ಸ್ವಾತಂತ್ರ್ಯ ನಂತರ ಟೀಂ ಇಂಡಿಯಾ ತನ್ನ ಮೊದಲ ಏಕದಿನ ಪಂದ್ಯವನ್ನು ಯಾರ ವಿರುದ್ಧ, ಯಾವಾಗ ಆಡಿತ್ತು? ಫಲಿತಾಂಶ ಏನಾಗಿತ್ತು ಗೊತ್ತಾ?
Indian Cricket Team: ಭಾರತಕ್ಕೆ 1947 ರಲ್ಲೇ ಸ್ವಾತಂತ್ರ್ಯ ಸಿಕ್ಕರೂ, ಭಾರತದಲ್ಲಿ ಕ್ರಿಕೆಟ್ ಬೆಳೆಯಲು ಸಾಕಷ್ಟು ಸಮಯವೇ ಬೇಕಾಯಿತು. ಅದರಂತೆ ಸ್ವಾತಂತ್ರ್ಯ ಸಿಕ್ಕ ಬರೋಬ್ಬರಿ 27 ವರ್ಷಗಳ ನಂತರ ಅಂದರೆ ಜುಲೈ 13, 1974 ರಂದು ಟೀಂ ಇಂಡಿಯಾ ತನ್ನ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಟೀಂ ಇಂಡಿಯಾ ಬರೋಬ್ಬರಿ 1058 ಏಕದಿನ ಪಂದ್ಯಗಳನ್ನು ಆಡಿದೆ.
ಇಂದು ಇಡೀ ದೇಶ 78 ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಆಗಸ್ಟ್ 15, 1947 ರಂದು ಬ್ರಿಟಿಷರ ಅಧೀನದಿಂದ ಸ್ವಾತಂತ್ರವಾದ ಭಾರತ ಅಂದಿನಿಂದ ಅನೇಕ ರಂಗಗಳಲ್ಲಿ ಯಶಸ್ಸನ್ನು ಸಾಧಿಸಿದೆ. ಇದರಲ್ಲಿ ಕ್ರಿಕೆಟ್ ಸಹ ಒಂದಾಗಿದೆ. ಕ್ರಿಕೆಟ್ ಧರ್ಮ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಕ್ರಿಕೆಟ್ಗೆ ವಿಶೇಷವಾದ ಪ್ರಾಧಾನ್ಯತೆ ಇದೆ. ಹಾಗಾಗಿಯೇ ಬಿಸಿಸಿಐ, ಕ್ರಿಕೆಟ್ ಲೋಕದ ದೊಡ್ಡಣ್ಣನಾಗಿ ಬೆಳೆಯಲು ಸಾಧ್ಯವಾಗಿದೆ. ಅಲ್ಲದೆ ವಿಶ್ವದ ಬಲಿಷ್ಠ ಕ್ರಿಕೆಟ್ ತಂಡಗಳಲ್ಲಿ ಒಂದಾಗಿರುವ ಟೀಂ ಇಂಡಿಯಾ ಸ್ವಾತಂತ್ರವಾದ ನಂತರ ಇದುವರೆಗೆ ನಾಲ್ಕು ವಿಶ್ವಕಪ್ಗಳನ್ನು ಗೆದ್ದುಕೊಂಡಿದೆ ಇದರಲ್ಲಿ 2 ಏಕದಿನ ವಿಶ್ವಕಪ್ಗಳಿದ್ದರೆ, ಇನ್ನೇರಡು ಟಿ20 ವಿಶ್ವಕಪ್ಗಳು ಸೇರಿವೆ. ಇದೀಗ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ, ಸ್ವಾತಂತ್ರ್ಯ ಸಿಕ್ಕ ನಂತರ ಟೀಂ ಇಂಡಿಯಾ ತನ್ನ ಮೊದಲ ಏಕದಿನ ಪಂದ್ಯವನ್ನು ಯಾವಾಗ? ಯಾರ ವಿರುದ್ಧ ಆಡಿತ್ತು? ಆ ಪಂದ್ಯದ ಫಲಿತಾಂಶ ಏನಾಗಿತ್ತು? ಎಂಬುದರ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಆಂಗ್ಲರ ವಿರುದ್ಧವೇ ಮೊದಲ ಏಕದಿನ
ವಾಸ್ತವವಾಗಿ ಭಾರತಕ್ಕೆ 1947 ರಲ್ಲೇ ಸ್ವಾತಂತ್ರ್ಯ ಸಿಕ್ಕರೂ, ಭಾರತದಲ್ಲಿ ಕ್ರಿಕೆಟ್ ಬೆಳೆಯಲು ಸಾಕಷ್ಟು ಸಮಯವೇ ಬೇಕಾಯಿತು. ಅದರಂತೆ ಸ್ವಾತಂತ್ರ್ಯ ಸಿಕ್ಕ ಬರೋಬ್ಬರಿ 27 ವರ್ಷಗಳ ನಂತರ ಅಂದರೆ ಜುಲೈ 13, 1974 ರಂದು ಟೀಂ ಇಂಡಿಯಾ ತನ್ನ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಟೀಂ ಇಂಡಿಯಾ ಬರೋಬ್ಬರಿ 1058 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ ಹಲವಾರು ಸ್ಮರಣೀಯ ಗೆಲುವನ್ನು ಸಹ ಕಂಡಿದೆ. ಆದರೆ ಸ್ವಾತಂತ್ರ್ಯ ಬಳಿಕ ಟೀಂ ಇಂಡಿಯಾ ಆಡಿದ್ದ ಮೊದಲ ಏಕದಿನ ಪಂದ್ಯ ಮಾತ್ರ ಭಾರತೀಯ ಕ್ರಿಕೆಟ್ಗೆ ಅವಿಸ್ಮರಣೀಯ ಕ್ಷಣವಾಗಿದೆ. ವಾಸ್ತವವಾಗಿ ಟೀಂ ಇಂಡಿಯಾ ಸ್ವಾತಂತ್ರ್ಯ ಸಿಕ್ಕ ಬಳಿಕ ತನ್ನ ಮೊದಲ ಏಕದಿನ ಪಂದ್ಯವನ್ನು ಆಂಗ್ಲರ ವಿರುದ್ಧವೇ ಆಡಿತ್ತು. ಇಂಗ್ಲೆಂಡ್‌ನ ಐತಿಹಾಸಿಕ ಲೀಡ್ಸ್ ಮೈದಾನದಲ್ಲಿ ನಡೆದಿದ್ದ ತಲಾ 55 ಓವರ್ಗಳ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ಮೈಕ್ ಡೆನ್ನೆಸ್ ಕೈನಲ್ಲಿದ್ದರೆ, ಟೀಂ ಇಂಡಿಯಾವನ್ನು ಅಜಿತ್ ವಾಡೇಕರ್ ಮುನ್ನಡೆಸಿದ್ದರು.
ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು?
ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಮೈಕ್ ಡೆನ್ನೆಸ್ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪೂರ್ಣ 55 ಓವರ್ಗಳನ್ನು ಆಡಲು ಸಾಧ್ಯವಾಗದೆ, 53.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 265 ರನ್ ಕಲೆಹಾಕಿತ್ತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸುನಿಲ್ ಗವಾಸ್ಕರ್ 35 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 28 ರನ್‌ಗಳ ಕಾಣಿಕೆ ನೀಡಿದರು. ತಂಡದ ಪರ ನಾಯಕನ ಇನ್ನಿಂಗ್ಸ್ ಆಡಿದ್ದ ಅಜಿತ್ ವಾಡೇಕರ್ 82 ಎಸೆತಗಳಲ್ಲಿ 10 ಬೌಂಡರಿ ಸಹಿತ 67 ರನ್ ಬಾರಿಸಿದ್ದರು. ಹೀಗಾಗಿ ತಂಡ 265 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಇಂಗ್ಲೆಂಡ್ಗೆ ಗುರಿಯಾಗಿ ನೀಡಿತ್ತು.
ಫಲಿತಾಂಶ ಏನಾಗಿತ್ತು?
ಭಾರತ ನೀಡಿದ 266 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 51.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತ್ತು. ಇಂಗ್ಲೆಂಡ್ ಪರ ಜಾನ್ ಎಡ್ರಿಚ್ 90, ಟೋನಿ ಗ್ರೇಡ್ 40, ಕೀತ್ ಫ್ಲೆಚರ್ 39 ಮತ್ತು ಡೇವಿಡ್ ಲಾಯ್ಡ್ 34 ರನ್ ಬಾರಿಸಿ ತಂಡ 4 ವಿಕೆಟ್‌ಗಳಿಂದ ಗೆಲ್ಲುವಂತೆ ಮಾಡಿದ್ದರು. ಈ ಪಂದ್ಯದ ಪಂದ್ಯ ಶ್ರೇಷ್ಠರಾಗಿ ಇಂಗ್ಲೆಂಡ್‌ನ ಜಾನ್ ಎಡ್ರಿಚ್ ಆಯ್ಕೆಯಾಗಿದ್ದರು.
ಭಾರತದ ಬೌಲಿಂಗ್ ವಿಫಲ
ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗ 265 ರನ್‌ಗಳ ಉತ್ತಮ ಸ್ಕೋರ್ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ತಂಡದ ಬೌಲಿಂಗ್ ದುರ್ಬಲವಾಗಿತ್ತು. ಈ ಪಂದ್ಯದಲ್ಲಿ ಏಕನಾಥ್ ಲೋಕರ್ ಮತ್ತು ಬಿಷಪ್ ಸಿಂಗ್ ಬೇಡಿ ತಲಾ 2 ವಿಕೆಟ್ ಪಡೆದರೆ, ಮದನ್ ಲಾಲ್ ಮತ್ತು ಶ್ರೀನಿವಾಸ್ ವೆಂಕಟರಾಘವನ್ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Thu, 15 August 24