AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ವರ್ಷಗಳ ನಂತರ ಟೈಸನ್ ಬಾಕ್ಸಿಂಗ್ ಕಣಕ್ಕೆ, ಜೋನ್ಸ್ ವಿರುದ್ಧ ಇಂದು ಸೆಣಸು

54 ವರ್ಷ ವಯಸ್ಸಿನ ಮೈಕ್ ಟೈಸನ್ ಸುಮಾರು 15 ವರ್ಷಗಳ ನಂತರ ಶನಿವಾರದಂದು ಬಾಕ್ಸಿಂಗ್ ಕಣಕ್ಕಿಳಿಯುತ್ತಿದ್ದಾರೆ. ಅವರ ಮತ್ತು ರಾಯ್ ಜೋನ್ಸ್ ಜ್ಯೂನಿಯರ್ ನಡುವೆ ಲಾಸ್ ಏಂಜೆಲ್ಸ್​ನ ಸ್ಟೇಪಲ್ಸ್ ಸೆಂಟರ್​ನಲ್ಲಿ ಪ್ರದರ್ಶನ ಕಾಳಗ ನಡೆಯಲಿದ್ದು ಈ ಹಣಾಹಣಿಯ ಮೇಲೆ ಮಿಲಿಯನ್​ಗಟ್ಟಲೆ ಬೆಟ್ಟಿಂಗ್ ನಡೆದಿದೆ.

15 ವರ್ಷಗಳ ನಂತರ ಟೈಸನ್ ಬಾಕ್ಸಿಂಗ್ ಕಣಕ್ಕೆ, ಜೋನ್ಸ್ ವಿರುದ್ಧ ಇಂದು ಸೆಣಸು
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 28, 2020 | 6:34 PM

Share

ಕ್ರೀಡಾಸಕ್ತರು ಮೈಕ್​ ಟೈಸನ್​ರನನ್ನು ಮರೆತಿರಲಾರರು. ಅವರನ್ನು ಮರೆಯುವುದಾದರೂ ಹೇಗೆ ಸಾಧ್ಯ? ಕೇವಲ ಬಾಕ್ಸಿಂಗ್ ಮಾತ್ರವಲ್ಲ ಉಳಿದೆಲ್ಲ ಕ್ರೀಡೆಗಳನ್ನು ಗಣನೆಗೆ ತೆಗೆದುಕೊಂಡರೂ ಪ್ರಾಯಶಃ ಅವರಷ್ಟು ವಿವಾದಾತ್ಮಕ ಕ್ರೀಡಾಪಟು ಮತ್ತೊಬ್ಬರಿರಲಾರರು. 18 ವರ್ಷ ವಯಸ್ಸಿನ ಯುವತಿಯೊಬ್ಬಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಬಾಕ್ಸಿಂಗ್ ರಿಂಗ್​ನಲ್ಲಿ ತನ್ನ ಎದುರಾಳಿ ಇವಾಂಡರ್ ಹೋಲಿಫೀಲ್ಡ್ ಅವರ ಕಿವಿ ಕಚ್ಚಿ ತುಂಡು ಮಾಡಿದ್ದು, ಮಾದಕ ವಸ್ತುಗಳನ್ನು ಸೇವಿಸುವಾಗ ಸಿಕ್ಕಿಬಿದ್ದಿದ್ದು. ಫೈಟ್​ಗೆ ಮೊದಲು ತನ್ನ ಎದುರಾಳಿಗಳನ್ನು ಅಪಹಾಸ್ಯ ಮಾಡಿದ್ದು ಮೊದಲಾದ ಹಲವಾರು ವಿವಾದಗಳ ಹೊರತಾಗಿಯೂ ಟೈಸನ್ ವಿಶ್ವ ಕಂಡಿರುವ ಅತ್ಯಂತ ಶ್ರೇಷ್ಠ ಬಾಕ್ಸರ್​ಗಳಲ್ಲೊಬ್ಬರು ಎನ್ನುವುದು ಮಾತ್ರ ನಿರ್ವಿವಾದಿತ.

ಇಂಥ ಟೈಸನ್ ಈಗ ಮತ್ತೊಮ್ಮೆ ಬಾಕ್ಸಿಂಗ್ ರಿಂಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅದೂ ಇಂದು ರಾತ್ರಿ ಅಂದರೆ ಶನಿವಾರ ರಾತ್ರಿ. ಅವರ ಎದುರಾಳಿ 52-ವರ್ಷ ವಯಸ್ಸಿನ ರಾಯ್ ಜೋನ್ಸ್ ಜ್ಯೂನಿಯರ್. ಇವರು ಸಹ ಕಡಮೆ ಖ್ಯಾತಿಯ ಬಾಕ್ಸರ್ ಏನಲ್ಲ. ನಾಲ್ಕು ವಿವಿಧ ಡಿವಿಜನ್​ಗಳಲ್ಲಿ ವಿಶ್ವ ಚಾಂಪಿಯನ್ ಪಟ್ಟ ಧರಿಸಿರುವ ಹಿರಿಮೆ ಜೋನ್ಸ್ ಅವರದ್ದು. ಟೈಸನ್ ಅವರಿಗೆ ಹೋಲಿಸಿದರೆ ಜೋನ್ಸ್ ಇನ್ನೂ ಸ್ಪರ್ಶ ಕಳೆದುಕೊಂಡಿರಲಿಕ್ಕಿಲ್ಲ. ಯಾಕೆಂದರೆ 2018ರವರೆಗೆ ಅವರು ಬಾಕ್ಸಿಂಗ್​ ಕಣದಲ್ಲಿ ಸಕ್ರಿಯರಾಗಿದ್ದರು. ಆದರೆ, 54 ವರ್ಷ ವಯಸ್ಸಿನ ಟೈಸನ್ 15 ವರ್ಷಗಳ ನಂತರ ಬಾಕ್ಸಿಂಗ್ ಗ್ಲೌವ್ಸ್ ಧರಿಸಲಿದ್ದಾರೆ.

ಅಂದಹಾಗೆ ಇವರಿಬ್ಬರ ನಡುವೆ ಬಹು-ಚರ್ಚಿತ ಕಾಳಗ ಲಾಸ್ ಏಂಜೆಲ್ಸ್​ನಲ್ಲಿರುವ ಸ್ಟೇಪಲ್ಸ್ ಸೆಂಟರ್​ನಲ್ಲಿ ಶನಿವಾರ ರಾತ್ರಿ (ಅಮೇರಿಕಾದ ಕಾಲಮಾನದ ಪ್ರಕಾರ) ನಡೆಯಲಿದೆ. ಬಾಕ್ಸಿಂಗ್ ದಿಗ್ಗಜರ ಈ ಬೌಟ್ ಮೇಲೆ ಅದಾಗಲೇ ಮಿಲಿಯನ್​ಗಟ್ಟಲೆ ಬೆಟ್ಟಿಂಗ್ ಶುರುವಾಗಿದೆ. ಮೂಲಗಳ ಪ್ರಕಾರ ಅತಿಹೆಚ್ಚು ಜನ ಟೈಸನ್ ಮೇಲೆ ಹಣ ಪಣಕ್ಕಿಟ್ಟಿದ್ದಾರಂತೆ. ಆದರೆ ಒಂದೂವರೆ ದಶಕಗಳ ನಂತರ ರಿಂಗ್ ಪ್ರವೇಶಿಸುತ್ತಿರುವ ಟೈಸನ್, ಅವರ ನಿರೀಕ್ಷೆಯನ್ನು ಉಳಿಸಿಕೊಳ್ಳುವರೇ ಎನ್ನುವುದು ಕುತೂಹಲಕಾರಿ ಆಂಶವಾಗಿದೆ.

ಟೈಸನ್ ಮತ್ತು ಜೋನ್ಸ್ ಇಬ್ಬರೂ ವಿಶ್ವ ಪ್ರಸಿದ್ಧ ಬಾಕ್ಸರ್​ಗಳಾಗಿರುವುದರಿಂದ ಸದರಿ ಫೈಟನ್ನು ಕೊಟ್ಯಾಂತರ ಜನ ಟಿವಿಗಳಲ್ಲಿ ವೀಕ್ಷಿಸಲಿದ್ದಾರೆ. ಇದು ಪ್ರದರ್ಶನ ಪಂದ್ಯವಾಗಿರುವುದರಿಂದ ವಿಶ್ವ ಬಾಕ್ಸಿಂಗ್ ಫೆಡರೇಶನ್​ಗೂ ಸದರಿ ಬೌಟ್​ಗೂ ಅಧಿಕೃತ ಸಂಬಂಧವಿಲ್ಲ.  2-ನಿಮಿಷ ಕಾಲಾವಧಿಯ 8 ಸುತ್ತುಗಳು ಇಂದಿನ ಫಲಿತಾಂಶವನ್ನು ನಿರ್ಧರಿಸಲಿವೆ.

ಸುಮಾರು ಮೂರು ದಶಕಗಳವರೆಗೆ (1985-2005) ಫೈಟ್​ಗಳಲ್ಲಿ ಭಾಗಿಯಾಗುತ್ತಾ ತಮ್ಮಷ್ಟೇ ಖ್ಯಾತರಾಗಿದ್ದ ಹಲವಾರು ಬಾಕ್ಸರ್​ಗಳನ್ನು ಮಣ್ಣುಮುಕ್ಕಿಸಿದ್ದ ಟೈಸನ್, ತಾವು ಬಾಕ್ಸಿಂಗ್ ವಿದಾಯ ಹೇಳುವವರೆಗೆ ಕ್ರೀಡೆಯ ಅನಭಿಕಷಿಕ್ತ ದೊರೆಯಾಗಿ ಮೆರೆದಿದ್ದು ಸುಳ್ಳಲ್ಲ. ತಮ್ಮ ವೃತ್ತಿ ಬದುಕಿನಲ್ಲಿ ಒಟ್ಟು 56 ಬಾರಿ ಹೆವಿವೇಟ್ ವಿಭಾಗದಲ್ಲಿ ಕಣಕ್ಕಿಳಿದಿದ್ದ ಟೈಸನ್ ಬರೋಬ್ಬರಿ 50 ಬಾರಿ ಗೆಲುವು ಸಾಧಿಸಿದ್ದರು. ಅದರಲ್ಲಿ 44 ಗೆಲುವುಗಳು ನಾಕ್​ಔಟ್ ಮೂಲಕ ಬಂದಿವೆಯೆಂದರೆ ನೀವು ನಂಬಲಾರಿರೇನೋ.

ಹೌದು, ಈ ಬಾಕ್ಸಿಂಗ್ ದೈತ್ಯ 44 ಸಲ ತಮ್ಮ ಎದುರಾಳಿಯನ್ನು ಬಾಕ್ಸಿಂಗ್ ಕಣದಲ್ಲಿ ಹೊಡೆದುರಳಿಸಿದ್ದಾರೆ. ರಿಂಗ್​ನಲ್ಲಿ ಅವರ ಪ್ರದರ್ಶಿಸುತ್ತಿದ್ದ ಆಕ್ರಮಣಶೀಲತೆ ಎದುರಾಳಿಗಳನ್ನು ದಿಗಿಲುಗೊಳಿಸುತಿತ್ತು. ಕಣದಲ್ಲಿ ಟೈಸನ್ ಹಿಂಸಾಪ್ರವೃತ್ತಿಯನ್ನು ತೋರಿದ ಉದಾಹರಣೆಗಳೂ ಇವೆ. 1997ರಲ್ಲಿ ಅವರು ಇವಾಂಡರ್ ಹೋಲಿಫೀಲ್ಡ್ ಜೊತೆ ಸೆಣಸಿದ ಕಾಳಗವನ್ನು ದಿ ಸೌಂಡ್ ಅಂಡ್ ಫ್ಯೂರಿ ಎಂದು ಕರೆಯಲಾಗಿತ್ತು. ಆದರೆ ಫೈಟ್​ ನಡೆಯುತ್ತಿದ್ದಾಗ ಟೈಸನ್, ಹೋಲಿಫೀಲ್ಡ್ ಅವರ ಕಿವಿಯನ್ನು ಅದೆಷ್ಟು ಜೋರಾಗಿ ಕಚ್ಚಿದ್ದರೆಂದರೆ ಅದರ ಒಂದು ತುಂಡು ಕಿತ್ತಿಬಂದು ಕಣದಲ್ಲಿ ಬಿದ್ದಿತ್ತು! ಕಣದಲ್ಲಿ ವೃತ್ತಿಪರತೆಗೆ ವ್ಯತಿರಿಕ್ತವಾದ ಧೋರಣೆಯನ್ನು ಪ್ರದರ್ಶಿಸಿದ್ದರಿಂದ ಟೈಸನ್ ಅವರ ಬಾಕ್ಸಿಂಗ್ ಲೈಸೆನ್ಸ್ ಅನ್ನು ಕೆಲ ತಿಂಗಳುಗಳ ಮಟ್ಟಿಗೆ ಅಮಾನತುಗೊಳಿಸಲಾಗಿತ್ತು.

ಮೈಕ್ ಟೈಸನ್ ಮತ್ತು ರಾಯ್ ಜೋನ್ಸ್ ಜ್ಯೂನಿಯರ್

ಮುಂದೆ, 2009ರಲ್ಲಿ ಟೈಸನ್, ದಿ ಓಪ್ರಾ ವಿನ್​ಫ್ರೀ ಶೋನಲ್ಲಿ ತಾವು ಮಾಡಿದ ಕೃತ್ಯಕ್ಕೆ ಹೋಲಿಫೀಲ್ಡ್ ಅವರ ಕ್ಷಮೆಯಾಚಿಸಿದ್ದರು. ಅವರನ್ನು ಕ್ಷಮಿಸಿದ್ದಾಗಿ ಹೋಲಿಫೀಲ್ಡ್ ಹೇಳಿದ್ದರು. ಟೈಸನ್ ಅವರನ್ನು ಐರನ್ ಮೈಕ್, ಕಿಡ್ ಡೈನಮೈಟ್ ಅಂತ ಕರೆಯಲಾಗುತಿತ್ತು, ಅದರೆ, ಹೋಲಿಫೀಲ್ಡ್ ಮತ್ತು ರೇಪ್ ಪ್ರಕರಣಗಳ ನಂತರ ಅವರನ್ನು ದಿ ಬ್ಯಾಡೆಸ್ಟ್ ಮ್ಯಾನ್ ಆನ್ ದಿ ಅರ್ತ್ ಅಂತಲೂ ಜನ ಕರೆದರು.

ಟೈಸನ್​ಗೆ ಮೂವರು ಹೆಂಡಿರು (ಇಬ್ಬರಿಗೆ ವಿಚ್ಛೇದನ ನೀಡಿದ್ದಾರೆ) ಮತ್ತು 8 ಜನ ಮಕ್ಕಳು. ಸುದೀರ್ಘ ಅವಧಿಯ ನಂತರ ಅವರು ಕಣಕ್ಕಿಳಿಯುತ್ತಿರುವುದರಿಂದ ಬಾಕ್ಸಿಂಗ್ ಪ್ರಿಯರ ಕಣ್ಣೆಲ್ಲ ಇಂದು ಅವರ ಮೇಲಿರಲಿದೆ. ಹೇಗೆ ಕಾದಾಡುತ್ತಾರೋ ಕಾದು ನೋಡಬೇಕು.