ಪಾನಿಪುರಿ ಹುಡುಗ ತೆಂಡೂಲ್ಕರ್ ಕೊಟ್ಟ ಬ್ಯಾಟಿಂದ ಬಾರಿಸಿದ ಶತಕ!

|

Updated on: Oct 17, 2019 | 3:21 PM

ಮುಂಬೈ: ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸೋ ಮೂಲಕ ವಿಶ್ವ ದಾಖಲೆ ಬರೆದಿರುವ 17ರ ಪ್ರಾಯದ ಯಶಸ್ವಿ ಜೈಸ್ವಾಲ್ ಅತಿ ಚಿಕ್ಕ ವಯಸ್ಸಿನಲ್ಲೇ ಲಿಸ್ಟ್ ಎ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಹಿರಿಮೆಗೆ ಪಾತ್ರನಾಗಿದ್ದಾನೆ. ಯಶಸ್ವಿ ಜೈಸ್ವಾಲ್ ತಂದೆ ಪಾನಿಪುರಿ ಮಾರುವವರು. ತಂದೆ ಪಾನಿಪುರಿ ಮಾರೋದಕ್ಕೆ ಉತ್ತರ ಪ್ರದೇಶದಿಂದ ಮಹಾನಗರಿ ಮುಂಬೈಗೆ ಬಂದಿದ್ದರು. ಮುಂಬೈಗೆ ಬಂದವರು ತನ್ನ ಮುದ್ದಿನ ಮಗ ಮತ್ತು ಹೆಂಡತಿಯೊಂದಿಗೆ ಚಿಕ್ಕ ಗುಡಿಸಲಿನಲ್ಲಿ ವಾಸವಾಗಿದ್ದರು. ಕಡು ಬಡತನದಲ್ಲಿ ಹುಟ್ಟಿ ಬಂದ ಯಶಸ್ವಿ ಜೈಸ್ವಾಲ್ ಈಗ ಇಡೀ […]

ಪಾನಿಪುರಿ ಹುಡುಗ ತೆಂಡೂಲ್ಕರ್ ಕೊಟ್ಟ ಬ್ಯಾಟಿಂದ ಬಾರಿಸಿದ ಶತಕ!
Follow us on

ಮುಂಬೈ: ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸೋ ಮೂಲಕ ವಿಶ್ವ ದಾಖಲೆ ಬರೆದಿರುವ 17ರ ಪ್ರಾಯದ ಯಶಸ್ವಿ ಜೈಸ್ವಾಲ್ ಅತಿ ಚಿಕ್ಕ ವಯಸ್ಸಿನಲ್ಲೇ ಲಿಸ್ಟ್ ಎ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಹಿರಿಮೆಗೆ ಪಾತ್ರನಾಗಿದ್ದಾನೆ.

ಯಶಸ್ವಿ ಜೈಸ್ವಾಲ್ ತಂದೆ ಪಾನಿಪುರಿ ಮಾರುವವರು. ತಂದೆ ಪಾನಿಪುರಿ ಮಾರೋದಕ್ಕೆ ಉತ್ತರ ಪ್ರದೇಶದಿಂದ ಮಹಾನಗರಿ ಮುಂಬೈಗೆ ಬಂದಿದ್ದರು. ಮುಂಬೈಗೆ ಬಂದವರು ತನ್ನ ಮುದ್ದಿನ ಮಗ ಮತ್ತು ಹೆಂಡತಿಯೊಂದಿಗೆ ಚಿಕ್ಕ ಗುಡಿಸಲಿನಲ್ಲಿ ವಾಸವಾಗಿದ್ದರು. ಕಡು ಬಡತನದಲ್ಲಿ ಹುಟ್ಟಿ ಬಂದ ಯಶಸ್ವಿ ಜೈಸ್ವಾಲ್ ಈಗ ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗುವಂತ ಸಾಧನೆ ಮಾಡಿದ್ದಾನೆ.

ಜಾರ್ಖಂಡ್ ವಿರುದ್ಧ ದ್ವಿಶತಕ ಸಿಡಿಸಿದ ಯಶಸ್ವಿ!
ಆಲೂರಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಮುಂಬೈ ಮತ್ತು ಜಾರ್ಖಂಡ್ ನಡುವಿನ ಪಂದ್ಯದಲ್ಲಿ, ಎಡಗೈ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್ ಮುಂಬೈ ಪರ ಭರ್ಜರಿ ದ್ವಿಶತಕ ಸಿಡಿಸಿದ್ದಾನೆ. ಆ ಮೂಲಕ ಲಿಸ್ಟ್ ಎ ಕ್ರಿಕೆಟ್​ನಲ್ಲಿ ವಿಶ್ವ ದಾಖಲೆಯನ್ನೇ ಬರೆದಿದ್ದಾನೆ.

ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ ಕೇವಲ 154 ಎಸೆತಗಳಲ್ಲಿ 17 ಬೌಂಡರಿ ಮತ್ತು 12 ಸಿಕ್ಸರ್ ಸಹಿತ 203 ರನ್​ಗಳಿಸಿದ್ದಾನೆ. ಹೀಗೆ ಭರ್ಜರಿ ದ್ವಿಶತಕ ಸಿಡಿಸಿದ ಜೈಸ್ವಾಲ್ 44 ವರ್ಷಗಳ ವಿಶ್ವ ದಾಖಲೆಯನ್ನ ಪುಡಿಗಟ್ಟಿದ್ದಾನೆ. 1975ರಲ್ಲಿ ದಕ್ಷಿಣ ಆಫ್ರಿಕಾದ ಅಲನ್ ಬ್ಯಾರೋ 20ನೇ ವಯಸ್ಸಿನಲ್ಲಿ ದ್ವಿಶತಕ ಸಿಡಿಸಿದ್ದು ವಿಶ್ವ ದಾಖಲೆಯಾಗಿತ್ತು.

ಇನ್ನು ಇದೇ ಟೂರ್ನಿಯಲ್ಲಿ ಲಿಸ್ಟ್ ಎ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿರುವ ಜೈಸ್ವಾಲ್, ಕೇವಲ 5 ಪಂದ್ಯಗಳಲ್ಲಿ 585 ರನ್ ಗಳಿಸಿದ್ದಾನೆ. ಸದ್ಯ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಜೈಸ್ವಾಲ್, ತಮಿಳುನಾಡಿನ ಬಾಬಾ ಅಪರಜಿತ್​ನನ್ನು ಹಿಂದಿಕ್ಕಿದ್ದಾನೆ.

ಯಶಸ್ವಿಗೆ ಬ್ಯಾಟ್ ಉಡುಗೊರೆಯಾಗಿ ನೀಡಿದ್ದ ತೆಂಡುಲ್ಕರ್!
ಯಶಸ್ವಿ ಜೈಸ್ವಾಲ್ ಪ್ರತಿಭೆಯನ್ನ ಒಂದು ವರ್ಷದ ಹಿಂದೆಯೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಗುರುತಿಸಿದ್ರು. ಅದೂ ಅಲ್ಲದೇ ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ರೂಮ್ ಮೇಟ್ ಆಗಿದ್ದ ಜೈಸ್ವಾಲ್, ಒಮ್ಮೆ ಸಚಿನ್​ರನ್ನ ಭೇಟಿ ಮಾಡ್ತಾನೆ. ಆವತ್ತು ಮಾಸ್ಟರ್ ಯಶಸ್ವಿಗೆ ಒಂದು ಬ್ಯಾಟ್ ಅನ್ನ ಉಡುಗೊರೆಯಾಗಿ ನೀಡಿದ್ರು.

ಏಷ್ಯಾಕಪ್​ನಲ್ಲಿ ಸಚಿನ್ ಬ್ಯಾಟ್​ನಿಂದ ಶತಕ ಸಿಡಿಸಿದ್ದ ಯಶಸ್ವಿ!
ಸಚಿನ್ ತೆಂಡುಲ್ಕರ್ ನೀಡಿದ ಬ್ಯಾಟ್​ನಿಂದಲೇ ಅಂಡರ್ ನೈಂಟೀನ್ ಏಷ್ಯಾಕಪ್​ನಲ್ಲಿ ಯಶಸ್ವಿ ರನ್ ಮಳೆ ಹರಿಸಿದ್ದ. ಅಷ್ಟೇ ಅಲ್ಲ. ಸಚಿನ್ ಬ್ಯಾಟ್​ನಿಂದಲೇ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ.

ಸಾಧನೆಗೆ ಬಡತನ ಅಡ್ಡಿಯಾಗೋದಿಲ್ಲ ಅನ್ನೋದನ್ನ ಯಶಸ್ವಿ ಜೈಸ್ವಾಲ್ ಸಾದಿಸಿ ತೋರಿಸಿದ್ದಾನೆ. ಆ ಮೂಲಕ ಭಾರತೀಯ ಕ್ರಿಕೆಟ್​ಗೆ ಮತ್ತೊಮ್ಮೆ ಪ್ರತಿಭಾವಂತ ಕ್ರಿಕೆಟಿಗ ಸಿಕ್ಕಿರೋದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

Published On - 3:15 pm, Thu, 17 October 19