ಟೊಕಿಯೊ ಒಲಂಪಿಕ್ಸ್: ಒಲಂಪಿಕ್ಸ್ನಲ್ಲಿ ಪದಕದ ಬೇಟೆಗೆ ಮುನ್ನುಗ್ಗುತ್ತಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು(PV Sindhu) ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಅಕನೆ ಯಾಮಗುಚಿ(Akane Yamaguchi) ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮುಸಾಷಿನೊ ಫಾರೆಸ್ಟ್ ಪ್ಲಾಜಾದಲ್ಲಿ(Musashino Forest Sport Plaza) ನಡೆಯುತ್ತಿರುವ ಪಂದ್ಯದಲ್ಲಿ 21-13, 22-20ರ ಅಂತರದಿಂದ ಸಿಂಧು ಯಾಮಗುಚಿ ವಿರುದ್ಧ ಗೆಲುವು ದಾಖಲಿಸಿದ್ದಾರೆ.
ಮೊದಲಿಗೆ ಅಕನೆ ಯಾಮಗುಚಿ ಆಕ್ರಮಣಕಾರಿ ಆಟವಾಡುತ್ತಾ 6-5 ರ ಅಂತರದಲ್ಲಿ ಸಿಂಧುವಿಗಿಂತ ಮುಂದಿದ್ದರು. ಆದರೆ ನಂತರ ಲಯ ಕಂಡುಕೊಂಡ ಸಿಂಧು ಅವರಿಗೆ ಯಾಮಗುಚಿ ಸರಿಸಾಟಿಯಾಗಲೇ ಇಲ್ಲ. ಕೇವಲ 23 ನಿಮಿಷಗಳಲ್ಲಿ ಮೊದಲ ಸೆಟ್ ಅನ್ನು 21-13 ಅಂತರದಲ್ಲಿ ಸಿಂಧು ವಶಪಡಿಸಿಕೊಂಡರು. ಎರಡನೇ ಸೆಟ್ನಲ್ಲಿ ಮೊದಲಿಗೆ ಸಿಂಧು ಅವರು 11-6ರಿಂದ ಮುಂದಿದ್ದರು. ಆದರೆ ಅಲ್ಲಿಂದ ತಿರುಗಿ ಬಿದ್ದ ಯಾಮಗುಚಿ ತೀವ್ರ ಪೈಪೋಟಿ ನೀಡಿದರು. ಕೊನೆಗೆ 20-20ರಲ್ಲಿ ಸೆಟ್ ಸಮಬಲವಾಗಿತ್ತು. ಮತ್ತೆ ಲಯ ಕಂಡುಕೊಂಡ ಸಿಂಧು ಎರಡನೇ ಸೆಟ್ ಅನ್ನು 22-20ರಿಂದ ಗೆದ್ದರು. ಪಂದ್ಯದ ಗೆಲುವಿನಿಂದ ಪಿ.ವಿ.ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಜಪಾನ್ನ ಅಕನೆ ಯಾಮಗುಚಿ ಅವರು ಈ ಮೊದಲು ವಿಶ್ವದ ಮೊದಲ ಶ್ರೇಯಾಂಕಿತ ಆಟಗಾರ್ತಿಯಾಗಿದ್ದರು. ಈಗ ವಿಶ್ವದ ಐದನೇ ಶ್ರೇಯಾಂಕದಲ್ಲಿದ್ಧಾರೆ. ಈ ಮೊದಲೂ ಸಹ ಭಾರತದ ಸಿಂಧು ಅವರಿಗೆ ಜಪಾನ್ ಆಟಗಾರ್ತಿಯಿಂದ ತೀವ್ರ ಪೈಪೋಟಿ ಎದುರಾಗುತ್ತಿತ್ತು. ಈ ಮೊದಲು ಆಲ್ ಇಂಗ್ಲೆಂಡ್ ಓಪನ್ನಲ್ಲಿ ಈರ್ವರೂ ಎದುರಾಳಿಯಾಗಿದ್ದಾಗ ತೀವ್ರತರದ ಪೈಪೋಟಿ ಏರ್ಪಟ್ಟಿತ್ತು. ಅದನ್ನು ಸಿಂಧು ಅವರು 6-21, 21-16, 21-19 ಅಂತರದಲ್ಲಿ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಯಾಮಗುಚಿ ಅವರು ರಿಯೊ ಒಲಂಪಿಕ್ಸ್ನಲ್ಲೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಮೊದಲು ಸಿಂಧು ಹಾಗೂ ಯಾಮಗುಚಿ ನಡುವೆ ಒಟ್ಟು ಹದಿನೆಂಟು ಪಂದ್ಯಗಳು ನಡದಿದ್ದು ಅದರಲ್ಲಿ ಸಿಂಧು ಅವರು 11ರಲ್ಲಿ ಹಾಗೂ ಯಾಮಗುಚಿ ಏಳರಲ್ಲಿ ಜಯ ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಸಿಂಧು ಜಯದೊಂದಿಗೆ ಯಾಮಗುಚಿ ವಿರುದ್ಧ ಜಯದ ಸಂಖ್ಯೆ 12ಕ್ಕೇರಿದಂತಾಗಿದೆ. ಪ್ರಸ್ತುತ ಟೊಕಿಯೊ ಒಲಂಪಿಕ್ಸ್ನಲ್ಲಿ ಪಿ.ವಿ. ಸಿಂಧು ಅವರು 16ರ ಘಟ್ಟದಲ್ಲಿ ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಟ್ ಅವರ ವಿರುದ್ಧ 21-15, 21-13 ಅಂತರದಲ್ಲಿ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದರು.
ಇದನ್ನೂ ಓದಿ:
Tokyo Olympics: ಒಲಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ ಲವ್ಲಿನಾ ಬೊರ್ಗೊಹೈನ್!
MS Dhoni: ಹೊಸ ಕೇಶ ವಿನ್ಯಾಸದಿಂದ ಮಿಂಚುತ್ತಿದ್ದಾರೆ ಕ್ಯಾಪ್ಟನ್ ಕೂಲ್ ಧೋನಿ!
(PV Sindhu won the quarter final match of badminton in Tokyo Olympics and enters to semifinal)
Published On - 2:56 pm, Fri, 30 July 21