ಶುಕ್ರವಾರದಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ಭಾರತ ಟೀಮಿನ ಬೌಲರ್ಗಳನ್ನು ಮನಬಂದಂತೆ ದಂಡಿಸಿ 66 ಎಸೆತಗಳಲ್ಲಿ 105 ರನ್ ಬಾರಿಸಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ತಾನು ಫಾರ್ಮ್ ಮತ್ತು ಲಯವನ್ನು ವಾಪಸ್ಸು ಪಡೆದುಕೊಂಡಿರುವುದಾಗಿ ಹೇಳಿದ್ದಾರೆ.
ಸಿಡ್ನಿಯಲ್ಲಿ ನಿನ್ನೆ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಸ್ಮಿತ್, ನಾಯಕ ಆರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ 156 ರನ್ಗಳ ಭರ್ಜರಿ ಜೊತೆಯಾಟದಲ್ಲಿ ಪಾಲ್ಗೊಂಡು ಉತ್ತಮ ಅಡಿಪಾಯ ಒದಗಿಸಿದ್ದರಿಂದ ಕ್ರೀಸಿಗೆ ಹೋಗುವಾಗ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡವಿರಲಿಲ್ಲವೆಂದು ಹೇಳಿದರು.
‘‘ಟೀಮಿಗೆ ಉತ್ತಮ ಆರಂಭವೊದಗಿಸಿದ ಫಿಂಚ್ ಮತ್ತು ವಾರ್ನರ್ಗೆ ನನ್ನ ಯಶಸ್ಸಿನ ಶ್ರೇಯಸ್ಸು ಸಲ್ಲಬೇಕು. ಕ್ರೀಸಿಗೆ ಹೋಗುವಾಗ ನನ್ನ ಮೇಲೆ ಒತ್ಡವೇ ಇರಲಿಲ್ಲ. ಚೆಂಡನ್ನು ಗುರುತಿಸಿ ಅದನ್ನು ಬಾರಿಸಿವುದು ನನಗೆ ಕಷ್ಟವಾಗಲಿಲ್ಲ. ಬೇರೆ ಪರಿಸ್ಥಿತಿಗಳಲ್ಲಿ ನಾನು ಅನುಭವಿಸುತ್ತಿದ್ದ ಒತ್ತಡ ನಿನ್ನೆ ಖಂಡಿತವಾಗಿಯೂ ನನ್ನ ಮೇಲಿರಲಿಲ್ಲ. ಇನ್ನಿಂಗ್ಸ್ ಆರಂಭದಲ್ಲೇ ತಂಡ ವಿಕೆಟ್ಗಳನ್ನು ಕಳೆದುಕೊಂಡರೆ ಒತ್ತಡ ತಾನಾಗೇ ಬಂದುಬಿಡುತ್ತದೆ, ಅಂಥ ಸಂದರ್ಭಗಳನ್ನು ನಾನು ಬಹಳ ಸಲ ಎದುರಿಸಿದ್ದೇನೆ. ಉತ್ತಮ ಫಾರ್ಮ್ನಲ್ಲಿದ್ದರೂ ಹೊಡೆತಗಳಿಗೆ ಕಡಿವಾಣ ಹಾಕಿ, ಇನ್ನಿಂಗ್ಸ್ ಕಟ್ಟುವ ಕೆಲಸವನ್ನು ನಾನು ಮಾಡುತ್ತಿದ್ದೆ. ಆದರೆ ಇವತ್ತಿನ ಪರಿಸ್ಥಿತಿ ನಾನು ನಿರ್ಭೀತಿಯಿಂದ ಆಕ್ರಮಣಕಾರಿ ಆಟವಾಡಲು ಪೂರಕವಾಗಿತ್ತು. ಯಾವ ಬೌಲರ್ನನ್ನು ಟಾರ್ಗೆಟ್ ಮಾಡಬೇಕು ಎಂದು ಮೊದಲೇ ನಿಶ್ಚಯಿಸಿಕೊಂಡಿದ್ದೆ,’’ ಎಂದು ಸ್ಮಿತ್ ಹೇಳಿದರು.
ನಿರ್ದಿಷ್ಟವಾದ ಬೌಲರನನ್ನು ಸ್ಮಿತ್ ಟಾರ್ಗೆಟ್ ಮಾಡಿಕೊಂಡಿದ್ದರೂ ಭಾರತದ ಎಲ್ಲ ಬೌಲರ್ಗಳು ಅವರಿಂದ ತೀವ್ರ ದಂಡನೆಗೊಳಗಾದರು. ಟಿ20 ಕ್ರಿಕೆಟ್ ತನ್ನ ಬ್ಯಾಟಿಂಗ್ ಶೈಲಿಯ ಮೇಲೆ ಪ್ರಭಾವ ಬೀರಿದೆ ಎಂದು ಸ್ಮಿತ್ ಹೇಳಿದರು.
‘‘ಇನ್ನಿಂಗ್ಸ್ ಕಟ್ಟಿ ಬೆಳೆಸುವ ನನ್ನ ಬ್ಯಾಟಿಂಗ್ ಶೈಲಿಯ ಮೇಲೆ ಟಿ20 ಕ್ರಿಕೆಟ್ ಭಾರಿ ಪ್ರಬಾವ ಬೀರಿದೆ. ಮೊದಲೆಲ್ಲ ನನಗೆ ಅದು ಸರಿ ಬರುತ್ತಿರಲಿಲ್ಲ. ಅಸಂಪ್ರದಾಯಿಕ ಹೊಡೆತಗಳನ್ನು ಆಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಆದರೆ ಅದು 20 ಓವರ್ಗಳ ಕ್ರಿಕೆಟ್. ಅಷ್ಟು ಓವರ್ಗಳಲ್ಲಿ ದೊಡ್ಡ ಮೊತ್ತ ಪೇರಿಸಬೇಕಾದರೆ, ನೀವು ಬಾರಿಸುವ ಹೊಡೆತ ಕೋಚಿಂಗ್ ಮ್ಯಾನುಅಲ್ನಲ್ಲಿದೆಯೋ ಇಲ್ಲವೋ ಅಂತ ಯೋಚನೆ ಮಾಡುತ್ತಾ ಕೂರಲಾಗದು, ಚೆಂಡಿಗೆ ಹೇಗಾದರೂ ಬಾರಿಸಿ, ಅದು ಬೌಂಡರಿಗೆರೆ ದಾಟಬೇಕು, ಟಿ20 ಕ್ರಿಕೆಟ್ನ ಪಾಲಿಸಿಯೇ ಅದು. ಹಾಗಾಗಿ ಅದರ ಅವಶ್ಯತತೆಗೆ ತಕ್ಕಂತೆ ನಾನು ಸಹ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಯಿತು,’’ ಅಂತ ಸ್ಮಿತ್ ಹೇಳಿದರು.
‘‘ಈಗಷ್ಟೇ ಐಪಿಎಲ್ನಲ್ಲಿ ಆಡಿ ಬಂದಿರುವುದರಂದ ನಾನಿನ್ನೂ ಅದೇ ಗುಂಗಿನಲ್ಲಿರುವೆ. ಆದರೆ ನೆಟ್ಸ್ನಲ್ಲಿ ನನ್ನ ನೈಜ್ಯ ಆಟಕ್ಕೆ ವಾಪಸ್ಸು ಬರಲು ಪ್ರಯತ್ನಿಸಿದೆ ಮತ್ತು ಅದರಲ್ಲಿ ಸಫಲನೂ ಆಗಿರುವೆ. ನನ್ನ ಮೂಲ ಬ್ಯಾಟಿಂಗ್ ಶೈಲಿಗೆ ನಾನು ಮರಳಿದ್ದೇನೆ. ಚೆಂಡನ್ನು ಜೋರಾಗಿ ಬಾರಿಸುವ ಬದಲು ನಾನು ಡ್ರೈವ್ ಮಾಡುತ್ತಿದ್ದೇನೆ,’’ ಎಂದು ಸ್ಮಿತ್ ಹೇಳಿದರು.
ತಮ್ಮ ಎಂದಿನ ಸ್ಪರ್ಶವನ್ನ ಕಂಡುಕೊಂಡಿದ್ದೇನೆಂದು ಹೇಳುವ ಸ್ಮಿತ್ ಭಾರತದ ವಿರುದ್ಧ ಆಡುವ ಎಲ್ಲ ಪಂದ್ಯಗಳಲ್ಲಿ ಅದನ್ನು ಕಾಯ್ದುಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
‘‘ಕ್ರೀಸ್ನಲ್ಲಿ ಬಾಲನ್ನು ನೀವು ಮಿಡ್ಲ್ ಮಾಡುತ್ತಿದ್ದರೆ ಅದಕ್ಕಿಂತ ಮಿಗಿಲಾದ ಸಂತೋಷ ಮತ್ತೊಂದಿಲ್ಲ. ಆ ಅನುಭೂತಿ ನೀವು ಉತ್ತಮ ಮನಸ್ಥಿತಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಭಾರತದ ವಿರುದ್ಧ ಇನ್ನೂ ಹಲವಾರು ಪಂದ್ಯಗಳನ್ನು ಆಡುವುದಿದೆ. ಆ ಪಂದ್ಯಗಳಲ್ಲೂ ಇದೇ ಸ್ಪರ್ಶ ಮುಂದುವರಿಸಿಕೊಂಡು ಹೋಗುವ ನಿರೀಕ್ಷೆಯಿಟ್ಟುಕೊಂಡಿದ್ದೇನೆ,’’ ಎಂದು ಸ್ಮಿತ್ ಹೇಳಿದರು.