ಯುವರಾಜ್ ಸಿಂಗ್.. ಟೀಂ ಇಂಡಿಯಾದ ಆಲ್ರೌಂಡರ್. ಯುವರಾಜ್ನನ್ನು ಆಲ್ರೌಂಡರ್ ಅನ್ನುವುದಕ್ಕಿಂತ ಒಬ್ಬ ಅತ್ತ್ಯುತ್ತಮ ಬ್ಯಾಟ್ಸ್ಮನ್ ಎನ್ನುವುದು ಒಳಿತು. ಏಕೆಂದರೆ ಯುವರಾಜ್ ತನ್ನ ಬ್ಯಾಟ್ನಿಂದ ತೋರಿದ ಕರಾಮತ್ತನ್ನು ತನ್ನ ಬೌಲಿಂಗ್ನಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ತೋರಲಿಲ್ಲ. ಹೀಗಾಗಿ ಯುವರಾಜ್ನನ್ನು ಆತನ ಯುಗದಲ್ಲಿ ಟೀಂ ಇಂಡಿಯಾದ ಭರವಸೆಯ ಆಟಗಾರ ಅಂತಲೂ ಕರೆಯುವ ಪ್ರತೀತಿ ಇತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿದ್ದ ಯುವರಾಜ್, ಟೀಂ ಇಂಡಿಯಾದ ಗೇಮ್ ಚೆಂಜರ್ ಆಗುತ್ತಿದ್ದರು. ತಮ್ಮ ಅಬ್ಬರದ ಬ್ಯಾಟಿಂಗ್ನಿಂದ ಪಂದ್ಯದ ದಿಕ್ಕನೇ ಬದಲಾಯಿಸುತ್ತಿದ್ದ ಈ ಆಟಗಾರ ತನ್ನ ನಿವೃತ್ತಿಯ ಬಳಿಕವೂ ತನ್ನ ಅಂದಿನ ಚಾರ್ಮ್ನ್ನು ಈಗಲೂ ಮುಂದುವರೆಸಿದ್ದಾರೆ.
ಯುವರಾಜ್ ಸಿಂಗ್ ಹಳೆಯ ಸ್ಫೋಟಕ ಬ್ಯಾಟಿಂಗ್
ಹೌದು.. ಛತ್ತೀಗಢದ ರಾಯ್‌ಪುರ್‌ನಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಟೂರ್ನಿಯಲ್ಲಿ ಯುವರಾಜ್ ಸಿಂಗ್ ಮತ್ತೆ ತಮ್ಮ ಹಳೆಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಾಯ್‌ಪುರ್‌ನ ಶಾಹಿದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 13ನೇ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಮತ್ತು ಸೌತ್ ಆಫ್ರಿಕಾ ಲೆಜೆಂಡ್ಸ್ ತಂಡಗಳು ಕಣಕ್ಕಿಳಿದಿದ್ದವು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಇಂಡಿಯಾ ಲೆಜೆಂಡ್ಸ್ಗೆ ತುಂಬಾ ಮಹತ್ವದಾಗಿತ್ತು.
ಇಂಡಿಯಾ ಲೆಜೆಂಡ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸೆಹ್ವಾಗ್ ವಿಕೆಟ್ ಆರಂಭದಲ್ಲಿಯೇ ಕಳೆದುಕೊಂಡರೂ ಸಚಿನ್ ತೆಂಡೂಲ್ಕರ್ ತಮ್ಮ ಹಳೆಯ ಆಟವನ್ನು ಇಲ್ಲಿ ಪ್ರದರ್ಶಿಸಿ ಅರ್ಧ ಶತಕ ಗಳಿಸಿದರು. ಕೇವಲ 37 ಎಸೆತಗಳಲ್ಲಿ 60 ರನ್ ಬಾರಿಸಿದ ಸಚಿನ್ ತೆಂಡೂಲ್ಕರ್, ಬದ್ರಿನಾಥ್ ಜೊತೆಗೆ 2ನೇ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟ ಆಡಿದರು. ಬದ್ರಿನಾಥ್ ಗಾಯಗೊಂಡು ನಿವೃತ್ತಿ ಪಡೆದರೆ ಸಚಿನ್ ಕ್ಯಾಚ್ ನೀಡಿ ನಿರ್ಗಮಿಸಿದರು.
ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ ಯುವಿ
ಈ ವೇಳೆ ಮೈದಾನಕ್ಕಿಳಿದ ಯುವಿ ತಮ್ಮ ಸ್ಪೋಟಕ ಆಟವನ್ನು ಪ್ರದರ್ಶಿಸಿದರು. ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ ಯುವಿ ವೃತ್ತಿ ಜೀವನದ ಹಳೆಯ ದಿನಗಳನ್ನು ಅಭಿಮಾನಿಗಳಿಗೆ ನೆನಪಿಸಿದರು. ಒಂದು ಓವರ್‌ನಲ್ಲಂತೂ ಸತತ ನಾಲ್ಕು ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಯುವರಾಜ್ ಸಿಂಗ್ ಕೇವಲ 22 ಎಸೆತಗಳಲ್ಲಿ 52 ರನ್ ಬಾರಿಸಿದರು.
4 ಎಸೆತಗಳಿಗೆ ಸತತ 4 ಸಿಕ್ಸರ್
ಬ್ರೂಯಿನ್ ಬೆವರಿಳಿಸಿದ ಯುವಿ ಯುವರಾಜ್ ಸ್ಫೋಟಕ ಬ್ಯಾಟಿಂಗ್ ಕಾಣಸಿಕ್ಕಿದ್ದು ಭಾರತದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ. ಆಫ್ರಿಕಾದ ಜಾಂಡರ್ ಡಿ ಬ್ರೂಯಿನ್ ಎಸೆದ ಆ ಓವರ್‌ನಲ್ಲಿ ಆರಂಭಿಕ ಎಸೆತವನ್ನು ಡಾಟ್ ಮಾಡಿದ ಯುವಿ ಅನಂತರ 4 ಎಸೆತಗಳಿಗೆ ಸತತ 4 ಸಿಕ್ಸರ್‌ಗಳನ್ನು ಬಾರಿಸಿ 2007 ರ ಟಿ20 ವಿಶ್ವಕಪ್ನ ಸೆಮಿ ಫೈನಲ್ ಪಂದ್ಯವನ್ನು ಮತ್ತೊಮ್ಮೆ ನೆನೆಪು ಮಾಡಿದರು. ಯುವರಾಜ್ಗೆ ಸಾಥ್ ನೀಡಿದ ಯೂಸೂಫ್ ಪಠಾಣ್ 10 ಎಸೆತಗಳಲ್ಲಿ 23 ರನ್ ಬಾರಿಸಿದರೆ ಮನ್‌ಪ್ರೀತ್ ಗೋನಿ 16 ರನ್ ಬಾರಿಸಿ ಯುವರಾಜ್ ಸಿಂಗ್ ಜೊತೆಗೆ ಅಜೇಯರಾಗುಳಿದರು.
ಇನ್ನು ಭಾರತ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕರು ಉತ್ತಮ ಪ್ರದರ್ಶನವನ್ನು ನೀಡಿದರು. ಮೊದಲ ವಿಕೆಟ್‌ಗೆ 87 ರನ್‌ಗಳ ಜೊತೆಯಾಟವನ್ನು ನೀಡಿದ ಆಂಡ್ರೋ ಪುಟಿಕ್ ಹಾಗೂ ಮಾರ್ನೆ ವಾನ್ ವ್ಯಾಕ್ ಜೋಡಿಯನ್ನು ಬೇರ್ಪಡಿಸಿದ ಬಳಿಕ ಇಂಡಿಯಾ ಲೆಜೆಂಡ್ಸ್ ತಂಡದ ಗೆಲುವು ಸನಿಹವಾಗಲು ಪ್ರಾರಂಭಿಸಿತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 148 ರನ್‌ಗಳಿಸಲಷ್ಟೇ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಶಕ್ತರಾದರು. ಈ ಮೂಲಕ ಭಾರತ ಲೆಜೆಂಡ್ಸ್ 56 ರನ್‌ಗಳ ಗೆಲುವು ಸಾಧಿಸಿದೆ.
Published On - 5:18 pm, Sun, 14 March 21