ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಮೇ 23 ರಂದು ಬಂಧಿಸಿದ್ದಾರೆ. ಸಹ ಕುಸ್ತಿಪಟು ಸಾಗರ್ ಧಂಖರ್ ಅವರನ್ನು ಕೊಂದ ಆರೋಪ ಸುಶೀಲ್ ಮೇಲಿದೆ. ಸುಶೀಲ್ ಕುಮಾರ್ ಪ್ರಸ್ತುತ ಆರು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ವಿಷಯ ಬೆಳಕಿಗೆ ಬಂದ ನಂತರ, ಭಾರತೀಯ ಕ್ರೀಡೆ ಮತ್ತೊಮ್ಮೆ ಕಳಂಕಿತವಾಗಿದೆ. ಆದರೆ 33 ವರ್ಷಗಳ ಹಿಂದೆ ಇಂತಹ ಘಟನೆ ನಡೆದಿದ್ದು, ರಸ್ತೆಯಲ್ಲಿ ನಡೆದ ಈ ಪ್ರಕರಣದಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿಯಲ್ಲಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಲ್ಲಲಾಗಿತ್ತು. ಈ ಪ್ರಕರಣದ ಆರೋಪಿ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಆಗಿದ್ದರು. ಭಾರತದ ಮಾಜಿ ಕ್ರಿಕೆಟಿಗ ಮತ್ತು ಈಗ ಕಾಂಗ್ರೆಸ್ ಮುಖಂಡ ನವಜೋತ್ ಸಿದ್ದು ಅವರ ಸ್ನೇಹಿತನೊಂದಿಗೆ ಸೇರಿ ಕಾರು ಸವಾರನನ್ನು ಕೊಂದ ಆರೋಪವಿದೆ. ಆದಾಗ್ಯೂ, ಅವರನ್ನು ಆರಂಭದಲ್ಲಿ ಆರೋಪ ಮುಕ್ತಗೊಳಸಿಲಾಗಿತ್ತು. ಆದರೆ 2018 ರಲ್ಲಿ ಈ ಪ್ರಕರಣ ಮತ್ತೆ ಮರುಜೀವ ಪಡೆದಿತ್ತು ಮತ್ತು ಕೊಲೆ ಪ್ರಕರಣದಲ್ಲಿ ಸಿದ್ದುನನ್ನು ತಪ್ಪಿತಸ್ಥರೆಂದು ಪರಿಗಣಿಸಲಾಯಿತು.
ಏನದು ಸಿದ್ದು ಕೊಲೆ ಪ್ರಕರಣ?
ಡಿಸೆಂಬರ್ 27, 1988 ರಂದು ನವಜೋತ್ ಸಿಂಗ್ ಸಿದ್ದು ತನ್ನ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಅವರೊಂದಿಗೆ ಪಟಿಯಾಲಾದ ಶೆರನ್ವಾಲಾ ಗೇಟ್ ಕ್ರಾಸಿಂಗ್‌ನಲ್ಲಿ ತನ್ನ ಮಾರುತಿ ಜಿಪ್ಸಿಯಲ್ಲಿ ಕುಳಿತಿದ್ದರು. ಈ ಸಮಯದಲ್ಲಿ, ಮಾರುತಿ ಕಾರಿನಲ್ಲಿ ಬಂದ ಗುರ್ನಮ್ ಸಿಂಗ್, ಜಿಪ್ಸಿಯಲ್ಲಿ ಕುಳಿತ ಸಿದ್ದುಗೆ ದಾರಿ ಬಿಡಿ ಎಂದು ಕೇಳಿದರು. ಈ ವಿಚಾರದಲ್ಲಿ ಇಬ್ಬರಿಗೂ ಗಲಾಟೆ ಶುರುವಾಗಿತ್ತು. ಸಿಧು, ಗುರ್ನಮ್ ಸಿಂಗ್ ತಲೆಗೆ ಹೊಡೆದಿದ್ದರು. ನಂತರ ಗುರ್ನಮ್ ಸಿಂಗ್ ಆಸ್ಪತ್ರೆಯಲ್ಲಿ ನಿಧನರಾದರು. ಈ ಸಂದರ್ಭದಲ್ಲಿ, ಇಬ್ಬರ ಮೇಲೂ ಪ್ರಕರಣಗಳು ದಾಖಲಾಗಿದ್ದವು. ವಿಚಾರಣಾ ನ್ಯಾಯಾಲಯದಲ್ಲಿ ಕೊಲೆ ಪ್ರಕರಣವನ್ನೂ ವಿಚಾರಣೆಗೆ ಒಳಪಡಿಸಲಾಯಿತು. ಆದರೆ 1999 ರಲ್ಲಿ ವಿಚಾರಣಾ ನ್ಯಾಯಾಲಯ ಅವರಿಬ್ಬರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿತು. ಸಾಕ್ಷ್ಯಾಧಾರಗಳ ಕೊರತೆಯಿಂಧಾಗಿ ಕೋರ್ಟ್ ಈ ತೀರ್ಪು ನೀಡಿತ್ತು.
ಸಿಧು ತಪ್ಪಿತಸ್ಥರೆಂದು ಹೈಕೋರ್ಟ್ ತೀರ್ಪು
ಈ ನಿರ್ಧಾರದ ವಿರುದ್ಧ 2002 ರಲ್ಲಿ ಪಂಜಾಬ್ ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಡಿಸೆಂಬರ್ 2006 ರಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಿದ್ದು ಮತ್ತು ಅವನ ಸ್ನೇಹಿತ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಆದರೆ ಈ ಅಪರಾಧವನ್ನು ಉದ್ದೇಶಪೂರ್ವಕವಲ್ಲ ಎಂದು ಪರಿಗಣಿಸಲಾಗಿತ್ತು. ಸಿದ್ಧುಗೆ ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಆಗ ಅವರು ಅಮೃತಸರದ ಬಿಜೆಪಿ ಸಂಸದರಾಗಿದ್ದರು. ನಂತರ ಅರುಣ್ ಜೇಟ್ಲಿ ಅವರು ಸಿಧು ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಿದರು. ನಂತರ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ತಡೆಹಿಡಿದಿದೆ.
ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ, ಗುರ್ನಮ್ ಸಿಂಗ್ ಹೃದಯಾಘಾತದಿಂದ ನಿಧನರಾದರು ಎಂದು ಸಿದ್ದು ಪರವಾಗಿ ಪ್ರತಿವಾದದಲ್ಲಿ ಹೇಳಲಾಗಿತ್ತು. ನಂತರ 2018 ರಲ್ಲಿ ಪ್ರಕರಣದ ಫಲಿತಾಂಶವು ಬಂದಿತು, ಇದರಲ್ಲಿ ಸಿದ್ದುನನ್ನು ಹತ್ಯೆಯ ಆರೋಪದಿಂದ ಖುಲಾಸೆಗೊಳಿಸಲಾಗಿದೆ. ಆದಾಗ್ಯೂ, ಅವರಿಗೆ ನ್ಯಾಯಾಲಯವು 1000 ರೂ.ಗಳ ದಂಡವನ್ನು ವಿಧಿಸಿತು. ಇದರ ನಂತರ, ಸೆಪ್ಟೆಂಬರ್ 2018 ರಲ್ಲಿ, ಸುಪ್ರೀಂ ಕೋರ್ಟ್ ಮತ್ತೊಮ್ಮೆ ತನ್ನ ನಿರ್ಧಾರವನ್ನು ಪರಿಶೀಲಿಸಲು ನಿರ್ಧರಿಸಿತು. ಆದಾಗ್ಯೂ, ಈ ವಿಷಯದಲ್ಲಿ ಹೆಚ್ಚಿನ ನವೀಕರಣ ಕಂಡು ಬಂದಿಲ್ಲ.
ಈ ವಿಭಾಗಗಳಲ್ಲಿ ಸುಶೀಲ್ ಮೇಲೆ ಪ್ರಕರಣ
ಸುಶೀಲ್ ಕುಮಾರ್ ಪ್ರಕರಣ ಹೆಚ್ಚು ಕಡಿಮೆ ಸಿದ್ದು ಪ್ರಕರಣಕ್ಕೆ ಹೋಲುತ್ತದೆ. ಪೊಲೀಸರು ಸುಶೀಲ್ ವಿರುದ್ಧ ಕೊಲೆ ಮತ್ತು ಸಂಬಂಧಿತ ವಿಭಾಗಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸುಶೀಲ್ ವಿರುದ್ಧ ದೆಹಲಿ ಪೊಲೀಸರು ಸೆಕ್ಷನ್ 302 (ಕೊಲೆ), 308 ( ಹತ್ಯೆಗೆ ಯತ್ನ), 365 (ಅಪಹರಣ ಅಥವಾ ಕೊಲೆ ಯತ್ನ), 325 (ಸ್ವಯಂಪ್ರೇರಣೆಯಿಂದ ತೀವ್ರ ದಾಳಿ ಮಾಡಿರುವುದು), 323 (ಉದ್ದೇಶಪೂರ್ವಕವಾಗಿ ಗಾಯಗೊಳಿಸಿದ್ದಾರೆ) 341 (ಸಂಯಮ ಕಳೆದುಕೊಂಡು), 506 (ಕ್ರಿಮಿನಲ್ ಬೆದರಿಕೆ), 269, 188, 120-ಬಿ ಮತ್ತು 34 ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಗರ್ ಅವರನ್ನು ಥಳಿಸಿರುವ ಘಟನೆಯ ಸಂಬಂಧಿತವಾಗಿ ಸಿಕ್ಕಿರುವ ವಿಡಿಯೋದಲ್ಲಿ ಸುಶೀಲ್ ಹಲ್ಲೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ ಎಂದು ಪೊಲೀಸರು ಹೇಳುತ್ತಾರೆ. ಸುಶೀಲ್, ಸಾಗರ್ ಅವರನ್ನು ಹೊಡೆಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಷಯದಲ್ಲಿ ನ್ಯಾಯಾಲಯದ ನಿಲುವು ಏನು ಮತ್ತು ಪೊಲೀಸರು ಪ್ರಕರಣವನ್ನು ಹೇಗೆ ಪ್ರಸ್ತುತಪಡಿಸುತ್ತಾರೆ ಎಂಬುದನ್ನು ಈಗ ನೋಡಬೇಕಾಗಿದೆ.