ಪಾಕಿಸ್ತಾನದಲ್ಲಿ ಜೂನಿಯರ್ ಬುಮ್ರಾ: ವಿಡಿಯೋ ವೈರಲ್

|

Updated on: Jul 16, 2024 | 12:46 PM

Jasprit Bumrah: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ 8 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಜಸ್​ಪ್ರೀತ್ ಬುಮ್ರಾ ಒಟ್ಟು 178 ಎಸೆತಗಳನ್ನು ಎಸೆದಿದ್ದರು. ಈ ವೇಳೆ ಕೇವಲ 124 ರನ್ ನೀಡುವ ಮೂಲಕ 15 ವಿಕೆಟ್ ಕಬಳಿಸಿದ್ದರು. ಈ ಮೂಲಕ ಭಾರತ ತಂಡವು ಟಿ20 ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗೆ ಅದ್ಭುತ ಪ್ರದರ್ಶನದೊಂದಿಗೆ ಸಂಚಲನ ಸೃಷ್ಟಿಸಿದ ಬುಮ್ರಾ ಅವರ ಶೈಲಿಯಲ್ಲೇ ಪುಟ್ಟ ಬಾಲಕನೊಬ್ಬ ಬೌಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಕರಾರುವಾಕ್ ದಾಳಿ ಸಂಘಟಿಸುವ ಮೂಲಕ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಸಂಚಲನ ಸೃಷ್ಟಿಸಿದ್ದರು. ಈ ಸಂಚಲನದೊಂದಿಗೆ ಅವರ ಅಭಿಮಾನಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಇಂತಹ ಅಭಿಮಾನಿಗಳಲ್ಲಿ ಪಾಕಿಸ್ತಾನದ ಪುಟ್ಟ ಬಾಲಕ ಕೂಡ ಒಬ್ಬ. ಏಕೆಂದರೆ ಪಾಕ್ ಪ್ರಾಂತ್ಯದ ಹುಡುಗನೊಬ್ಬ ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುತ್ತಿದ್ದಾನೆ. ಅದು ಕೂಡ ಯಾರ್ಕರ್ ಸ್ಪೆಷಲಿಸ್ಟ್ ಸ್ಟ್ರೈಲ್​ನಲ್ಲೇ ಯಾರ್ಕರ್​ಗಳನ್ನು ಎಸೆಯುವ ಮೂಲಕ ಎಂಬುದು ವಿಶೇಷ.

ಮಕ್ಕಳ ನಡುವೆ ಪಂದ್ಯವೊಂದರಲ್ಲಿ ಹುಡುಗನೊಬ್ಬ ಬೂಮ್ ಬೂಮ್ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಪಾಕ್ ತಂಡದ ಮಾಜಿ ಆಟಗಾರ ವಾಸಿಂ ಅಕ್ರಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಹುಡುಗನ ಬೌಲಿಂಗ್ ನಿಯಂತ್ರಣ ಮತ್ತು ಬೌಲಿಂಗ್ ಶೈಲಿ ಜಸ್​ಪ್ರೀತ್ ಬುಮ್ರಾ ಅವರಂತೆಯೇ ಇದೆ ಎಂದು ಅಕ್ರಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಜೂನಿಯರ್ ಬುಮ್ರಾ ಹೆಸರಿನಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಈ ಪುಟ್ಟ ಬಾಲಕನಿಗೆ ಉತ್ತಮ ಟ್ರೈನಿಂಗ್ ನೀಡಿದರೆ ಅತ್ಯುತ್ತಮ ಬೌಲರ್ ಆಗಿ ರೂಪಿಸಿಕೊಳ್ಳಬಹುದು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.