ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಬಂಧಗಳು ಸರಿಯಿಲ್ಲ. ಆದರೆ ಕ್ರಿಕೆಟ್ ವಿಷಯಕ್ಕೆ ಬಂದರೆ ಈ ನೆರೆ ರಾಷ್ಟ್ರಗಳ ನಡುವೆ ಸೌಹಾರ್ದಯುತ ಬಾಂಧವ್ಯ ಇರೋದು ಸುಳ್ಳಲ್ಲ. ರಾಜಕೀಯದ ಹಿನ್ನೆಲೆಯಲ್ಲಿ ಎರಡು ದೇಶಗಳ ನಡುವಿನ ಕ್ರೀಡಾ ಸಂಬಂಧಗಳು ಸಹ ಹದಗೆಟ್ಟಿರುವುದು ನಿಜ. ಆದರೆ ಪಾಕಿಸ್ತಾನದ ಮಾಜಿ ಮತ್ತು ಹಾಲಿ ಆಟಗಾರರರಿಗೆ ಭಾರತದ ಕ್ರಿಕೆಟ್ ಆಟಗಾರರ ಮೇಲೆ ಎಲ್ಲಿಲ್ಲದ ಅಕ್ಕರೆ, ಪ್ರೀತಿ. ಪಾಕಿಸ್ತಾನದ ಈಗಿನ ಗ್ರೇಟ್ ಬ್ಯಾಟ್ಸ್ಮನ್ ಬಾಬರ್ ಆಜಂ, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ವಿಡಿಯೊಗಳನ್ನು ನೋಡಿ ಬ್ಯಾಟಿಂಗ್ನಲ್ಲಿ ಸುಧಾರಣೆ ತಂದುಕೊಂಡೆ ಅಂತ ಹಲವಾರು ಸಲ ಹೇಳಿದ್ದಾರೆ. ಪಾಕ್ನ ಮಾಜಿ ಗ್ರೇಟ್ ಜಹೀರ್ ಅಬ್ಬಾಸ್, ಕೊಹ್ಲಿ ಬ್ಯಾಟ್ ಮಾಡುತ್ತಿದ್ದರೆ ಊಟ, ನೀರು ಬಿಟ್ಟು ಟಿವಿ ಮುಂದೆ ಕೂರುತ್ತೇನೆ ಅಂತ ಹೇಳಿದ್ದಾರೆ. ಮಾಜಿ ಆರಂಭ ಆಟಗಾರ ರಮೀಜ್ ರಾಜಾ ಅವರು ಕೊಹ್ಲಿಯನ್ನು ಆಧುನಿಕ ರಿಚರ್ಡ್ಸ್ ಎಂದು ಕರೆದಿದ್ದು, ಕೊಹ್ಲಿ ನಾನ್-ಸ್ಟ್ರೈಕರ್ ಎಂಡ್ನಲ್ಲಿದ್ದಾಗ ಇಶಾನ್ ಕಿಷನ್ ಮತ್ತು ಸೂರ್ಯಕುಮಾರ್ ಯಾದವ್ಗೆ ತಮ್ಮ ಮೊದಲ ಅಂತರರಾಷ್ಟ್ರೀಯ ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಕ್ಕಿದ್ದು ಅವರಬ್ಬಿರ ಅದೃಷ್ಟವೆಂದು ಹೇಳಿದ್ದಾರೆ.
‘ಇಶಾನ್ ಕಿಷನ್ಗೆ ತನ್ನ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾಟ ಒಂದರಲ್ಲಿ ಪಾಲ್ಗೊಳ್ಳುವಂಥ ಅವಕಾಶ ಸಿಕ್ಕಿದ್ದು ಅದೃಷ್ಟವೆಂದೇ ಹೇಳಬೇಕು. ಯಾಕೆಂದರೆ ಕೊಹ್ಲಿ ಈಗಿನ ಯುಗದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿದ್ದಾರೆ ಮತ್ತು ಅವರನ್ನು ನಾನು ಆಧುನಿಕ ರಿಚರ್ಡ್ಸ್ ಎಂದು ಪರಿಗಣಿಸುತ್ತೇನೆ. ಆ ಅವಕಾಶ ಕಿಷನ್ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿರುತ್ತದೆ. ಮುಂಬರುವ ದಿನಗಳಲ್ಲಿ ನಾವು ಅವರಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ರಾಜಾ ತಮ್ಮ ಯೂಟ್ಯೂಬ್ ಚ್ಯಾನೆಲ್ನಲ್ಲಿ ಹೇಳಿದ್ದಾರೆ.
ಕಿಷನ್ ತನ್ನ ಪಾದಾರ್ಪಣೆಯ ಪಂದ್ಯದಲ್ಲಿ ಮಿಂಚಿನ 56 ರನ್ಗಳನ್ನು ಬಾರಿಸಿದ್ದಲ್ಲದೆ, ನಾಯಕ ಕೊಹ್ಲಿಯೊಂದಿಗೆ 93 ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ತಮ್ಮ ಎಂದಿನ ಶೈಲಿಯ ಆಟವಾಡಿದ ಕೊಹ್ಲಿ ಅಧಿಕಾರಯುತ 73 ರನ್ ಬಾರಿಸಿ ಅಜೇಯರಾಗುಳಿದರು.
‘ಕಿಷನ್ ಅವರಲ್ಲಿ ಅಪಾರವಾದ ಸಾಮರ್ಥ್ಯ ಮತ್ತು ಪ್ರತಿಭೆಯದೆ. ಪವರ್-ಹಿಟ್ಟಿಂಗ್ಗೆ ಅವರು ನೈಜ್ಯ ಉದಾಹರಣೆ. ಗಾತ್ರದಲ್ಲಿ ಕುಳ್ಳನಾದರೂ ಅದ್ಭುತವಾದ ಟೈಮಿಂಗ್ನೊಂದಿಗೆ ಹೊಡೆತಗಳನ್ನು ಬಾರಿಸುತ್ತಾರೆ. ವಿಕೆಟ್ನ ಎರಡೂ ಭಾಗಗಲ್ಲಿ ಶಾಟ್ಗಳನ್ನು ಆಡುತ್ತಾರೆ ಮತ್ತು ಸಲೀಸಾಗಿ ಸಿಕ್ಸರ್ಗಳನ್ನು ಬಾರಿಸುತ್ತಾರೆ. ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿರುವ ಅವರು ಲಯದಲ್ಲಿದ್ದರೆ ನಿಸ್ಸಂದೇಹವಾಗಿ ಗೇಮ್-ಚೇಂಜರ್,’ ಎಂದು ರಾಜಾ ಹೇಳಿದ್ದಾರೆ.
‘ಕಿಷನ್ಗೆ ಮುಕ್ತವಾಗಿ ಆಡುವ ಅವಕಾಶ ಸಿಕ್ಕಿತು, ಮತ್ತೊಂದು ತುದಿಯಲ್ಲಿ ಖುದ್ದು ನಾಯಕನೇ ಇದ್ದು ಅವರ ಪ್ರತಿಯೊಂದು ಹೊಡೆತವನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದು ಅವರಿಗೆ ಅದ್ಭುತವಾದ ವಾತಾವರಣವನ್ನು ಕಲ್ಪಿಸಿತ್ತು. ಬೌಂಡರಿ ಮತ್ತು ಸಿಕ್ಸರ್ಗಳನ್ನು ಬಾರಿಸುವ ಮುಕ್ತ ಅವಕಾಶವನ್ನು ಕಿಷನ್ಗೆ ಒದಗಿಸಲಾಗಿತ್ತು. ಹಾಗೆ ಆಡುವಾಗ ಔಟಾದರರೂ ಯಾವುದೇ ಸಮಸ್ಯೆಯಿಲ್ಲ,’ ಎಂದು ರಾಜಾ ಹೇಳಿದ್ದಾರೆ.
ಗುರುವಾರದಂದು ನಡೆದ 4ನೇ ಪಂದ್ಯದಲ್ಲಿ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾದರು ಮತ್ತು ತೊಡೆಸಂದಿ ನೋವಿನಿಂದ ಬಳಲುತ್ತಿದ್ದ ಕಿಷನ್ ಆಡುವ ಇಲೆವೆನ್ನಿಂದ ಹೊರಗುಳಿದರು. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿರುವ ಆಟಗಾರರರಿಗೆ ಭಾರತ, ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದು ರಾಜಾ ಹೇಳಿದ್ದಾರೆ.
ಎರಡನೇ ಪಂದ್ಯದಲ್ಲಿ ಕಿಷನ್ ಸ್ಟಾರ್ ಪರ್ಫಾರ್ಮರ್ ಅಗಿ ಹೊರಹೊಮ್ಮಿದರೆ ನಾಲ್ಕನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 31 ಎಸೆತಗಳಲ್ಲಿ 27ರನ್ ಬಾರಿಸಿ ಎಲ್ಲಾ ಶ್ರೇಯಸ್ಸನ್ನು ತಮ್ಮೆಡೆ ಬಾಚಿಕೊಂಡರು. ಅವರ ಆಕ್ರಮಣಕಾರಿ ಆಟದಿಂದಾಗೇ ಭಾರತಕ್ಕೆ 185 ರನ್ಗಳ ಮೊತ್ತ ಗಳಿಸಲು ಸಾಧ್ಯವಾಯಿತು.
ಸೂರ್ಯ ಎರಡನೇ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರೂ, ಆ ಪಂದ್ಯದಲ್ಲಿ ಅವರಿಗೆ ಬ್ಯಾಟ್ ಮಾಡುವ ಚಾನ್ಸ್ ಸಿಕ್ಕರಲಿಲ್ಲ. ಮೂರನೇ ಪಂದ್ಯಕ್ಕೆ ಅವರನ್ನು ಡ್ರಾಪ್ ಮಾಡಲಾಗಿತ್ತು. ಹಾಗಾಗಿ ಗುರುವಾರದಂದು ಅವರು ತಮ್ಮ ಮೊದಲ ಇಂಟರ್ನ್ಯಾಶನಲ್ ಇನ್ನಿಂಗ್ಸ್ ಆಡಿದರು.
ಸೂರ್ಯ ಅವರ ಇನ್ನಿಂಗ್ಸ್ನಿಂದ ಭಾರಿ ಫ್ರಭಾವಕ್ಕೊಳಗಾಗಿರುವ ಬಿಸಿಸಿಐ ಅವರನ್ನು ಇಂಗ್ಲೆಂಡ್ ವಿರುದ್ಧ ನಡೆಯುವ 3 ಒಂದು ದಿನದ ಪಂದ್ಯಗಳ ಸರಣಿಗೂ ಆಯ್ಕೆ ಮಾಡಿದೆ.
ಇದನ್ನೂ ಓದಿ: India vs England | ಭಾರತದ ಟಾಪ್ ಕ್ರಮಾಂಕ ವಿಫಲವಾದಾಗ ಮಿಡ್ಲ್ ಆರ್ಡರ್ ಪುಟಿದೇಳಬೇಕು: ರಮೀಜ್ ರಾಜಾ
Published On - 6:21 pm, Fri, 19 March 21