Sourav Ganguly: ಮತ್ತೆರಡು ಸ್ಟೆಂಟ್ ಅಳವಡಿಸಿಕೊಂಡ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 16, 2021 | 10:21 PM

ಜನೆವರಿ 28ರಂದು ಸೌರವ್ ಗಂಗೂಲಿಯವರನ್ನು ವುಡ್​ಲ್ಯಾಂಡ್ಸ್ ಆಸ್ಪತ್ರೆಗೆ ಮರುದಾಖಲಿಸಿ ಎರಡನೇ ಸುತ್ತಿನ ಆಂಜಿಯೋಪ್ಲಾಸ್ಟಿಯನ್ನು ಮಾಡಲಾಗಿಯಿತು. ಅವರ ರಕ್ತನಾಳಗಳಲ್ಲಿ ಮತ್ತೆರಡು ಸ್ಟೆಂಟ್​ಗಳನ್ನು ಅಳವಡಿಸಲಾಗಿದೆ.

Sourav Ganguly: ಮತ್ತೆರಡು ಸ್ಟೆಂಟ್ ಅಳವಡಿಸಿಕೊಂಡ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಸೌರವ್ ಗಂಗೂಲಿ
Follow us on

ಕೊಲ್ಕತಾ: ಎರಡು ಸುತ್ತಿನ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾದ ನಂತರ ಅಸ್ಪತ್ರೆಯಿಂದ ಡಿಸ್ಚಾರ್ಜ್​ ಅಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ತಾವೀಗ ಫಿಟ್ ಮತ್ತು ಫೈನ್ ಆಗಿರುವುದಾಗಿ ಹೇಳಿದ್ದಾರೆ. ತಮ್ಮ ಆರೋಗ್ಯ ಸ್ಥಿತಿ ಎಲ್ಲರೂ ಅಂದುಕೊಂಡಿದ್ದಷ್ಟು ಕೆಟ್ಟದಾಗಿರಲಿಲ್ಲ ಎಂದು ಆಸ್ಪತ್ರೆಯಿಂದ ಹೊರಬಂದ ನಂತರ ಹೇಳಿರುವ ಗಂಗೂಲಿ ತಮಗಾಗಿ ಶುಭ ಹಾರೈಸಿದ, ಪ್ರಾರ್ಥಿಸಿದ ಎಲ್ಲ ಸ್ನೇಹಿತರಿಗೆ, ಅಭಿಮಾನಿಗಳಿಗೆ ಮತ್ತು ಬಂಧುವರ್ಗದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಜನೆವರಿ 2 ರಂದು ಜಿಮ್​ನಲ್ಲಿ ವ್ಯಾಯಾಮ ಮಾಡುವಾಗ ಎದೆನೋವು ಕಾಣಿಸಿಕೊಂಡ ನಂತರ ಕೊಲ್ಕತಾದ ವುಡ್​ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್​ರನ್ನು ಆಂಜಿಯೊಪ್ಲಾಸ್ಟಿ ಚಿಕಿತ್ಸೆಗೊಳಪಡಿಸಿ 5 ದಿನಗಳ ನಂತರ ಬಿಡುಗಡೆ ಮಾಡಲಾಗಿತ್ತು. ಆದರೆ, 20 ದಿನಗಳ ನಂತರ ಅವರು ಪುನಃ ಎದೆನೋವಿನ ಬಗ್ಗೆ ದೂರಿದಾಗ ಜನೆವರಿ 28ರಂದು ಅವರನ್ನು ಅದೇ ಆಸ್ಪತ್ರೆಗೆ ಮರುದಾಖಲಿಸಿ ಎರಡನೇ ಸುತ್ತಿನ ಆಂಜಿಯೋಪ್ಲಾಸ್ಟಿಯನ್ನು ಜನೆವರಿ 28ರಂದು ಖ್ಯಾತ ಹೃದ್ರೋಗ ತಜ್ಞ ದೇವಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮಾಡಲಾಯಿತು. ಅವರ ರಕ್ತನಾಳಗಳಲ್ಲಿ ಮತ್ತೆರಡು ಸ್ಟೆಂಟ್​ಗಳನ್ನು ಅಳವಡಿಸಲಾಗಿದೆ. ಅವರನ್ನು ಕೆಲ ದಿನಗಳ ಕಾಲ ಆಸ್ಪತ್ರೆಯ ಪರಿಣಿತ ವೈದ್ಯರ ನಿಗಾದಲ್ಲಿಟ್ಟು ಇಂದು ಮನೆಗೆ ಕಳಿಸಲಾಗಿದೆ.

‘ನನ್ನ ಆರೋಗ್ಯದಲ್ಲಿ ಈಗ ಭಾರೀ ಸುಧಾರಣೆಯಾಗಿದ್ದು ಯಾವುದೇ ಸಮಸ್ಯೆಯಿಲ್ಲ. ನಾನು ಸೇರಿದಂತೆ ಕುಟುಂಬದ ಸದಸ್ಯರೆಲ್ಲ ಕೊಂಚ ಗಾಬರಿಗೊಂಡಿದ್ದು ನಿಜ. ಆದರೆ ವಾಸ್ತವದಲ್ಲಿ ಆಂಥ ದೊಡ್ಡ ಸಮಸ್ಯೆಯೇನೂ ನನಗಿರಲಿಲ್ಲ. ನಾನು ಫಿಟ್ ಮತ್ತು ಫೈನ್ ಆಗಿದ್ದು ಕೆಲಸಕ್ಕೆ ಮರಳುತ್ತಿದ್ದೇನೆ,’ ಎಂದು ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಹೇಳಿದರು.

ರವಿಚಂದ್ರನ್ ಅಶ್ವಿನ್ ಎರಡನೇ ಟೆಸ್ಟ್ ಪಂದ್ಯದ ವ್ಯಕ್ತಿ

ಭಾರತ ಮತ್ತು ಇಂಗ್ಲೆಂಡ್ ನಡುವೆ ಜಾರಿಯಲ್ಲಿರುವ ಟೆಸ್ಟ್ ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಭಾರತಕ್ಕೆ ವಾಪಸ್ಸಾಗಿರುವ ಬಗ್ಗೆ ಗಂಗೂಲಿ ಸಂತಸ ವ್ಯಕಪಡಿಸಿದರು. ಟೆಸ್ಟ್ ಪಂದ್ಯ ನೋಡಲು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಬಗ್ಗೆ ಆಯೋಜಕರು ಮತ್ತು ಬಿಸಿಸಿಐನಲ್ಲಿ ಅತಂಕವಿತ್ತು. ಸರಣಿಯ ಮೊದಲ ಟೆಸ್ಟ್​ ಪಂದವನ್ನು ಪ್ರೇಕ್ಷಕರೇ ಇಲ್ಲದ ಚೆಪಾಕ್ ಮೈದಾನದಲ್ಲಿ ಆಡಲಾಗಿತ್ತು. ಆದರೆ, ಬಾರತ 317 ರನ್​ಗಳ ಅಧಿಕಾರಯುತ ಗೆಲುವು ಸಾಧಿಸಿದ ಎರಡನೇ ಟೆಸ್ಟ್​ಗೆ ತಮಿಳುನಾಡು ಕ್ರಿಕೆಟ್ ಸಂಸ್ಥೆಯು ಸ್ಟೇಡಿಯಂ ಸಾಮರ್ಥ್ಯದ ಶೇಕಡಾ 50ರಷ್ಟು ಟಿಕೆಟ್​ಗಳನ್ನು ಮಾರಾಟ ಮಾಡಿತು.

‘ಕ್ರಿಕೆಟ್ ಪ್ರೇಮಿಗಳು ಮೈದಾನಗಳಿಗೆ ವಾಪಸ್ಸಾಗುವುದನ್ನು ನೋಡಲು ನಾವು ಉತ್ಸುಕರಾಗಿದ್ದೆವು. ಪ್ರಥಮ ಟೆಸ್ಟ್​ನಿಂದಲೇ ಪ್ರೇಕ್ಷಕರನ್ನು ಮೈದಾನದೊಳಗೆ ಬಿಡುವ ನಿರ್ಧಾರ ನಾವು ಮಾಡಿಕೊಂಡಿದ್ದೆವಾದರೂ ಅ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ ಬಿಟ್ಟಿದ್ದೆವು. ಬಹಳ ದಿನಗಳ ನಂತರ ಕ್ರಿಕೆಟ್ ಪಂದ್ಯವನ್ನು ಅಯೋಜಿಸುತ್ತಿರುವುದರಿಂದ ಮೊದಲ ಟೆಸ್ಟ್​ ಮುಗಿದ ನಂತರ ಒಂದು ನಿರ್ಧಾರಕ್ಕೆ ಬರುತ್ತೇವೆ ಅಂತ ಸಂಸ್ಥೆ ಹೇಳಿತ್ತು. ಎರಡೂ ಪಂದ್ಯಗಳನ್ನು ಅವರು ಅತ್ಯಂತ ಯಶಸ್ವೀಯಾಗಿ ನಡೆಸಿಕೊಟ್ಟಿದ್ದಾರೆ,’ ಎಂದು ಗಂಗೂಲಿ ಹೇಳಿದರು.

Published On - 10:21 pm, Tue, 16 February 21