ಅದು 2007ನೇ ಇಸವಿ. ಭಾರತೀಯ ಕ್ರಿಕೆಟ್ ಟೀಮ್ ಇನ್ನೂ ಧೋನಿ ನಾಯಕತ್ವದಲ್ಲಿ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದ ಖುಷಿಯಲ್ಲಿ ತೇಲಾಡುತ್ತಿತ್ತು. ಆ ಸಮಯದಲ್ಲಿ ಪಾಂಟಿಂಗ್ ನೇತೃತ್ವದ ಕಾಂಗರೂ ಪಡೆ ಭಾರತದಲ್ಲಿ ಸರಣಿಗಾಗಿ ಆಗಮಿಸಿತ್ತು. ಆಗ ಧೋನಿ ಸೀಮಿತ ಓವರ್‌ಗಳ ಪಂದ್ಯಗಳಿಗೆ ಭಾರತದ ಪೂರ್ಣಾವಧಿ ನಾಯಕರಾಗಿದ್ದರು. ಸಚಿನ್, ದ್ರಾವಿಡ್, ಸೆಹ್ವಾಗ್, ಜಹೀರ್, ಹರ್ಭಜನ್, ಯುವರಾಜ್ ಮುಂತಾದ ದಿಗ್ಗಜರನ್ನೊಳಗೊಂಡ ಭಾರತ ಬಲಿಷ್ಠ ತಂಡವಾಗಿತ್ತು. ಅಲ್ಲದೇ ಭಾರತಕ್ಕೆ ಹೋಮ್ ಗ್ರೌಂಡಿನ ಅಡ್ವಾಂಟೇಜ್ ಕೂಡ ಇತ್ತು.
ಆಸ್ಟ್ರೇಲಿಯಾ ಸಹ ಪೂರ್ಣ ಸಾಮರ್ಥ್ಯವುಳ್ಳ ತಂಡದೊಂದಿಗೆ ಆಗಮಿಸಿತ್ತಾದರೂ ಏಕದಿನ ಸರಣಿಯ ಒಂದೆರಡು ಪಂದ್ಯ ಮುಗಿಯುವಷ್ಟರಲ್ಲೇ ಕಾಂಗರೂಗಳಿಗೆ ಗಾಯಾಳುಗಳ ಸಮಸ್ಯೆ ಶುರುವಾಗಿತ್ತು. ಸರಣಿ ಅರ್ಧ ಮುಗಿಯುವಷ್ಟರಲ್ಲಿ ಆಸೀಸ್ ಪಡೆಯ ಅರ್ಧದಷ್ಟು ಪ್ರಮುಖ ಆಟಗಾರರು ಗಾಯಾಳುಗಳಾಗಿ ತವರಿಗೆ ವಾಪಾಸ್ಸಾಗಿದ್ದರು. ಅಷ್ಟಾದರೂ ಬಹುತೇಕ ಪ್ರಥಮ ದರ್ಜೆಯ ತಂಡದಂತಿದ್ದ ಕಾಂಗರೂ ಪಡೆ ಪಾಂಟಿಂಗ್ ನಾಯಕತ್ವದಲ್ಲಿ ಭಾರತಕ್ಕೆ ಭಾರತದ ನೆಲದಲ್ಲೇ ನೀರು ಕುಡಿಸಿ ಏಕದಿನ ಸರಣಿಯನ್ನು 4-2 ರಿಂದ ಗೆದ್ದಿತ್ತು. ಗೆದ್ದ ಎರಡು ಪಂದ್ಯಗಳನ್ನೂ ನಮ್ಮವರು ಹರಸಾಹಸ ಪಟ್ಟು ಗೆದ್ದಿದ್ದರು. ಪೂರ್ಣಪ್ರಮಾಣದ ಬಲಿಷ್ಟ ತಂಡವಿದ್ದೂ ಭಾರತಕ್ಕೆ ಏನೂ ಮಾಡಲಾಗದೇ ಧೋನಿ ಸಾಕಷ್ಟು ಟೀಕೆಗೆ ಗುರಿಯಾಗಬೇಕಾಯಿತು.
ಕೊವಿಡ್ ಪಿಡುಗಿನ ನಂತರ ಭಾರತ ಮೊದಲ ಬಾರಿ ಕ್ರಿಕೆಟ್ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದಾಗ ಕ್ರಿಕೆಟ್ ಪ್ರೇಮಿಗಳ ಕಣ್ಣರಳಿತ್ತು. ಬಹಳ ದಿನಗಳ ನಂತರ ಸುದೀರ್ಘ ಕ್ರಿಕೆಟ್ ಸರಣಿಯೊಂದು ನಡೆಯುತ್ತಿದ್ದುದ್ದರಿಂದ ಎಲ್ಲರೂ ಸಹಜವಾಗಿ ಕುತೂಹಲಿಗಳಾಗಿದ್ದರು. ಆದರೆ, ಮೊದಲು ನಡೆದ ಏಕದಿನ ಸರಣಿಯಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳು ಪ್ರಾಬಲ್ಯ ಮೆರೆದುಬಿಟ್ಟರು. ಎಲ್ಲ ಪಂದ್ಯಗಳಲ್ಲೂ ಬೃಹತ್ ಮೊತ್ತವನ್ನೇ ದಾಖಲಿಸಿದರು. ತಕ್ಕ ಮಟ್ಟಿಗೆ ನಮ್ಮವರು ಪೈಪೋಟಿ ನೀಡಿದರಾದರೂ ಸರಣಿ ಆತಿಥೇಯರ ಪಾಲಾಯಿತು. ಆದರೆ ಮುಂದಿನ ಟಿ-ಟ್ವೆಂಟಿ ಸರಣಿಯಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ ಭಾರತ ಗೆಲುವು ಸಾಧಿಸಿತು.
ಅಸಲಿ ಅಗ್ನಿಪರೀಕ್ಷೆ ಇದ್ದಿದ್ದು ನಂತರದ ಟೆಸ್ಟ್ ಸರಣಿಯಲ್ಲಿ. ಟೆಸ್ಟ್ ಕ್ರಿಕೆಟ್ ವಿಷಯಕ್ಕೆ ಬಂದರೆ ತವರು ನೆಲದಲ್ಲಿ ಆಸ್ಟ್ರೇಲಿಯಾ ಯಾವತ್ತೂ ಬಲಿಷ್ಠವೇ. ಇತ್ತ ಅಂತಹ ಬಲಿಷ್ಠ ತಂಡದೆದುರು ಆಡಲು ಆಸರೆಯಾಗಬಹುದಾಗಿದ್ದ ನಮ್ಮ ನಾಯಕ ಕೊಹ್ಲಿ ಬರೀ ಮೊದಲ ಪಂದ್ಯಕ್ಕಷ್ಟೇ ಲಭ್ಯವಿದ್ದರು. ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಭಾರತ ಮುಗ್ಗರಿಸಿದಾಗ ಈ ಸರಣಿಯ ಕಥೆ ಗೋವಿಂದ ಎಂದೇ ಎಲ್ಲರೂ ಭಾವಿಸಿದ್ದರು. ಸಾಲದ್ದಕ್ಕೆ paternity leave ತೆಗೆದುಕೊಂಡು ಕೊಹ್ಲಿ ವಾಪಾಸ್ಸಾಗಿದ್ದರಿಂದ ಭಾರತೀಯರ ನೈತಿಕ ಸ್ಥೈರ್ಯ ಕುಸಿದು ಹೋಗಿತ್ತು. ಇನ್ನೊಂದೆಡೆ ನಿಧಾನಕ್ಕೆ ಕೆಲವು ಆಟಗಾರರು ಗಾಯಾಳುಗಳಾಗಿದ್ದು ಭರವಸೆ ಕಳೆದುಕೊಳ್ಳಲು ಕಾರಣವಾಗಿತ್ತು.
ಗೆಲುವಿನ ರಹದಾರಿಗೆ ತಂಡವನ್ನು ಕೊಂಡೊಯ್ದ ರಹಾನೆ
ಬಾಕ್ಸಿಂಗ್ ಡೇ ಮ್ಯಾಚ್ ಆಸೀಸ್ ಪಾಲಿಗೆ ಯಾವತ್ತೂ ವಿಶೇಷವೇ. ಅಂತಹ ಪಂದ್ಯವನ್ನು ಗೆಲ್ಲಲು ಅವರು ಶತಾಯುಗತಾಯ ಪ್ರಯತ್ನಿಸುತ್ತಾರೆ. ಮೊದಲ ಟೆಸ್ಟಿನಲ್ಲಿ 36 ರನ್ನಿಗೆ ಆಲೌಟಾದ ಕಹಿನೆನಪು, ಮೊದಲ ಪಂದ್ಯ ಸೋತಿದ್ದರಿಂದ ಆದ ಮಾನಸಿಕ ಆಘಾತ, ಕೊಹ್ಲಿ ಇಲ್ಲ, ರೋಹಿತ್ ಇಲ್ಲ, ಜೊತೆಗೆ ಅಲ್ಲಿನ ಬೌನ್ಸಿ ಟ್ರ್ಯಾಕ್.. ಹೀಗೆ ಈ ಎಲ್ಲಾ ಕಾರಣಗಳಿಂದಾಗಿ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ ಮೇಲೆ ಸಹಜವಾಗಿಯೇ ಒತ್ತಡ ಜಾಸ್ತಿ ಆಯಿತು. ಆದರೆ, ಅಷ್ಟೂ ಒತ್ತಡವನ್ನು ತಮ್ಮ Cool captaincy ಮೂಲಕ ನಾಜೂಕಾಗಿ ನಿಭಾಯಿಸಿ ನಾಯಕನ ಆಟವಾಡಿ ಎರಡನೇ ಪಂದ್ಯ ಗೆಲ್ಲಿಸಿಕೊಡುವಲ್ಲಿ ರಹಾನೆ ಯಶಸ್ವಿಯಾದರು.
ಭಾರತದ ಗೆಲುವಿನಿಂದ ಪೆಟ್ಟು ತಿಂದ ಹುಲಿಯಂತಾದ ಆಸೀಸ್ ಮೂರನೇ ಪಂದ್ಯದಲ್ಲಿ ತನ್ನ ಹಳೇ ಚಾಳಿಯಾದ ಸ್ಲೆಡ್ಜಿಂಗ್ ಮೊರೆಹೋಗಿತ್ತು. ಇತ್ತ ಭಾರತ ತಂಡದ ಅರ್ಧ ಆಟಗಾರರು ಗಾಯಾಳುಗಳಾಗಿದ್ದರು. ಎರಡನೇ ಇನ್ನಿಂಗ್ಸ್ ಗೆಲ್ಲಲು ಬೃಹತ್ ಗುರಿ ಇದ್ದಾಗ ಭಾರತ ಪಕ್ಕಾ ಸೋಲುತ್ತದೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಅದರಲ್ಲೂ ಅಂತಹ ಸಂದರ್ಭದಲ್ಲಿ ಕಾಂಗರೂಗಳ ವೇಗದ ದಾಳಿ ಎದುರಿಸುವುದು ಕಷ್ಟವಾದ್ದರಿಂದ ಗೆಲುವಿನ ನಿರೀಕ್ಷೆಯಲ್ಲಿ ಯಾರೂ ಇರಲಿಲ್ಲ. ಆದರೆ, ತಂಡದ ಮೇಲಿನ ಭರವಸೆ ಮಂಕಾಗುತ್ತಿರುವಾಗ ಎದೆ ಸೆಟೆಸಿ ನಿಂತ ಹನುಮ ವಿಹಾರಿ ಮತ್ತು ಅಶ್ವಿನ್ ಗಾಯಾಳುಗಳಾಗಿದ್ದರೂ ಸಹ ಛಲ ಬಿಡದೆ ಗ್ರೇಟ್ ಇಂಡಿಯನ್ ಬ್ಲಾಕಥಾನ್ ನಡೆಸಿ ಅನೂಹ್ಯ ರೀತಿಯಲ್ಲಿ ಪಂದ್ಯವನ್ನು ಡ್ರಾ ಮಾಡಿದರು. ಈ ಡ್ರಾ ಯಾವುದೇ ಗೆಲುವಿಗೂ ಕಮ್ಮಿಯಿರಲಿಲ್ಲವಾದ್ದರಿಂದ ಭಾರತಕ್ಕೆ ಅತ್ಯದ್ಭುತ ಶಕ್ತಿ ಸಿಕ್ಕಂತಾಯಿತು.
ಇತ್ತ ಗೆದ್ದೇಬಿಡುತ್ತೇವೆ ಎಂಬ ಹುಂಬ ಧೈರ್ಯದಲ್ಲಿದ್ದ ಕಾಂಗರೂ ಪಡೆಗೆ ಪಂದ್ಯ ಡ್ರಾ ಆಗಿದ್ದರಿಂದ ಹತಾಶೆ ಎಲ್ಲೆ ಮೀರೀತ್ತು. ಇಂತಹ ಸ್ಥಿತಿಯಲ್ಲೇ ಇತ್ತಂಡಗಳೂ ನಾಲ್ಕನೇ ಟೆಸ್ಟ್ ಆಡಲು ಬ್ರಿಸ್ಬೇನ್ಗೆ ಬಂದಿಳಿದಿದ್ದವು. ಅಲ್ಲಿನ ‘ಗಾಬಾ’ ಪಿಚ್ ಅಂತೂ ವೇಗಿಗಳ ಸ್ವರ್ಗ. ಬಹುತೇಕ ಎಲ್ಲಾ ಚೆಂಡುಗಳೂ ಎದೆಯೆತ್ತರಕ್ಕೆ ಪುಟಿದು ಬರುತ್ತವೆ. ಮೊದಲೇ ಬೌನ್ಸಿ ಪಿಚ್ಗಳಲ್ಲಿ ಭಾರತೀಯರ ಪ್ರದರ್ಶನ ಅಷ್ಟಕಷ್ಟೇ. ಮೇಲಾಗಿ ತ್ರಿವಳಿ ವೇಗಿಗಳಾದ ಸ್ಟಾರ್ಕ್, ಹೇಝಲ್ವುಡ್, ಕಮಿನ್ಸ್ ಬೆಂಕಿಯುಂಡೆ ಉಗುಳುವಂತಹ ತಮ್ಮ ಬೌನ್ಸರ್ಗಳ ಮೂಲಕ ಭಾರತೀಯ ಬ್ಯಾಟ್ಸ್ಮನ್ಗಳನ್ನು ಕಾಡಲು ತಯಾರಾಗಿ ನಿಂತಿದ್ದರು.
ಆಸ್ಟ್ರೇಲಿಯ ಸಿಡಿದೇಳುವ ಉತ್ಸಾಹದಲ್ಲಿದ್ದರೆ ಭಾರತದ ಪಾಲಿಗೆ ಮಾತ್ರ ಮೇಲಿಂದ ಮೇಲೆ ಆಘಾತ ಎದುರಾಗಿತ್ತು. ರೋಹಿತ್ ಶರ್ಮ ಫಾರ್ಮ್ನಲ್ಲಿ ಇಲ್ಲ, ಕೊಹ್ಲಿ, ರಾಹುಲ್, ಬುಮ್ರಾ, ಜಡೇಜ, ಹನುಮ ವಿಹಾರಿ, ಸಾಹಾ, ಅಶ್ವಿನ್ ಯಾರೂ ತಂಡದಲ್ಲಿ ಇಲ್ಲ. ಇರುವವರಲ್ಲಿ ಹೆಚ್ಚಿನವರು ಅನನುಭವಿಗಳು. ಹಾಗೆ ನೋಡಲು ಹೋದರೆ ರಣಜಿ ಕ್ರಿಕೆಟ್ನ ಕರ್ನಾಟಕ ತಂಡಕ್ಕಿಂತಲೂ ದುರ್ಬಲವಾದ, ಸಂಪೂರ್ಣ ಹೊಸ ತಂಡದೊಂದಿಗೆ ಭಾರತ ‘ಗಾಬಾ’ ಮೈದಾನಕ್ಕೆ ಕಾಲಿಟ್ಟಿತ್ತು.
ಇವರಿಂದ ಏನೂ ಆಗಲಿಕ್ಕಿಲ್ಲ ಎಂದು ಭಾವಿಸಿದ್ದ ಎಲ್ಲರ ಲೆಕ್ಕಾಚಾರವನ್ನೂ ತಲೆಕೆಳಗೆ ಮಾಡಿ, ನಿರೀಕ್ಷೆಗೂ ಮೀರಿ ಚಾಂಪಿಯನ್ಸ್ಗಳಂತೆ ಆಟವಾಡಿದ ನಮ್ಮವರು ಕಾಂಗರೂಗಳ ಬೇಟೆ ಆರಂಭಿಸಿಬಿಟ್ಟರು. ಆಸ್ಟ್ರೇಲಿಯಾದ ಯಾವ ದಾಂಡಿಗನಿಗೂ ಮೂರಂಕಿ ಮೊತ್ತ ದಾಟಲು ಬಿಡದಂತೆ ಕಾಡಿದರು. ಆರ್ಸಿಬಿ ತಂಡದಲ್ಲಿ ಘೋರ ವೈಫಲ್ಯ ಅನುಭವಿಸಿದ್ದ ಸಿರಾಜ್ ಆಸ್ಟ್ರೇಲಿಯಾದಲ್ಲಿ ಐದು ವಿಕೆಟ್ ಗೊಂಚಲಿನ ಸಿಹಿ ಅನುಭವಿಸಿದರು. ನಂತರದಲ್ಲಿ ಶಾರ್ದೂಲ್ ಠಾಕೂರ್ ಮತ್ತು ಸುಂದರ್ ಪರಿಪೂರ್ಣ ಟೆಸ್ಟ್ ಬ್ಯಾಟ್ಸ್ಮನ್ಗಳಂತೆ ಆಡಿ ಆಸೀಸ್ ಬೌಲರ್ಗಳನ್ನು ದಣಿಸಿದರು.
ಆದರೆ, ಅದರ ಮುಂದಿನ ಭಾಗದಲ್ಲಿ ವೇಗದ ಬೌಲಿಂಗ್, ಗಾಬಾದ ಬೌನ್ಸಿ ಪಿಚ್, ನಾಲ್ಕನೇ ಇನ್ನಿಂಗ್ಸ್, ತವರಿನ ಅಂಗಳ ಹೀಗೆ ಎಲ್ಲಾ ಅಂಶಗಳೂ ಕಾಂಗರೂಗಳ ಗೆಲುವಿಗೆ ಪೂರಕವಾಗಿತ್ತು. ಚೇಸ್ ಮಾಡಲು ಬಂದ ಭಾರತಕ್ಕೆ ರೋಹಿತ್ ಶರ್ಮ ಬಹಳ ಬೇಗ ಔಟಾಗಿದ್ದು ಸೋಲಿನ ನಡುಕ ಹುಟ್ಟಿಸಿತ್ತು. ಯಾವತ್ತೂ ಆಸೀಸ್ ಮೇಲೆ ಮುನ್ನುಗಿ ಬಾರಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದ ರೋಹಿತ್ ಈ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿಬಿಟ್ಟರು. ನಂತರ ಬಂದ ಚೇತೇಶ್ವರ್ ಪೂಜಾರ ಹತ್ತಕ್ಕೂ ಹೆಚ್ಚು ಬೌನ್ಸರ್ಗಳಿಗೆ ದೇಹವನ್ನೊಡ್ಡಿ ಏಟು ತಿಂದರು. ಆದರೂ, ಸೋಲಿನ ದಾರಿ ತಪ್ಪುವಂತೆ ಮಾಡಿದ ಪೂಜಾರ ಅವರ ತಾಳ್ಮೆಯ ಬ್ಯಾಟಿಂಗ್, ಶುಭಮನ್ ಗಿಲ್ ಮತ್ತು ಪಂತ್ ಅವರ ಆಕ್ರಮಣದ ಫಲವೆಂಬಂತೆ ಭಾರತ ಊಹಿಸಲಾಗದ ರೀತಿಯಲ್ಲಿ ನಾಲ್ಕನೇ ಪಂದ್ಯವನ್ನು ಬಾಚಿಕೊಳ್ಳುವುದು ಸಾಧ್ಯವಾಯಿತು. ಭರ್ತಿ ಮೂವತ್ತೆರಡು ವರ್ಷಗಳ ನಂತರ ಕಾಂಗರೂ ಪಡೆ ಗಾಬಾ ಮೈದಾನದಲ್ಲಿ ಸೋಲು ಕಂಡಿತು.
ಅನಿರೀಕ್ಷಿತ ಮತ್ತು ಅವಿಸ್ಮರಣೀಯ ಗೆಲುವಿಗೆ ಸಾಕ್ಷಿಯಾದ ಭಾರತ
ಈ ಸರಣಿಯ ಗೆಲುವು ಕ್ರಿಕೆಟ್ ಪ್ರೇಮಿಗಳಿಗಷ್ಟೇ ಅಲ್ಲದೇ ಸ್ವತಃ ಭಾರತೀಯ ಆಟಗಾರರಿಗೂ ತೀರಾ ಅನಿರೀಕ್ಷಿತ. ಅಂದಹಾಗೆ, ನಾಲ್ಕನೇ ಪಂದ್ಯದಲ್ಲಿ ಸೋತರೂ ಭಾರತ ಕಳೆದುಕೊಳ್ಳುವುದಕ್ಕೆ ಏನೂ ಇರಲಿಲ್ಲ. ಏಕೆಂದರೆ ಅದಾಗಲೇ ಸೋತೇ ಬಿಡುತ್ತೇವೆ ಅಂದುಕೊಂಡಿದ್ದ ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಇಡೀ ಸರಣಿಯಲ್ಲಿ ಭಾರತದ ಪಾಲಿಗೆ ಅತ್ಯಂತ ಮಹತ್ವದ ಸಂಗತಿಯಾಗಿತ್ತು. ಅಷ್ಟಾದರೂ ನಾಲ್ಕನೇ ಪಂದ್ಯವನ್ನು ಗೆದ್ದು ಕಾಂಗರೂಗಳನ್ನು ನಖಶಿಖಾಂತ ಉರಿಸಿಬಿಟ್ಟರು ಭಾರತೀಯರು.
ಕೊವಿಡ್ ನಂತರ ನಡೆದ ಮೊದಲ ಸರಣಿ. ಐತಿಹಾಸಿಕ ಬಾರ್ಡರ್-ಗಾವಸ್ಕರ್ ಟ್ರೋಫಿ. ಆಸ್ಟ್ರೇಲಿಯಾದ ನೆಲ. ಅರ್ಧದಷ್ಟು ಅನನುಭವಿ ಆಟಗಾರರನ್ನು ಹೊಂದಿದ unusual ಕ್ರಿಕೆಟ್ ಟೀಮ್. ಪೂರ್ಣಕಾಲಿಕ ನಾಯಕನ ಮಾರ್ಗದರ್ಶನವಿಲ್ಲ.. ಇದೆಲ್ಲವನ್ನೂ ಯೋಚಿಸಿದರೆ ಈ ಸರಣಿ ಗೆಲುವು ಭಾರತದ ಪಾಲಿಗೆ ಅತ್ಯಂತ ವಿಶೇಷದ್ದು.
ಕೊಹ್ಲಿಯ ಅನುಪಸ್ಥಿತಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ಹಂಗಾಮಿ ನಾಯಕ ರಹಾನೆ, ಯಾವುದೇ ರೀತಿಯಲ್ಲಿ ಒತ್ತಡಕ್ಕೆ ಒಳಗಾಗದೇ, ಪ್ರಮುಖ ಆಟಗಾರರೆಲ್ಲ ಗಾಯಾಳುಗಳಾದರೂ ಸ್ಥೈರ್ಯ ಕಳೆದುಕೊಳ್ಳದೆ, ಅನುಭವವಿಲ್ಲದ ಹುಡುಗರನ್ನು ಸ್ಥಿತಪ್ರಜ್ಞತೆಯಿಂದ ಮುನ್ನಡೆಸಿದ್ದಕ್ಕಾಗಿ ಅಭಿನಂದನಾರ್ಹರು.
ಕೊರೊನಾ ಭೀತಿಯಿಂದಾಗಿ ಸ್ಥಗಿತವಾಗಿದ್ದ ಭಾರತೀಯ ಕ್ರಿಕೆಟ್ ಆಸೀಸ್ ಪ್ರವಾಸದೊಂದಿಗೆ ಶುಭಾರಂಭಗೊಂಡಿದೆ. ಟಿ-ಟ್ವೆಂಟಿ ಮತ್ತು ಬಹು ಮುಖ್ಯ ಹಾಗೂ ಐತಿಹಾಸಿಕವಾದ ಬಾರ್ಡರ್-ಗಾವಸ್ಕರ್ ಸರಣಿಯನ್ನು ಊಹಿಸಲಾಗದ ರೀತಿಯಲ್ಲಿ ಗೆದ್ದು, ಕ್ರಿಕೆಟ್ನ ನಿಜವಾದ ಗಮ್ಮತ್ತು ಇರುವುದು ಟೆಸ್ಟ್ನಲ್ಲಿ ಎನ್ನುವುದನ್ನು ಈ ಸರಣಿ ಮತ್ತೊಮ್ಮೆ ಸಾಬೀತು ಮಾಡಿದೆ.
ಲೇಖಕ ಡಾ.ಲಕ್ಷ್ಮೀಶ ಜೆ. ಹೆಗಡೆ ಪರಿಚಯ
ಹುಟ್ಟಿದ್ದು ಮಂಗಳೂರಿನಲ್ಲಿ. ಹತ್ತನೆಯ ತರಗತಿಯವರೆಗೆ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ವೈದ್ಯನಾಗುವ ಹಂಬಲದಿಂದ ಸಾಂಸ್ಕೃತಿಕ ನಗರಿಯ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದರು. ನಂತರ ಮುಂಬೈನ ಲೋಕಮಾನ್ಯ ತಿಲಕ್ ಮೆಡಿಕಲ್ ಕಾಲೇಜಿನಲ್ಲಿ ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲಾ ಆಸ್ಪತ್ರೆಯ ಕೊವಿಡ್ ಐಸಿಯುನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ನೋವು ಶಮನ ಮಾಡುವುದನ್ನು ವೃತ್ತಿಯಾಗಿ ಹಾಗೂ ಬರವಣಿಗೆಯನ್ನು ಪ್ರವೃತ್ತಿಯಾಗಿ ಅಳವಡಿಸಿಕೊಂಡಿದ್ದಾರೆ.
Published On - 5:37 pm, Tue, 19 January 21