ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಅಧಿಕೃತ ಚಾಲನೆ ಸಿಕ್ಕಿ ಎರಡು ದಿನಗಳಾಗಿದ್ದು ಕ್ರೀಡಾಕೂಟದ ಕಾವು ಹೆಚ್ಚುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಸಾಕಷ್ಟು ವಿಶೇಷವಾಗಿದೆ. ಕಳೆದ ವರ್ಷ ನಡೆಯಬೇಕಿದ್ದ ಕ್ರೀಡಾಕೂಟ ಕೊರೋನಾ ವೈರಸ್ ಕಾರಣದಿಂದ ಬರೋಬ್ಬರಿ ಒಂದು ವರ್ಷಕ್ಕೆ ಮುಂದಕ್ಕೋಗಿ ಶುರುವಾಗಿದೆ.
ವಿಶೇಷ ಎಂದರೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಜ್ಯೋತಿ ಉರಿಸಲು ಇದೇ ಮೊದಲ ಬಾರಿಗೆ ಹೈಡ್ರೋಜನ್ ಬಳಕೆಯನ್ನು ಮಾಡಲಾಗಿದೆ. ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಜ್ಯೋತಿ ಉರಿಸಲು ಸಾಮಾನ್ಯವಾಗಿ ಪ್ರೋಪೇನ್ ಅನ್ನು ಬಳಸಲಾಗುತ್ತಿತ್ತು. ಆದಾಗ್ಯೂ 1928 ರಲ್ಲಿ ಆಮ್ಸ್ಟರ್‌ಡ್ಯಾಮ್ ಕ್ರೀಡಾಕೂಟಕ್ಕಾಗಿ ಮೊದಲ ಆಧುನಿಕ ಕೌಲ್ಡ್ರಾನ್ ಅನ್ನು ಬೆಳಗಿಸಿದಾಗಿನಿಂದ ಮೆಗ್ನೀಸಿಯಮ್, ಗನ್‌ಪೌಡರ್, ರಾಳ ಮತ್ತು ಆಲಿವ್ ಎಣ್ಣೆಯನ್ನು ಸಹ ಉಪಯೋಗಿಸುತ್ತಾರೆ. ಬರ್ಲಿನ್ಗೆ ಟಾರ್ಚ್ ರಿಲೇ ಕೂಡ ಪರಿಚಯಿಸಿದ್ದು ಎಂಟು ವರ್ಷಗಳ ನಂತರ. ಆದರೆ, ಹೈಡ್ರೋಜನ್ ಬಳಕೆ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ.
ಹೈಡ್ರೋಜನ್ ಬಳಕೆ ಮಾಡಲು ಕಾರಣ ಏನೆಂದರೆ ಇದು ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುವುದಿಲ್ಲ. ಇದನ್ನು ಟೋಕಿಯೋದ ಕೌಲ್ಡ್ರಾನ್ ಫುಕುಶಿಮಾ ಕಾರ್ಖಾನೆಯಿಂದ ತೆಗೆದುಕೊಳ್ಳಲಾಗಿದೆಯಂತೆ.
ಈ ಹಿಂದೆ ಲಂಡನ್ ಕ್ರೀಡಾಕೂಟದ ಸಂಘಟಕರು 2012 ರಲ್ಲಿ ಕಡಿಮೆ ಇಂಗಾಲದ ಟಾರ್ಚ್‌ನ ಯೋಜನೆಗಳನ್ನು ತಯಾರಿಸಲು ಮುಂದಾಗಿದ್ದರು. ಆದರೆ ಅದು ಸರಿಯಾದ ಸಮಯಕ್ಕೆ ತಯಾರಾಗದ ಕಾರಣ ಈ ಯೋಜನೆಯನ್ನು ಕೈಬಿಡಲಾಯಿತು. ಬೇರೆ ದಾರಿಯಿಲ್ಲದೆ ಪ್ರೋಪೇನ್ ಮತ್ತು ಬ್ಯುಟೇನ್ ಮಿಶ್ರಣವನ್ನು ಬಳಸಿ ಜ್ಯೋತಿ ತಯಾರಿಸಿದ್ದರು. ಇಷ್ಟೆಲ್ಲಾ ಇತಿಹಾಸ ಹೊಂದಿರುವ ಈ ಒಲಿಂಪಿಕ್ಸ್ ಜ್ಯೋತಿಯನ್ನು ಉರಿಸಲು ಟೋಕಿಯೋ ಹೈಡ್ರೋಜನ್ ಬಳಕೆ ಮಾಡಿರುವುದು ವಿಶೇಷವಾದ ಸಂಗತಿಯಾಗಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬೇಟೆ ಶುರುವಾಗಿದೆ. ಜುಲೈ 24ರ ಶನಿವಾರ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯ್ ಚಾನು ಭಾರತಕ್ಕೆ ಬೆಳ್ಳಿಯ ಪದಕ ಗೆದ್ದಿದ್ದರು. ಇದು ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸಿದ ಮೊದಲ ಪದಕ ಮತ್ತು ಒಲಿಂಪಿಕ್ಸ್‌ನಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಸಿಗುತ್ತಿರುವ ಎರಡನೇ ಪದಕ.
ಮೊದಲ ಪ್ರಯತ್ನದಲ್ಲೇ ಮೀರಾಬಾಯಿ ಚಾನು ಅವರು ಸ್ನ್ಯಾಚ್ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಲೀಲಾಜಾಲವಾಗಿ ಎತ್ತುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 87 ಕೆ.ಜಿ. ವೇಟ್ ಲಿಫ್ಟ್ ಮಾಡುವ ಸ್ಯಾಚ್ ಲಿಫ್ಟ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಇನ್ನು ಚೀನಾದ ಹ್ಯೂ ಜಿಹೈ 94 ಕೆ.ಜಿ ವೇಟ್‌ಲಿಫ್ಟ್ ಮಾಡುವ ಮೂಲಕ ಒಲಿಂಪಿಕ್ಸ್ ದಾಖಲೆ ಬರೆದರು.
Tokyo Olympics 2020: ಪಿವಿ ಸಿಂಧೂ ಭರ್ಜರಿ ಆರಂಭ: ಇಸ್ರೇಲ್ ವಿರುದ್ಧ ಭಾರೀ ಅಂತರದ ಗೆಲುವು
(Tokyo Olympic flame is the first powered by hydrogen)