ಸೌತಾಂಪ್ಟನ್: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಅವರ ಧರ್ಮಪತ್ನಿ ಹಾಗೂ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಇಬ್ಬರೂ ಕ್ರಿಕೆಟ್ ಸಲುವಾಗಿಯೇ ಇಂಗ್ಲೆಂಡ್ನಲ್ಲಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಬುಮ್ರಾ ಟೀಮ್ ಇಂಡಿಯಾದ ಸದಸ್ಯರಾಗಿ ಅಲ್ಲಿಗೆ ಹೋಗಿದ್ದರೆ ಸಂಜನಾ ಅವರು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಶುಕ್ರವಾರದಿಂದ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಪ್ರಸರಣದ ಹಕ್ಕು ಪಡೆದಿರುವ ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ಪರವಾಗಿ ಕೆಲಸ ಮಾಡಲು ಹೋಗಿದ್ದಾರೆ. ಸಂಜನಾ, ಮದುವೆಗೆ ಮೊದಲು ಬುಮ್ರಾ ಅವರ ಸಂದರ್ಶನಗಳನ್ನು, ಆನ್ಲೈನ್ ಚ್ಯಾಟ್ಗಳನ್ನು ಮಾಡಿರಬಹುದು. ಆದರೆ ಮದುವೆಯಾದ ಮೇಲೆ ಅಂಥ ಸಂದರ್ಭ ಒದಗಿಬಂದಿರಲಿಲ್ಲ. ವಿವಾಹ ಬಂಧನಕ್ಕೊಳಗಾದ ನಂತರ ಕೆಲ ದಿನಗಳವರೆಗೆ ಅವರಿಬ್ಬರೂ ರಜೆ ಮೇಲಿದ್ದರು. ಹಾಗಾಗಿ ಕೆಮೆರಾ ಎದುರು ಅವರು ತಮ್ಮ ಪತಿಯೊಂದಿಗೆ ಹೇಗೆ ಮಾತಾಡುತ್ತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಕ್ರಿಕೆಟ್ ಪ್ರೇಮಿಗಳಿಗೆ ಖಂಡಿತವಾಗಿಯೂ ಇದೆ. ಅವರ ಈ ಆಸೆಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಪೂರೈಸಿದೆ.
ಹೌದು, ಸಂಜನಾ ತಮ್ಮ ಪತಿಯ ಸಂದರ್ಶನ ಮಾಡಿದ್ದಾರೆ. ಇದೇನೂ ಗಂಭೀರ ಸ್ವರೂಪದ ಸಂದರ್ಶನವಾಗಿರಲಿಲ್ಲ. ಅವರಿಬ್ಬರ ನಡುವೆ ಸುಮಾರು ಆರು ನಿಮಿಷಗಳ ಕಾಲ ಮಾತುಕತೆ ನಡೆದಿದೆ. ಅಸಲಿಗೆ ಬುಮ್ರಾ ಅವರಿಗೆ ಒಂದು ಐ-ಪ್ಯಾಡ್ ಕೊಟ್ಟು ಅದರಲ್ಲಿರುವ ಕೆಲ ಚಿತ್ರಗಳ ವಿವರಣೆಯನ್ನು ಸಂಜನಾ ಕೇಳಿದ್ದಾರೆ.
ಬುಮ್ರಾಗೆ ಸಂದರ್ಶನ ಇದೆ ಅಂತ ಹೇಳಲಾಗಿತ್ತೇ ಹೊರತು ಅದನ್ನು ಯಾರು ಮಾಡುತ್ತಿದ್ದಾರೆ ಅಂತ ತಿಳಿಸಿರಲಿಲ್ಲ. ಅದು ನಡೆಯುವ ಸ್ಥಳವನ್ನು ಪ್ರವೇಶಿಸಿದಾಗಲೇ ಅವರಿಗೆ ಅದು ಸಂಜನಾ ಅಂತ ಗೊತ್ತಾಗಿದ್ದು. ಬುಮ್ರಾರ ಹಾಸ್ಯಪ್ರಜ್ಞೆ ಚೆನ್ನಾಗಿರುವಂತಿದೆ. ತಮ್ಮ ಪತ್ನಿಯನ್ನು ನೋಡಿದ ಕೂಡಲೇ ಅವರು, ‘ಹಲೋ, ನಿಮ್ಮನ್ನು ಎಲ್ಲೋ ನೋಡಿರುವಂತಿದೆ!’ ಎನ್ನುತ್ತಾರೆ.
ಆಗಲೇ ಹೇಳಿದಂತೆ, ಐ-ಪ್ಯಾಡ್ನಲ್ಲಿ ಬುಮ್ರಾ ಅವರ ಇನ್ಸ್ಟಾಗ್ರಾಮ್ನಲ್ಲಿರುವ ಪ್ರಾಯಶಃ ಸಂಜನಾ ಅವರೇ ಲೋಡ್ ಮಾಡಿರಬಹುದಾದ ಪಿಕ್ಗಳ ಬಗ್ಗೆ ಆಕೆ ಕೇಳುತ್ತಾ ಹೋಗಿದ್ದಾರೆ ಮತ್ತು ಪ್ರಸ್ತುತವಾಗಿ ವಿಶ್ವದ ಶ್ರೇಷ್ಠ ವೇಗದ ಬೌಲರ್ಗಳಲ್ಲಿ ಒಬ್ಬೆರೆನಿಸಿಕೊಂಡಿರುವ ಬುಮ್ರಾ ನಿರ್ಭಿಡೆಯಿಂದ ಉತ್ತರಗಳನ್ನು ಹೇಳುತ್ತಾ ಸಾಗಿದ್ದಾರೆ.
ಬಾಲ್ಯದಲ್ಲಿ ತಮ್ಮ ಸಹೋದರಿಯೊಂದಿಗೆ ಆಡಿದ್ದು, ಸ್ಕೂಲ್ ಮತ್ತು ಕ್ಲಬ್ ಕ್ರಿಕೆಟ್ ಮತ್ತು ತಮ್ಮ ಮದುವೆಯ ದಿನದ ಬಗ್ಗೆ ಬುಮ್ರಾ ಮಾತಾಡಿದ್ದಾರೆ. ಈ ವಿಡಿಯೋವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಶೇರ್ ಮಾಡಿದೆ.
Playing with his sister, starring in school cricket and ‘the best day’ of his life.@SanjanaGanesan takes @Jaspritbumrah93 through some Insta Memories before the #WTC21 Final ? pic.twitter.com/k8FKUxgQJI
— ICC (@ICC) June 17, 2021
ತಮ್ಮ ಮದುವೆಯ ಪೋಟೋ ತೋರಿಸಿದಾಗ 27-ವರ್ಷ ವಯಸ್ಸಿನ ಬುಮ್ರಾ, ಅದನ್ನು ತಮ್ಮ ಬದುಕಿನ ಅತ್ಯುತ್ತಮ ದಿನವೆಂದು ಹೇಳಿದ್ದಾರೆ. ‘ಇದು ನನ್ನ ಬದುಕಿನ ಬೆಸ್ಟ್ ದಿನವಾಗಿದೆ, ನಮ್ಮ ಮದುವೆ ಇತ್ತೀಚಿಗೆ ನಡೆಯಿತು. ನಿನಗೂ ಗೊತ್ತಿರುವ ಹಾಗೆ ಅದು ನಮ್ಮ ಬದುಕನ ಅತ್ಯಂತ ಸಂತೋಷದ ದಿನ. ಆ ದಿನ ನನ್ನ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯಲಿದೆ,’ ಎಂದು ಬುಮ್ರಾ ಹೇಳಿದ್ದಾರೆ.
ಮಾತುಕತೆಯ ಆರಂಭದಲ್ಲೆ ಬುಮ್ರಾ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿ ಹಿಡಿದಿರುವ ಚಿತ್ರ ತೋರಿಸಲಾಗುತ್ತದೆ. ಅದು ಕಳೆದ ವರ್ಷ ಭಾರತ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಸತತವಾಗಿ ಎರಡನೇ ಬಾರಿ ಸರಣಿ ಗೆದ್ದ ನಂತರ ತೆಗೆದ ಚಿತ್ರ. ತಾನು ಗಬ್ಬಾದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆಡಲಿಲ್ಲವಾದರೂ ಭಾರತ ಸರಣಿ ಗೆದ್ದಿದ್ದು ಒಂದು ಮರೆಯಲಾಗದ ಅನುಭವ ಎಂದು ಅವರು ಬಣ್ಣಸಿದ್ದಾರೆ.
‘ಈ ಪಿಕ್ಚರ್, ಆಸ್ಟ್ರೇಲಿಯ ವಿರುದ್ಧ ನಾಲ್ಕನೇ ಟೆಸ್ಟ್ ಗೆದ್ದ ನಂತರ ತೆಗೆದದ್ದು, ಆ ಪಂದ್ಯದಲ್ಲಿ ನಾನು ಆಡಿರಲಿಲ್ಲ. ಯುವ ಆಟಗಾರರೆಲ್ಲ ತಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನ ನೀಡಿ ಭಾರತಕ್ಕೆ ಗೆಲುವು ದೊರಕಿಸಿದರು. ಅದು ಯಾವತ್ತೂ ಮರೆಯಲಾಗದಂಥ ಗೆಲುವು. ಬಹಳ ಸಂತೋಷದ ದಿನಗಳವು. ನಾವು ಆಸ್ಟ್ರೇಲಿಯಾದಲ್ಲಿ ಸತತವಾಗಿ ಎರಡನೇ ನಾರಿ ಸರಣಿ ಗೆದ್ದೆವು. ಅದು ಸದಾ ನೆನಪಿನಲ್ಲುಳಿಯುವ ದಿನ,’ ಎಂದು ಬುಮ್ರಾ ಹೇಳಿದ್ದಾರೆ.
ತಾವು ಜ್ಯೂನಿಯರ್ ಲೆವೆಲ್ನಲ್ಲಿ ಆಡಿದ ದಿನಗಳು, ಫಿಟ್ನಿಸ್ ಮತ್ತು ದೇಹವನ್ನು ಸಾಮುಗೊಳಿಸಲು ಪ್ರಯತ್ನಸಿದ್ದನ್ನು ಬುಮ್ರಾ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: WTC: ಜಸ್ಪ್ರೀತ್ ಬುಮ್ರಾರಂತೆ ಅವರ ಪತ್ನಿ ಸಂಜನಾ ಗಣೇಶನ್ ಸಹ ಇಂಗ್ಲೆಂಡ್ನಲ್ಲಿ ಮಿಷನ್ ಮೇಲಿದ್ದಾರೆ