4 ರನ್​ಗಳ ಅಗತ್ಯತೆ… ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಜಯ ತಂದುಕೊಟ್ಟ ವೆಂಕಟೇಶ್ ಅಯ್ಯರ್

|

Updated on: Aug 15, 2024 | 2:20 PM

Venkatesh Iyer: ಭಾರತೀಯ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಒನ್ ಡೇ ಕಪ್ ಟೂರ್ನಿಯಲ್ಲಿ ಲಂಕಾಶೈರ್ ಪರ ಆಡುತ್ತಿದ್ದಾರೆ. ಇದೇ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರಾದ ಪೃಥ್ವಿ ಶಾ ಹಾಗೂ ಯುಜ್ವೇಂದ್ರ ಚಹಲ್ ಕೂಡ ಕಾಣಿಸಿಕೊಳ್ಳುತ್ತಿದ್ದು, ಇಬ್ಬರು ನಾರ್ಥಾಂಪ್ಟನ್‌ಶೈರ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಒನ್ ಡೇ ಕಪ್​ನಲ್ಲಿ ವೆಂಕಟೇಶ್ ಅಯ್ಯರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲಂಕಾಶೈರ್ ಮತ್ತು ವೋರ್ಸೆಸ್ಟರ್‌ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ವೋರ್ಸೆಸ್ಟರ್‌ಶೈರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಲಂಕಾಶೈರ್ ಪರ ನಾಯಕ ಜೋಶ್ ಬೊಹಾನನ್ 87 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಲಂಕಾಶೈರ್ ತಂಡವು 50 ಓವರ್​ಗಳಲ್ಲಿ 237 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ವೋರ್ಸೆಸ್ಟರ್‌ಶೈರ್ ಪರ ನಾಯಕ ಜೇಕ್ ಲಿಬ್ಬಿ 83 ರನ್ ಬಾರಿಸಿದರೆ, ಟಾಮ್ ಟೇಲರ್ 41 ರನ್ ಸಿಡಿಸಿದರು. ಈ ಮೂಲಕ 45.2 ಓವರ್​ಗಳಲ್ಲಿ 198 ರನ್ ಕಲೆಹಾಕಿತು. ಅತ್ತ ಅತ್ಯುತ್ತಮ ದಾಳಿ ಸಂಘಟಿಸಿದ ಲಂಕಾಶೈರ್ ಬೌಲರ್​ಗಳು 8 ವಿಕೆಟ್ ಕಬಳಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟಾಮ್ ಹಿನ್ಗೆ ಹಾಗೂ ಹ್ಯಾರಿ ಡಾರ್ಲಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು.

ಪರಿಣಾಮ ಕೊನೆಯ 12 ಎಸೆತಗಳಲ್ಲಿ 16 ರನ್​ಗಳ ಅಗತ್ಯತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ವೆಂಕಟೇಶ್ ಅಯ್ಯರ್ ಮೊದಲ ನಾಲ್ಕು ಎಸೆತಗಳಲ್ಲಿ 12 ರನ್ ಬಿಟ್ಟುಕೊಟ್ಟರು. ಅಂತಿಮ 8 ಎಸೆತಗಳಲ್ಲಿ ಕೇವಲ 4 ರನ್​ಗಳ ಅಗತ್ಯತೆಯಿತ್ತು. ಈ ವೇಳೆ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್​ಗಳನ್ನು ಕಬಳಿಸುವ ಮೂಲಕ ವೆಂಟಕೇಶ್ ಅಯ್ಯರ್ ಲಂಕಾಶೈರ್ ತಂಡಕ್ಕೆ 3 ರನ್​ಗಳ ರೋಚಕ ಗೆಲುವು ತಂದುಕೊಟ್ಟರು. ಇದೀಗ ವೆಂಕಿಯ ಬೆಂಕಿ ಬೌಲಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.