರ್‌ಗಳಲ್ಲಿ 55 ರನ್‌ಗಳನ್ನು ನೀಡಿ 4 ದೊಡ್ಡ ವಿಕೆಟ್‌ಗಳನ್ನು ಪಡೆದರು. ಯೂಸುಫ್ ಈ ಮೊದಲು 62 ರನ್ ಗಳಿಸಿ ಭಾರತಕ್ಕೆ ನೆರವಾದರು.
181 ರನ್‌ಗಳ ಬೃಹತ್ ಸ್ಕೋರ್
ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಲೆಜೆಂಡ್ಸ್ 20 ಓವರ್‌ಗಳಲ್ಲಿ 181 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಶ್ರೀಲಂಕಾ ತಂಡಕ್ಕೆ ವೇಗದ ಆರಂಭದ ಅಗತ್ಯವಿತ್ತು. ಇದನ್ನು ಅನುಭವಿ ಜೋಡಿಗಳಾದ ತಿಲಕರತ್ನ ದಿಲ್ಶನ್-ಸನತ್ ಜಯಸೂರ್ಯ ಮಾಡಿದರು. ಇಬ್ಬರೂ ಭಾರತೀಯ ಬೌಲರ್‌ಗಳ ಮೇಲೆ ಆರಂಭದದಿಂದಲೂ ಸವಾರಿ ಮಾಡಲು ಪ್ರಾರಂಭಿಸಿದರು.
2007 ರ ಮೊದಲ ಟಿ 20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಗಮನಾರ್ಹ ಕೊಡುಗೆ ನೀಡಿದ ಯೂಸುಫ್ ಮತ್ತು ಇರ್ಫಾನ್ ಕೂಡ ಇಲ್ಲಿ ತಮ್ಮ ಕೆಲಸವನ್ನು ಮಾಡಿದರು. ಬ್ಯಾಟ್‌ನೊಂದಿಗೆ ಅದ್ಭುತ ಪ್ರದರ್ಶನ ನೀಡಿದ ಯೂಸುಫ್, ಭಾರತಕ್ಕೆ ಬೌಲಿಂಗ್‌ನಲ್ಲೂ 21 ರನ್ಗಳಿಸಿದ ದಿಲ್ಶನ್ ವಿಕೆಟ್ ಕಬಳಿಸುವ ಮೂಲಕ ಮೊದಲ ಯಶಸ್ಸನ್ನು ತಂದುಕೊಟ್ಟರು.
ಪಠಾಣ್ ಬ್ರದರ್ಸ್ ಕಮಾಲ್!
ಇದರ ನಂತರ ಶ್ರೀಲಂಕಾ ಮುಂದಿನ 29 ರನ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂರು ವಿಕೆಟ್‌ಗಳು ಯೂಸುಫ್ ಮತ್ತು ಇರ್ಫಾನ್ ಅವರ ಖಾತೆಗೆ ಸೇರ್ಪಡೆಗೊಂಡವು. 43 ರನ್ಗಳಿಸಿದ್ದ ಜಯಸೂರ್ಯ ಯೂಸುಫ್ ಬಲೆಗೆ ಬಿದ್ದರೆ, ಚಮರ ಸಿಲ್ವಾ (2) ಮತ್ತು ಉಪುಲ್ ತರಂಗಾ (13) ವಿಕೆಟನ್ನು ಇರ್ಫಾನ್ ಪಡೆದರು.
ಆದರೆ, ಜಯಸಿಂಗ್ ಮತ್ತು ವೀರರತ್ನೆ ಭಾರತೀಯ ಬೌಲರ್‌ಗಳನ್ನು ಸರಿಯಾಗಿ ದಂಡಿಸಿ ಶ್ರೀಲಂಕಾ ತಂಡದ ಪಾಳಯದಲ್ಲಿ ಜಯದ ಆಸೆಯನ್ನು ಹೆಚ್ಚಿಸಿದರು. ಐದನೇ ವಿಕೆಟ್‌ಗೆ ಇಬ್ಬರೂ 64 ರನ್‌ಗಳ ತ್ವರಿತ ಪಾಲುದಾರಿಕೆಯನ್ನು ಹಂಚಿಕೊಂಡರು. ವೀರತ್ನ (15 ಎಸೆತಗಳಲ್ಲಿ 38 ರನ್) ಔಟಾದ ನಂತರ ಕೊನೆಯ ಓವರ್‌ನಲ್ಲಿ ಶ್ರೀಲಂಕಾಕ್ಕೆ 24 ರನ್‌ಗಳ ಅಗತ್ಯವಿತ್ತು, ಆದರೆ ಜಯಸಿಂಗ್ (40) ಗುರಿ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತ ಪಂದ್ಯವನ್ನು 14 ರನ್‌ಗಳಿಂದ ಗೆದ್ದುಕೊಂಡಿತು.
ತಂಡಕ್ಕೆ ನೆರವಾದ ಸಚಿನ್- ಯುವಿ ಬ್ಯಾಟಿಂಗ್
ಭಾರತವು ಕಳಪೆ ಆರಂಭವನ್ನು ಹೊಂದಿತ್ತು. ವೀರೇಂದ್ರ ಸೆಹ್ವಾಗ್ ಕೇವಲ 10 ರನ್ ಗಳಿಸಿ ಔಟಾದರು. ಆದರೆ, ಸಚಿನ್ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಕೇವಲ 35 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಭಾರತಕ್ಕೆ ಸಚಿನ್ ಮತ್ತು ಯುವರಾಜ್ ನೆರವಾದರು. ತಮ್ಮ ವೃತ್ತಿಜೀವನದಲ್ಲಿ ಕೆಲವು ಉತ್ತಮ ಪಾಲುದಾರಿಕೆಗಳನ್ನು ಮಾಡಿದ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಇಲ್ಲೂ ಸಹ ಅದೇ ಕೆಲಸವನ್ನು ಮಾಡಿದರು. ಈ ಜೋಡಿ 43 ರನ್‌ಗಳ ಜೊತೆಯಾಟ ಆಡಿತು. ಸಚಿನ್ 23 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 30 ರನ್ ಗಳಿಸಿದರು.
ಯುವರಾಜ್-ಯೂಸುಫ್ ಸಿಕ್ಸರ್ ಸುರಿಮಳೆ
ಇದರ ನಂತರ ಯುವರಾಜ್ ಮತ್ತು ಯೂಸುಫ್ ಮೈದಾನದಲ್ಲಿ ಬಿರುಗಾಳಿ ಸೃಷ್ಟಿಸಿದರು. ಇಬ್ಬರೂ ಶ್ರೀಲಂಕಾದ ಬೌಲರ್‌ಗಳನ್ನು ತೀವ್ರವಾಗಿ ದಂಡಿಸಿದರು. ತಿಲ್ಲಕರತ್ನೆ ದಿಲ್ಶಾನ್ ಅವರ ಓವರ್‌ನಲ್ಲಿ ಯುವರಾಜ್ ಸತತ 2 ಸಿಕ್ಸರ್ ಬಾರಿಸಿದರು. ನಂತರ ಯೂಸುಫ್ ಕೂಡ ಧಮ್ಮಿಕಾ ಪ್ರಸಾದ್ ಅವರ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಗಳಿಸಿದರು.
ಯುವರಾಜ್ ಕೇವಲ 35 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಪಂದ್ಯಾವಳಿಯಲ್ಲಿ ಯುವರಾಜ್ ಅವರ ಎರಡನೇ ಅರ್ಧಶತಕ ಇದು. ಅದೇ ಸಮಯದಲ್ಲಿ, ಯೂಸುಫ್ ಪಂದ್ಯಾವಳಿಯಲ್ಲಿ ತನ್ನ ಮೊದಲ ಅರ್ಧಶತಕವನ್ನು ಕೇವಲ 24 ಎಸೆತಗಳಲ್ಲಿ ಜಮಾ ಮಾಡಿದರು.
ಯುವರಾಜ್ 17 ಸಿಕ್ಸರ್
60 ರನ್ ಗಳಿಸಿದ್ದ ಯುವರಾಜ್ ಅವರನ್ನು ವೀರರತ್ನ ಔಟ್ ಮಾಡಿದರು. ಯುವರಾಜ್ ಕೇವಲ 60 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಾಯದಿಂದ ಈ 60 ರನ್ ಗಳಿಸಿದರು. ಈ ಇಡೀ ಪಂದ್ಯಾವಳಿಯಲ್ಲಿ ಯುವರಾಜ್ 17 ಸಿಕ್ಸರ್ ಬಾರಿಸಿದ್ದು, ಇದು ಅತ್ಯಧಿಕ ಸಿಕ್ಸರ್ಗಳ ಸಂಖ್ಯೆಯಾಗಿದೆ. ಯೂಸುಫ್ ಕೇವಲ 36 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯವಾಗಿ ಉಳಿದರು. ಯೂಸುಫ್ ತಮ್ಮ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದರು.
Published On - 12:59 pm, Mon, 22 March 21