ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ಈ ದಶಕದ ಅತಿಶ್ರೇಷ್ಠ ಏಕದಿನ ಪಂದ್ಯಗಳ ಆಟಗಾರ: ಗವಾಸ್ಕರ್
ಭಾರತದ ರನ್ ಮಶೀನ್ ವಿರಾಟ್ ಕೊಹ್ಲಿ ಈ ದಶಕದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ಆವೃತ್ತಿಯ ಮೇಲೆ ಅತಿಹೆಚ್ಚು ಪ್ರಭಾವ ಬೀರಿರುವ ಆಟಗಾರನೆಂದು ಭಾರತದ ಮಾಜಿ ರನ್ ಮಶೀನ್ ಮತ್ತು ಖ್ಯಾತ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿನ ನಾಯಕ ವಿರಾಟ್ ಕೊಹ್ಲಿ ವಿಫಲರಾದಾಗ, ಐಪಿಎಲ್ನಲ್ಲಾಡುವುದು ಪತ್ನಿ ಜೊತೆ ಟೆರೇಸ್ ಮೇಲೆ ಆಡಿದಂತಲ್ಲ ಅಂತ ಕಾಮೆಂಟ್ ಮಾಡಿ ವಿರಾಟ್ ಪತ್ನಿ ಅನುಷ್ಕಾ ಶರ್ಮಳಿಂದ ತರಾಟೆಗೊಳಗಾಗಿದ್ದ ಭಾರತದ ಮಾಜಿ ಓಪನರ್ ಮತ್ತು ಈಗ ಕಾಮೆಂಟೇಟರ್ ಆಗಿರುವ ಸುನಿಲ್ ಗವಾಸ್ಕರ್, ತಮ್ಮ ವರಸೆಯನ್ನು ಬದಲಾಯಿಸಿ, ಒಂದು ದಿನದ ಪಂದ್ಯಗಳಿಗೆ ಸಂಬಂಧಿಸಿದಂತೆ ಈ ದಶಕದಲ್ಲಿ ಅತಿ ಹೆಚ್ಚು ಪ್ರಭಾವಶಾಲಿ ಅಥವಾ ಈ ಆವೃತ್ತಿಯ ಮೇಲೆ ಅತ್ಯಧಿಕ ಪ್ರಭಾವ ಬೀರಿದ ಆಟಗಾರನೆಂದರೆ ಕೊಹ್ಲಿ ಎಂದಿದ್ದಾರೆ.
ಹಾಗೆ ನೋಡಿದರೆ, ಕೊಹ್ಲಿಯ ಬ್ಯಾಟಿಂಗ್ ಅನ್ನು ಗವಾಸ್ಕರ್ ಹೊಗಳುತ್ತಲೇ ಇರುತ್ತಾರೆ. ಅದರೆ ಅವರ ಸಮಸ್ಯೆಯೆಂದರೆ ಬಾಯಿ ಚಪಲ. ಕೆಲವೊಮ್ಮೆ ಅಸಂಬದ್ಧ ಕಾಮೆಂಟ್ಗಳನ್ನು ಮಾಡಿ ಖುದ್ದು ಟೀಕೆಗೊಳಗಾಗುತ್ತಾರೆ. ಅದು ಅವರ ಪ್ರವೃತ್ತಿ, ಯಾರೂ ಬದಲಾಯಿಸಲಾಗದು.
ಒಂದು ದಿನದ ಪಂದ್ಯಗಳಲ್ಲಿ ಕೊಹ್ಲಿ ಈ ವರ್ಷ ಒಂದೇ ಒಂದು ಶತಕ ಬಾರಿಸದಿರುವುದು ಭಾರಿ ಚರ್ಚೆಗೆ ಗ್ರಾಸವಾದ ವಿಷಯ. ಆದರೆ, ಅವರು ಕಳಪೆಯಾಗೇನೂ ಆಡಿಲ್ಲವೆಂದು ಗವಾಸ್ಕರ್ ಹೇಳುತ್ತಾರೆ. ಆ ಸರಣಿಯಲ್ಲಿ ಅವರು ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ 12,000 ರನ್ ಪೂರೈಸಿ, ಭಾರತದ ಲೆಜೆಂಡರಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ದಾಖಲೆಯನ್ನು ಉತ್ತಮಪಡಿಸಿದರು.
ಕೊಹ್ಲಿಯವರ ಹೆಸರಿನಲ್ಲಿರುವ ಅಂಕಿ-ಅಂಶಗಳನ್ನು ಕೇವಲ ದಾಖಲೆಗಳ ದೃಷ್ಟಿಯಿಂದ ನೋಡದೆ, ಭಾರತದ ಗೆಲುವುಗಳಲ್ಲಿ ಅವು ಹೇಗೆ ನೆರವಾಗಿವೆ ಎನ್ನುವುದನ್ನು ಗಮನಿಸಬೇಕು ಅಂತ ಗವಾಸ್ಕರ್ ಹೇಳುತ್ತಾರೆ.
‘ಒಂದು ದಿನದ ಪಂದ್ಯಗಳ ಮೇಲೆ ವೈಯಕ್ತಿಕವಾಗಿ ಪ್ರಭಾವ ಬೀರಿರುವ ಆಟಗಾರನನ್ನು ಶೋಧಿಸುತ್ತಿರುವಿರಾದರೆ ಅದು ನಿಸ್ಸಂದೇಹವಾಗಿ ವಿರಾಟ್ ಕೊಹ್ಲಿ. ಭಾರತ ದೊಡ್ಡ ಮೊತ್ತಗಳನ್ನು ಚೇಸ್ ಮಾಡಿರುವ ಪಂದ್ಯಗಳಲ್ಲಿ ಕೊಹ್ಲಿಯ ಕಾಂಟ್ರಿಬ್ಯೂಷನ್ ಗಮಿನಿಸಿ, ಅದು ಅಭೂತಪೂರ್ವವಾದ ಸಾಧನೆ’ ಎಂದು ಸನ್ನಿ ಕ್ರೀಡಾ ಚ್ಯಾನೆಲೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
‘ಒಬ್ಬ ಆಟಗಾರ ಕ್ರೀಡೆಯ ಮೇಲೆ ಬೀರಿರುವ ಪ್ರಭಾವನನ್ನು ಮಾತ್ರ ನಾನು ಗಮನಿಸುತ್ತಿದ್ದೇನೆ, ಅವನು ಗಳಿಸಿದ ರನ್ ಅಥವಾ ಪಡೆದ ವಿಕೆಟ್ಗಳನ್ನು ಬಗ್ಗೆ ನಾನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಹಿನ್ನೆಲೆಯಿಂದ ನೋಡಿದ್ದೇಯಾದರೆ, ಕೊಹ್ಲಿ ಕಳೆದ ದಶಕದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ಆವೃತ್ತಿಯ ಮೇಲೆ ಮಾಡಿರುವ ಪ್ರಭಾವ ಊಹೆಗೆ ನಿಲುಕದಂಥದ್ದು’ ಎಂದು ಗವಾಸ್ಕರ್ ಹೇಳಿದ್ದಾರೆ.
ಗವಾಸ್ಕರ್‌ಗೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಳಿಂದ ಹಿಗ್ಗಾಮುಗ್ಗಾ ತರಾಟೆ, ಯಾಕ್ ಗೊತ್ತಾ?
Published On - 8:52 pm, Thu, 10 December 20