ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಸ್ಯಾಂಟ್ನರ್
The Hundred 2024: ದಿ ಹಂಡ್ರೆಡ್ ಲೀಗ್ನ 29ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ಕ್ರಿಕೆಟಿಗ ಮಿಚೆಲ್ ಸ್ಯಾಂಟ್ನರ್ ಅದ್ಭುತ ಕ್ಯಾಚ್ ಹಿಡಿದು ಸಂಚಲನ ಸೃಷ್ಟಿಸಿದ್ದಾರೆ. ಲಂಡನ್ ಸ್ಪಿರಿಟ್ ವಿರುದ್ಧದ ಈ ಪಂದ್ಯದಲ್ಲಿ ನಾರ್ಥನ್ ಸೂಪರ್ ಚಾರ್ಜರ್ಸ್ ಪರ ಕಣಕ್ಕಿಳಿದ ಸ್ಯಾಂಟ್ನರ್ ಅತ್ಯುತ್ತಮ ಫೀಲ್ಡಿಂಗ್ನೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಮಿಚೆಲ್ ಸ್ಯಾಂಟ್ನರ್ ಅವರ ಫೀಲ್ಡಿಂಗ್ ಪರಾಕ್ರಮ ಮುಂದುವರೆದಿದೆ. ಓವಲ್ ಇನ್ವಿನ್ಸಿಬಲ್ಸ್ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಲೈನ್ನಲ್ಲಿ ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದು ಮಿಂಚಿದ್ದ ಸ್ಯಾಂಟ್ನರ್ ಇದೀಗ ಬ್ಯಾಕ್ ರನ್ನಿಂಗ್ ಕ್ಯಾಚ್ನೊಂದಿಗೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಲೀಡ್ಸ್ನ ಹೆಂಡಿಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನಾರ್ಥನ್ ಸೂಪರ್ ಚಾರ್ಜರ್ಸ್ ಮತ್ತು ಲಂಡನ್ ಸ್ಪಿರಿಟ್ ತಂಡಗಳು ಮುಖಾಮುಖಿಯಾಗಿದ್ದವು.
ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡದ ಪರ ಮೈಕೆಲ್ ಪೆಪ್ಪರ್ ಹಾಗೂ ಜೆನ್ನಿಂಗ್ಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ರೀಸ್ ಟೋಪ್ಲಿ ಎಸೆದ ಪಂದ್ಯದ 11ನೇ ಎಸೆತದಲ್ಲಿ ಮೈಕೆಲ್ ಪೆಪ್ಪರ್ ಲಾಂಗ್ ಆನ್ನತ್ತ ಬಾರಿಸಿದರು. ಇದೇ ವೇಳೆ ಮಿಡ್ ಆನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಮಿಚೆಲ್ ಸ್ಯಾಂಟ್ನರ್ ಹಿಮ್ಮುಖವಾಗಿ ಓಡಿ ಹೋಗಿ ಅದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದರು. ಸ್ಯಾಂಟ್ನರ್ ಅವರ ಈ ಬ್ಯಾಕ್ ರನ್ನಿಂಗ್ ನೋಡಿ ಇಡೀ ಪ್ರೇಕ್ಷಕರು ನಿಬ್ಬೆರಗಾದರು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನಾರ್ಥನ್ ಸೂಪರ್ ಚಾರ್ಜರ್ಸ್ ತಂಡವು 44 ಎಸೆತಗಳಲ್ಲಿ 61 ರನ್ ಗಳಿಸಿದ್ದ ವೇಳೆ ಮಳೆ ಬಂದಿದ್ದರಿಂದ ಫಲಿತಾಂಶ ನಿರ್ಧರಿಸಲು ಡಕ್ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು. ಅದರಂತೆ ನಾರ್ಥನ್ ಸೂಪರ್ ಚಾರ್ಜರ್ಸ್ ತಂಡವು ಡಿಎಲ್ಎಸ್ ನಿಯಮದ ಪ್ರಕಾರ ಈ ಪಂದ್ಯದಲ್ಲಿ 21 ರನ್ಗಳ ಜಯ ಸಾಧಿಸಿದೆ.