Olympics Records: ವಿಶ್ವ ದಾಖಲೆಯ 24-1 ಅಂತರದ ಗೆಲುವು: ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡ ಎಷ್ಟು ಚಿನ್ನದ ಪದಕಗಳನ್ನು ಗೆದ್ದಿದೆ ಗೊತ್ತಾ..?

| Updated By: ಝಾಹಿರ್ ಯೂಸುಫ್

Updated on: Jul 22, 2021 | 3:56 PM

how many gold medals won by india in olympics: ಟೋಕಿಯೋ ಒಲಿಂಪಿಕ್ಸ್ ಬಳಿಕ ಸತತ 3 ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದ ಭಾರತೀಯ ಹಾಕಿ ತಂಡ 1980ರ ಮಾಸ್ಕೋ ಒಲಿಂಪಿಕ್ಸ್ ಮೂಲಕ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತು.

Olympics Records: ವಿಶ್ವ ದಾಖಲೆಯ 24-1 ಅಂತರದ ಗೆಲುವು: ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡ ಎಷ್ಟು ಚಿನ್ನದ ಪದಕಗಳನ್ನು ಗೆದ್ದಿದೆ ಗೊತ್ತಾ..?
ಸಾಂದರ್ಭಿಕ ಚಿತ್ರ
Follow us on

ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಿ 124 ವರ್ಷಗಳು ಕಳೆದಿವೆ. ಚೊಚ್ಚಲ ಬಾರಿ 1896 ರಲ್ಲಿ ಅಥೆನ್ಸ್ ನಗರದಲ್ಲಿ ಒಲಿಂಪಿಕ್ಸ್ ಶುರುವಾಗಿತ್ತು. ಆದರೆ ಭಾರತವು ಒಲಿಂಪಿಕ್ಸ್​ ಕ್ರೀಡಾಕೂಟವನ್ನು ಪ್ರತಿನಿಧಿಸಿದ್ದು 1990 ರಲ್ಲಿ ಎಂಬುದು ವಿಶೇಷ. ಕಳೆದ ಒಂದು ಶತಮಾನದಿಂದಲೂ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರೂ, ಪ್ರಶಸ್ತಿ ಪಟ್ಟಿಯಲ್ಲಿ ಮಹತ್ವದ ಸಾಧನೆ ಮೆರೆಯಲು ಸಾಧ್ಯವಾಗಿಲ್ಲ ಎಂಬುದೇ ಸತ್ಯ. ಇದಾಗ್ಯೂ ಒಂದು ಕಾಲದಲ್ಲಿ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್​ನ ಹಾಕಿ ಅಂಗಳದಲ್ಲಿ ಪಾರುಪತ್ಯ ಸ್ಥಾಪಿಸಿತ್ತು. ಇದಕ್ಕೆ ಸಾಕ್ಷಿಯೇ ಭಾರತ ಇದುವರೆಗೆ ಗೆದ್ದಿರುವ 9 ಚಿನ್ನದ ಪದಕಗಳ ಪೈಕಿ ಹಾಕಿ ಕ್ರೀಡೆಯಿಂದಲೇ 8 ಸ್ವರ್ಣ ಪದಕಗಳು ಬಂದಿರುವುದು. ಅಷ್ಟೇ ಅಲ್ಲದೆ ಭಾರತಕ್ಕೆ ಚೊಚ್ಚಲ ಬಾರಿ ಚಿನ್ನದ ಪದಕ ತಂದುಕೊಟ್ಟಿದ್ದೂ ಕೂಡ ಹಾಕಿ ತಂಡ ಎಂಬುದು ಇಲ್ಲಿ ವಿಶೇಷ.

1928ರಲ್ಲಿ ಆಮ್ಸ್ಟರ್‌ಡ್ಯಾಮ್ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡವು ಫೈನಲ್​ನಲ್ಲಿ ನೆದರ್‌ಲ್ಯಾಂಡ್ಸ್ ತಂಡವನ್ನು 3-0 ಗೋಲುಗಳಿಂದ ಸೋಲಿಸುವ ಮೂಲಕ ಚೊಚ್ಚಲ ಬಾರಿ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಹಾಕಿ ದಂತಕಥೆ ಧ್ಯಾನ್ ಚಂದ್ ಮೂರು ಬಾರಿ ಗೋಲು ಗಳಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

1932 ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲೂ ಪಾರುಪತ್ಯ ಮೆರೆದ ಭಾರತೀಯ ಹಾಕಿ ತಂಡ ಜಪಾನ್ ತಂಡವನ್ನು 11-1ರಿಂದ ಸೋಲಿಸಿ ದಾಖಲೆ ಬರೆದಿತ್ತು. ಅಷ್ಟೇ ಅಲ್ಲದೆ ಫೈನಲ್​ನಲ್ಲಿ ಯುಎಸ್ಎ ತಂಡವನ್ನು 24-1 ಗೋಲುಗಳಿಂದ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿತು.

1936 ಬರ್ಲಿನ್ ಒಲಿಂಪಿಕ್ಸ್​ನಲ್ಲಿ ಆತಿಥೇಯ ಜರ್ಮನಿ ವಿರುದ್ಧ 8-1 ಅಂತರದಿಂದ ಗೆಲ್ಲುವ ಮೂಲಕ ಭಾರತ ತಂಡ ಮೂರನೇ ಬಾರಿ ಒಲಿಂಪಿಕ್ಸ್ ಚಿನ್ನದ ಪದಕಕ್ಕೆ ಕೊರೊಲೊಡ್ಡಿತು.

– 12 ಸುದೀರ್ಘ ವರ್ಷಗಳ ನಂತರ 1948 ರ ಲಂಡನ್ ಒಲಿಂಪಿಕ್ಸ್ ಮತ್ತೊಮ್ಮೆ ಭಾರತವು ಫೈನಲ್‌ ಪ್ರವೇಶಿಸಿತು. ಫೈನಲ್‌ನಲ್ಲಿ ಅವರು ಗ್ರೇಟ್ ಬ್ರಿಟನ್ ತಂಡದ ವಿರುದ್ಧ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿದ ಭಾರತೀಯ ಹಾಕಿ ತಂಡ 4ನೇ ಬಾರಿ ಒಲಿಂಪಿಕ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಇದು ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ಸ್ ಪದಕವಾಗಿತ್ತು. ಅಷ್ಟೇ ಅಲ್ಲದೆ ಈ ವಿಜಯವು ಭಾರತವನ್ನು ಆಳಿದ್ದ ಗ್ರೇಟ್ ಬ್ರಿಟನ್ ವಿರುದ್ದ ಬಂದಿರುವುದು ಮತ್ತೊಂದು ವಿಶೇಷ.

1952ರ ಹೆಲ್ಸಿಂಕಿ ಒಲಿಂಪಿಕ್ಸ್​ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 6-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಭಾರತ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿತು.

1956 ಮೆಲ್ಬೋರ್ನ್​ ಒಲಿಂಪಿಕ್ಸ್​ನ ಫೈನಲ್ ಪಂದ್ಯವು ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಏಕೆಂದರೆ ಅದೇ ಮೊದಲ ಬಾರಿ ಭಾರತ-ಪಾಕಿಸ್ತಾನ್ ಫೈನಲ್​ನಲ್ಲಿ ಮುಖಾಮುಖಿಯಾಗಿತ್ತು. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಫೈನಲ್​ನಲ್ಲಿ ಭಾರತವು
1-0 ಅಂತರದಲ್ಲಿ ಜಯಗಳಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

1964ರ ಟೋಕಿಯೊ ಒಲಿಂಪಿಕ್ಸ್​ನ ಫೈನಲ್​ನಲ್ಲಿ ಏಷ್ಯಾದ ಪ್ರತಿಸ್ಪರ್ಧಿಗಳು ಮತ್ತೊಮ್ಮೆ ಮುಖಾಮುಖಿಯಾದರು. ಆದರೆ ಈ ಬಾರಿ ಕೂಡ ಪಾಕ್​ಗೆ ಸೋಲುಣಿಸುವ ಮೂಲಕ ಭಾರತ ತಮ್ಮ 7ನೇ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡಿತು

– ಟೋಕಿಯೋ ಒಲಿಂಪಿಕ್ಸ್ ಬಳಿಕ ಸತತ 3 ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದ ಭಾರತೀಯ ಹಾಕಿ ತಂಡ 1980ರ ಮಾಸ್ಕೋ ಒಲಿಂಪಿಕ್ಸ್ ಮೂಲಕ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತು. ಫೈನಲ್​ನಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಹಾಕಿಯಲ್ಲಿ 8ನೇ ಚಿನ್ನದ ಪದಕ ಗೆದ್ದರು. ಇದಾದ ಬಳಿಕ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿಲ್ಲ. ಇದೀಗ 41 ವರ್ಷಗಳ ಬಳಿಕ ಟೋಕಿಯೋ ಒಲಿಂಪಿಕ್ಸ್​ ಮೂಲಕ ಮತ್ತೊಮ್ಮೆ ಭಾರತೀಯ ಹಾಕಿ ತಂಡ ಚಿನ್ನದ ಪದಕ ತಂದು ಕೊಡುವ ವಿಶ್ವಾಸದಲ್ಲಿದೆ.

 

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

 

ಇದನ್ನೂ ಓದಿ: Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್

Published On - 3:44 pm, Thu, 22 July 21