ವೇತನ ಜಾಸ್ತಿ ಮಾಡದಿದ್ದರೆ ಒಪ್ಪಂದಕ್ಕೆ ಸಹಿ ಹಾಕಲ್ಲ; ನಿಮ್ಮ ಕಳಪೆ ಆಟಕ್ಕೆ ಇದೇ ಜಾಸ್ತಿ ಆಯ್ತು; ಶ್ರೀಲಂಕಾ ಕ್ರಿಕೆಟ್‌ ಜಟಾಪಟಿ

|

Updated on: Jun 06, 2021 | 4:42 PM

ಅರವಿಂದ್ ಡಿ ಸಿಲ್ವಾ ಅವರು ಹೊಸ ಕಾರ್ಯಕ್ಷಮತೆ-ಸಂಬಂಧಿತ ವೇತನ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು, ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡದ ಕಳಪೆ ಸಾಧನೆಯ ನಂತರ ಮಂಡಳಿಯು ಈ ನಿರ್ಧಾರ ತೆಗೆದುಕೊಳ್ಳಲು ಒತ್ತಾಯಿಸಲಾಯಿತು ಎಂದಿದ್ದಾರೆ.

ವೇತನ ಜಾಸ್ತಿ ಮಾಡದಿದ್ದರೆ ಒಪ್ಪಂದಕ್ಕೆ ಸಹಿ ಹಾಕಲ್ಲ; ನಿಮ್ಮ ಕಳಪೆ ಆಟಕ್ಕೆ ಇದೇ ಜಾಸ್ತಿ ಆಯ್ತು; ಶ್ರೀಲಂಕಾ ಕ್ರಿಕೆಟ್‌ ಜಟಾಪಟಿ
ಶ್ರೀಲಂಕಾ ತಂಡ
Follow us on

ಶ್ರೀಲಂಕಾ ಕ್ರಿಕೆಟ್‌ನಲ್ಲಿ ಆಟಗಾರರು ಮತ್ತು ಮಂಡಳಿಯ ನಡುವಿನ ವಿವಾದ ಅದ್ಯಾಕೋ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಒಪ್ಪಂದಕ್ಕೆ ಸಂಬಂಧಿಸಿದಂತೆ ಆಟಗಾರರು ಶ್ರೀಲಂಕಾ ಕ್ರಿಕೆಟ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದಾರೆ. ಕ್ರಿಕೆಟ್ ಮಂಡಳಿಯ ಕಡೆಯಿಂದ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿ ರಾಷ್ಟ್ರೀಯ ತಂಡದ ಆಟಗಾರರು ವಾರ್ಷಿಕ ಕೇಂದ್ರ ಒಪ್ಪಂದಗಳಿಗೆ ಸಹಿ ಹಾಕಲು ನಿರಾಕರಿಸಿದ್ದಾರೆ. ಜೊತೆಗೆ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ನೀಡುವ ಒಪ್ಪಂದಗಳು ತಮ್ಮ ಇಚ್ಚೆಯಂತೆ ಇಲ್ಲ ಹಾಗೆಯೇ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಬಹುತೇಕ ಎಲ್ಲ ಹಿರಿಯ ಆಟಗಾರರು ಮಂಡಳಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಶ್ರೀಲಂಕಾ ಕ್ರಿಕೆಟ್ 24 ಪ್ರಮುಖ ಆಟಗಾರರಿಗೆ ನಾಲ್ಕು ವಿಭಾಗಗಳ ಅಡಿಯಲ್ಲಿ ಒಪ್ಪಂದಗಳನ್ನು ನೀಡಲಾಗಿದೆಯೆಂದು ಘೋಷಿಸಿದೆ. ಹಾಗೆಯೇ ಆಟಗಾರರಿಗೆ ಸಹಿ ಹಾಕಲು ಜೂನ್ 3 ರ ಗಡುವನ್ನು ನೀಡಲಾಯಿತು. ಆಟಗಾರರು ಹೊರಡಿಸಿದ ಸಾಮೂಹಿಕ ಹೇಳಿಕೆಯ ಪ್ರಕಾರ, ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಅವರು ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಧರಿಸಿದ್ದಾರೆ. ಇದರೊಂದಿಗೆ, ಭವಿಷ್ಯದಲ್ಲಿ ಅವರು ಬೇರೆ ಯಾವುದೇ ಪ್ರವಾಸಕ್ಕೂ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇತರ ದೇಶಗಳಿಗೆ ಹೋಲಿಸಿದರೆ ಸಂಬಳ ಕಡಿಮೆ
ಈ ಒಪ್ಪಂದದ ಪ್ರಕಾರ ಆಟಗಾರರಿಗೆ ವಾರ್ಷಿಕವಾಗಿ 70,000 ದಿಂದ 100,000 ಡಾಲರ್‌ ನೀಡುವುದಾಗಿ ಹೇಳಲಾಗಿದೆ. ಇದರಲ್ಲಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಧನಂಜಯ್ ಡಿ ಸಿಲ್ವಾ ಅವರು ವಾರ್ಷಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಭಾಗದಲ್ಲಿ ಮೊದಲ(100,000 ಡಾಲರ್) ಸ್ಥಾನ ಪಡೆದರು. ಕಳೆದ ತಿಂಗಳು ವಿವಾದ ಮತ್ತು ಮಾತುಕತೆಗಳ ನಂತರ, ಆಟಗಾರರು ತಮ್ಮ ಪ್ರಸ್ತಾವಿತ ಸಂಭಾವನೆ ‘ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಕ್ರಿಕೆಟ್ ಅಸೋಸಿಯೇಶನ್ (ಎಫ್‌ಐಸಿಎ)’ ಯಿಂದ ಪಡೆದ ಮಾಹಿತಿಯ ಪ್ರಕಾರ ಇತರ ದೇಶಗಳ ಆಟಗಾರರಿಗೆ ಪಾವತಿಸುವ ಮೊತ್ತಕ್ಕಿಂತ ಮೂರು ಪಟ್ಟು ಕಡಿಮೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ಸರಣಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ
ಶ್ರೀಲಂಕಾ ಇಂಗ್ಲೆಂಡ್ ಪ್ರವಾಸ ಮಾಡಬೇಕಾಗಿದ್ದು, ತಂಡವು ಮೂರು ಏಕದಿನ ಪಂದ್ಯಗಳನ್ನು ಮತ್ತು ಜೂನ್ 18 ರಿಂದ ಜುಲೈ 4 ರವರೆಗೆ ಅನೇಕ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ. ಆದಾಗ್ಯೂ, ಆಟಗಾರರು ದೇಶಕ್ಕಾಗಿ ಆಡಲು ನಿರಾಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಸಮಯದಲ್ಲಿ, ಅವರು ಒಪ್ಪಂದಕ್ಕೆ ಸಹಿ ಮಾಡದಿದ್ದರೂ ಮತ್ತು ಎಸ್‌ಎಲ್‌ಸಿ ಅವರಿಗೆ ಸಂಬಳ ನೀಡಲು ನಿರಾಕರಿಸಿದರೂ ಸಹ ಪಂದ್ಯಾವಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆಟಗಾರರು ಸ್ಪಷ್ಟಪಡಿಸಿದ್ದಾರೆ.

ಕಳಪೆ ಸಾಧನೆಯ ನಂತರ ಈ ನಿರ್ಧಾರ
ತಮ್ಮ ಕೇಂದ್ರ ಒಪ್ಪಂದದ ಮೊತ್ತವನ್ನು ಎಸ್‌ಎಲ್‌ಸಿ ಸಾರ್ವಜನಿಕವಾಗಿ ಬಹಿರಂಗಪಡಿಸಿರುವುದು ನಮಗೆ ಸರಿ ಕಾಣುತ್ತಿರಲ್ಲ ಎಂದು ಹಿರಿಯ ಆಟಗಾರರು ಹೇಳಿದ್ದಾರೆ. ಎಸ್‌ಎಲ್‌ಸಿಯ ನಿರ್ಧಾರವು ಆಟಗಾರರ ಆತ್ಮವಿಶ್ವಾಸ ಮತ್ತು ಮನಸ್ಸಿನ ಶಾಂತಿಗೆ ಧಕ್ಕೆ ತಂದಿದೆ ಎಂದು ಆಟಗಾರರು ಹೇಳಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಅಧ್ಯಕ್ಷ ಅರವಿಂದ್ ಡಿ ಸಿಲ್ವಾ ಅವರು ಹೊಸ ಕಾರ್ಯಕ್ಷಮತೆ-ಸಂಬಂಧಿತ ವೇತನ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು, ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡದ ಕಳಪೆ ಸಾಧನೆಯ ನಂತರ ಮಂಡಳಿಯು ಈ ನಿರ್ಧಾರ ತೆಗೆದುಕೊಳ್ಳಲು ಒತ್ತಾಯಿಸಲಾಯಿತು ಎಂದಿದ್ದಾರೆ.