ಹೆಚ್ಚು ಕಡಿಮೆ ಒಂದು ದಶಕದವರೆಗೆ ಭೀಕರ ಸ್ವರೂಪದ ಕ್ರಿಕೆಟ್ ಕ್ಷಾಮ ಎದುರಿಸಿದ ಪಾಕಿಸ್ತಾನದಲ್ಲಿ ಕ್ರಮೇಣ ಅಂತರರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಸೆಪ್ಟೆಂಬರ್ 2019ರಿಂದ ಪ್ರಮುಖ ಕ್ರಿಕೆಟಿಂಗ್ ರಾಷ್ಟ್ರಗಳಲ್ಲದಿದ್ದರೂ ಟೆಸ್ಟ್ ಅಡುವ ಮಾನ್ಯತೆ ಪಡೆದಿರುವ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ಪಾಕಿಸ್ತಾನದ ಪ್ರವಾಸ ಕೈಗೊಂಡಿವೆ. ಈಗ ದಕ್ಷಿಣ ಆಫ್ರಿಕಾದ ಸರದಿ.
ಹೌದು, ಎರಡು ಟೆಸ್ಟ್ ಮತ್ತು ಮೂರು ಟಿ-20ಐ ಕ್ರಿಕೆಟ್ ಪಂದ್ಯಗಳ ಸರಣಿಯನ್ನಾಡಲು ದಕ್ಷಿಣ ಆಫ್ರಿಕ ತಂಡ ಮುಂದಿನ ತಿಂಗಳು ಅಂದರೆ ಜನವರಿ 2021 ರಲ್ಲಿ ಪಾಕಿಸ್ತಾನಕ್ಕೆ ಬರಲಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾದ ನಿರ್ದೇಶಕ ಗ್ರೀಮ್ ಸ್ಮಿತ್ ಸದರಿ ವಿಷಯವನ್ನು ದೃಢೀಕರಿಸಿದ್ದಾರೆ. ಈ ಆಫ್ರಿಕನ್ ರಾಷ್ಟ್ರವು ಪಾಕ್ ಪ್ರವಾಸ ಮಾಡುತ್ತಿರುವುದು ಬರೋಬ್ಬರಿ 14 ವರ್ಷಗಳ ನಂತರ!
ಓದುಗರಿಗೆ ನೆನಪಿರಬಹುದು, 2009ರಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ಲಾಹೋರ್ನಲ್ಲಿ ನಡೆಯುತ್ತಿದ್ದ ಟೆಸ್ಸ್ಟ್ ಪಂದ್ಯದ ಮೂರನೇ ದಿನ ಉಗ್ರಗಾಮಿಗಳು ಮೈದಾನದ ಮೇಲೆ ಗುಂಡಿನಮಳೆಗರೆದರು. ಆ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ 6 ಪೊಲೀಸರು, 2 ನಾಗರಿಕರು ಬಲಿಯಾದರಲ್ಲದೆ, ಶ್ರೀಲಂಕಾದ 6 ಆಟಗಾರರು, ಸಿಬ್ಬಂದಿ ವರ್ಗದ 2 ಮತ್ತು ಒಬ್ಬ ರಿಸರ್ವ್ ಅಂಪೈರ್ ಗಾಯಗೊಂಡಿದ್ದರು. ಹಲವಾರು ಉಗ್ರ ಸಂಘಟನೆಗಳಿಗೆ ಆಶ್ರಯ ಕಲ್ಪಿಸಿರುವ ಪಾಕಿಸ್ತಾನದಲ್ಲಿ ಅಂದಿನಿಂದ 2019 ರವರೆಗೆ ಅಂತರರಾಷ್ಡ್ರೀಯ ಕ್ರಿಕೆಟ್ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಇದನ್ನೂ ಓದಿ: ಭಾರತದಂಥ ಬೌಲಿಂಗ್ ಆಕ್ರಮಣ ನನ್ನ ಕ್ರಿಕೆಟ್ ಬದುಕಿನಲ್ಲಿ ನೋಡಿಲ್ಲ: ಟ್ರಾವಿಸ್ ಹೆಡ್
ದಕ್ಷಿಣ ಅಫ್ರಿಕ ಮತ್ತು ಪಾಕ್ ನಡುವೆ ಮೊದಲ ಟೆಸ್ಟ್ ಪಂದ್ಯ ಜನವರಿ 26ರಿಂದ 30ರವರೆಗೆ ಕರಾಚಿಯಲ್ಲಿ ಮತ್ತು ಎರಡನೇ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ಫೆಬ್ರವರಿ 4ರಿಂದ 8ರವರೆಗೆ ನಡೆಯಲಿದೆ. ಈ ಟೆಸ್ಟ್ಗಳು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಲಿವೆ. ಮೂರು ಟಿ20ಐ ಪಂದ್ಯಗಳು ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಡೆಯಲಿವೆ.
ದಕ್ಷಿಣ ಆಫ್ರಿಕ ಪ್ರವಾಸದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸ್ಮಿತ್, ‘ಹಲವಾರು ರಾಷ್ಟ್ರಗಳು ಪಾಕಿಸ್ತಾನ ಕ್ರಿಕೆಟ್ ಪ್ರವಾಸಕ್ಕೆ ಮುಂದೆ ಬರುತ್ತಿರುವುದು ಸಂತೋಷದ ಸಂಗತಿ. ಪಾಕಿಸ್ತಾನ ಅಪ್ಪಟ ಕ್ರಿಕೆಟ್-ವ್ಯಾಮೋಹದ ಹೆಮ್ಮೆಯ ರಾಷ್ಟ್ರವಾಗಿದೆ. ಮೂರು ವಾರಗಳ ಹಿಂದೆ, ದಕ್ಷಿಣ ಆಫ್ರಿಕಾದ ಭದ್ರತಾ ಪಡೆ ನಿಯೋಗವೊಂದು ಪಾಕಿಸ್ತಾನದಲ್ಲಿ ತಮ್ಮ ಆಟಗಾರರಿಗೆ ಒದಗಿಸಲಿರುವ ಸುರಕ್ಷತಾ ವ್ಯವಸ್ಥೆಯನ್ನು ಪರಿಶೀಲಿಸಲು ಹೋದಾಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅವರಿಗೆ ನೀಡಿದ ಅತಿಥಿ ಸತ್ಕಾರ ಮತ್ತು ಭದ್ರತೆ ವ್ಯವಸ್ಥೆ ಕುರಿತು ತೋರಿದ ಪಾರದರ್ಶಕತೆಗಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.
ಪಾಕ್ ಕ್ರಿಕೆಟ್ ಟೀಮಿನ ನಾಯಕ ಬಾಬರ್ ಆಜಂ ಕ್ರಿಕೆಟ್ ದಕ್ಷಿಣ ಆಫ್ರಿಕಾದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ‘ಕಳೆದೊಂದು ದಶಕದಲ್ಲಿ ನಾವು ಕ್ರಿಕೆಟ್ನಲ್ಲಿ ಸಾಧಿಸಿರುವ ಪ್ರಗತಿಯನ್ನು ವಿಶ್ವಕ್ಕೆ ತೋರಿಸಲು ನಮಗೀಗ ಒಳ್ಳೆಯ ಅವಕಾಶ’ ಎಂದು ಬಾಬರ್ ಹೇಳಿದ್ದಾರೆ.
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಮೊದಲು ಇಂಗ್ಲೆಂಡ್ ಸಹ ಅಕ್ಟೋಬರ್, 2021 ರಲ್ಲಿ ಪಾಕಿಸ್ತಾನ ಪ್ರವಾಸ ಬೆಳೆಸಿ ಮೂರು ಟಿ20ಐ ಪಂದ್ಯಗಳನ್ನಾಡಲಿದೆ.
ಕ್ರಿಕೆಟ್ಗೆ ಹಾರ್ದಿಕ್ ಪಾಂಡ್ಯರಂಥ ಸೂಪರ್ ಸ್ಟಾರ್ಗಳ ಅವಶ್ಯಕತೆಯಿದೆ: ಶೇನ್ ವಾರ್ನ್
Published On - 4:42 pm, Thu, 10 December 20