ಈಗಾಗಲೇ ಐಪಿಎಲ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿರೋ ಕೊರೊನಾ, ಇದೀಗ ಭಾರತದಲ್ಲಿ ನಡೆಯಬೇಕಿರೋ ಟಿ-ಟ್ವೆಂಟಿ ವಿಶ್ವಕಪ್ಗೂ ತಣ್ಣೀರೆರಚಿದೆ.. ಅಕ್ಟೋಬರ್-ನವೆಂಬರ್ನಲ್ಲಿ ನಡೆಯಬೇಕಿದ್ದ ಟಿ-ಟ್ವೆಂಟಿ ವಿಶ್ವಕಪ್ ಯುಎಇಗೆ ಶಿಫ್ಟ್ ಆಗೋದು ಬಹುತೇಕ ಪಕ್ಕಾ ಆಗಿದೆ. 2011 ಏಕದಿನ ವಿಶ್ವಕಪ್ ನಂತ್ರ ಮತ್ತೊಂದು ವಿಶ್ವಕಪ್ ಕಾಣ್ತುಂಬಿಕೊಳ್ಳಲು ಕಾತರರಾಗಿದ್ದ ಕೋಟ್ಯಾಂತರ ಭಾರತೀಯರ ಕನಸಿಗೆ ಕೊರೊನಾ ಕೊಳ್ಳಿ ಇಟ್ಟಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಈಗಾಗಲೇ ದೇಶದಲ್ಲಿ 2021 ಟಿ-ಟ್ವೆಂಟಿ ವಿಶ್ವಕಪ್ನ ತಯಾರಿಗಳು ನಡೆಯಬೇಕಿತ್ತು. ಆದ್ರೆ, ಕ್ರೂರಿ ಕೊರೊನಾದಿಂದ ಈ ವರ್ಷದ ಟಿ-ಟ್ವೆಂಟಿ ವಿಶ್ವಕಪ್ ಭಾರತದಿಂದ ಸ್ಥಳಾಂತರವಾಗೋ ಸಾಧ್ಯತೆಯೇ ಹೆಚ್ಚಿದೆ.
ಭಾರತದಿಂದ ವಿಶ್ವಕಪ್ ಶಿಫ್ಟ್.. ಅಭಿಮಾನಿಗಳಿ ನಿರಾಸೆ..!
ಭಾರತದಲ್ಲಿ ಕೋವಿಡ್-19ನಿಂದ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಿಗದಿಯಾಗಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಓಮಾನ್ಗೆ ಸ್ಥಳಾಂತರಿಸಲು ಬಿಸಿಸಿಐ, ಐಸಿಸಿ ಒಲವು ತೋರಿದೆ. ದುಬೈನಲ್ಲಿ ವಿಶ್ವಕಪ್ಗೆ ಸಿದ್ಧತೆಗಳನ್ನ ನಡೆಸಿಕೊಳ್ಳುವಂತೆ ಭಾರತೀಯ ಕ್ರಿಕೆಟ್ ಮಂಡಳಿ, ಆಂತರಿಕವಾಗಿ ಐಸಿಸಿಗೆ ಸಮ್ಮತಿ ನೀಡಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಆರಂಭವಾಗಲಿರುವ ಚುಟುಕು ವಿಶ್ವಕಪ್, ದುಬೈ, ಯುಎಇ, ಶಾರ್ಜಾದಲ್ಲಿ ಹಾಗೂ ಓಮಾನ್ ರಾಜಧಾನಿ ಮಸ್ಕತ್ನಲ್ಲಿ ನಡೆಯಲಿದೆ.
ಐಸಿಸಿ ನಾಲ್ಕು ವಾರಗಳ ಸಮಯ ನೀಡಿತ್ತು
ಟಿ-ಟ್ವೆಂಟಿ ವಿಶ್ವಕಪ್ ಆಯೋಜನೆ ಕುರಿತು ಜೂನ್ 1ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಭೆ ನಡೆಸಿತ್ತು. ಈ ವೇಳೆ ವಿಶ್ವಕಪ್ ನಡೆಸುವ ತೀರ್ಮಾನ ಕೈಗೊಳ್ಳುವ ಬಿಸಿಸಿಐ, ಐಸಿಸಿ ನಾಲ್ಕು ವಾರಗಳ ಸಮಯ ನೀಡಿತ್ತು. ಆದ್ರೆ, ಭಾರತದಲ್ಲಿ ಕೊರೊನಾ ಅಲೆ ಇನ್ನೂ ಸಂಪೂರ್ಣವಾಗಿ ತಗ್ಗಿಲ್ಲ. ವಿದೇಶಿ ಆಟಗಾರರು ಸಹ, ಭಾರತಕ್ಕೆ ಬರೋದಕ್ಕೆ ಹಿಂದೇಟು ಹಾಕ್ತಾರೆ.
ಅಕ್ಟೋಬರ್-ನವೆಂಬರ್ನಲ್ಲಿ ಮಳೆ
ಅಲ್ಲದೇ, ಒಂದು ವೇಳೆ ಕ್ಲೋಸ್ ಡೋರ್ನಲ್ಲಿ ಟೂರ್ನಿ ಆಯೋಸಿದ್ರು, ಆಟಗಾರರನ್ನ ಬಯೋಬಬಲ್ನಲ್ಲಿ ನೋಡಿಕೊಳ್ಳೋದು ಬಿಸಿಸಿಐಗೆ ಸವಾಲು ಆಗಲಿದೆ. ಹೀಗಾಗಿ ಟೂರ್ನಿಯು ಯುಎಇ ಹಾಗೂ ಓಮಾನ್ನಲ್ಲಿ ನಡೆಸಿ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ನಲ್ಲಿ ಭಾರತದಲ್ಲಿ ಕೊರೊನಾ ಮೂರನೇ ಅಲೆ ಬರುವ ಅಲೆ ಬರುವ ಸಾಧ್ಯತೆಯಿದೆ. ಅಲ್ಲದೇ, ಅಕ್ಟೋಬರ್-ನವೆಂಬರ್ನಲ್ಲಿ ಮಳೆಯೂ ಹೆಚ್ಚಾಗಿರಲಿದೆ. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಯುಇಎಗೆ ಶಿಫ್ಟ್ ಮಾಡಿದ್ರೆ ಒಳ್ಳೆಯದು ಅಂತಾ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಅಕ್ಟೋಬರ್ 10ರೊಳಗೆ ಅಂತ್ಯವಾಗಬೇಕು ಐಪಿಎಲ್!
ಈಗಾಗಲೇ ಐಪಿಎಲ್ ಟೂರ್ನಿಯ ಇನ್ನೂಳಿದ ಪಂದ್ಯಗಳನ್ನ ಸೆಪ್ಟೆಂಬರ್ 19ರಂದು ಯುಎಇಯಲ್ಲಿ ಆರಂಭಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಅಲ್ಲದೇ, ಟೂರ್ನಿಯ 31 ಪಂದ್ಯಗಳು ಅಕ್ಟೋಬರ್ 10ರ ವೇಳೆ ಮುಕ್ತಾಯಗೊಳಿಸಬೇಕಿದೆ. ಯಾಕಂದ್ರೆ, ವಿಶ್ವಕಪ್ ಕೂಡ ಯುಎಇನಲ್ಲಿ ನವೆಂಬರ್ನಲ್ಲಿ ನಡೆಯೋದ್ರಿಂದ, ಪಿಚ್ ಗಳನ್ನು ಐಸಿಸಿ ಸುಪರ್ಧಿಗೆ ವಹಿಸಬೇಕಾಗುತ್ತೆ. ಅಲ್ಲದೇ, ನಾಕೌಟ್ ಪಂದ್ಯಗಳನ್ನ ಕೇವಲ ಒಂದೇ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ಮುಂದಾಗಿದೆ. ಭಾರತದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಕಾಣ್ತುಂಬಿಕೊಳ್ಳಬೇಕೆಂದು ಕನಸು ಕಂಡಿದ್ದ ಕ್ರಿಕೆಟ್ ಪ್ರಿಯರಿಗೆ ಕೊರೊನಾ ಕೊಳ್ಳಿ ಇಟ್ಟಿರೋದಂತೂ ಸುಳ್ಳಲ್ಲ.