AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ ಫಿಕ್ಸ್ ಆಗಿದೆ.. ಈ ಬಾರಿ ಕಪ್ ಅರ್ಜೆಂಟೀನಾಗೆ!

FIFA World Cup 2026: ಫಿಫಾ ವಿಶ್ವಕಪ್​ನ ಪ್ರಿ-ಕ್ವಾರ್ಟರ್ ಫೈನಲ್​ನಲ್ಲಿ ಈಜಿಪ್ಟ್ ವಿರುದ್ಧ ರೋಚಕ ಜಯ ಸಾಧಿಸಿ ಅರ್ಜೆಂಟೀನಾ ಕ್ವಾರ್ಟರ್ ಫೈನಲ್​ಗೆ ತಲುಪಿದೆ. ಅಮೆರಿಕದ ಜಾರ್ಜಿಯಾ ರಾಜ್ಯದ ಅಟ್ಲಾಂಟಾದಲ್ಲಿರುವ 'ಮರ್ಸಿಡಿಸ್-ಬೆಂಜ್ ಸ್ಟೇಡಿಯಂ' ನಲ್ಲಿ ನಡೆದ ಈ ಪಂದ್ಯದಲ್ಲಿ ಈಜಿಪ್ಟ್ ತಂಡವನ್ನು 3-2 ಅಂತರದಿಂದ ಮಣಿಸುವಲ್ಲಿ ಮೆಸ್ಸಿ ಪಡೆ ಯಶಸ್ವಿಯಾಗಿದೆ. ಈ ಸೋಲಿನ ಬೆನ್ನಲ್ಲೇ ಈಜಿಪ್ಟ್ ಆಟಗಾರ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ವಿಶ್ವಕಪ್​ ಫಿಕ್ಸ್ ಆಗಿದೆ.. ಈ ಬಾರಿ ಕಪ್ ಅರ್ಜೆಂಟೀನಾಗೆ!
Ziko - Messi
ಝಾಹಿರ್ ಯೂಸುಫ್
|

Updated on: Jul 08, 2026 | 12:49 PM

Share

ಫಿಫಾ ವಿಶ್ವಕಪ್ ಫಿಕ್ಸ್​ ಆಗಿದೆ. ಈ ಫಿಕ್ಸಿಂಗ್​ನಂತೆ ಈ ಬಾರಿಯ ವಿಶ್ವಕಪ್​ ಅರ್ಜೆಂಟೀನಾ ತಂಡಕ್ಕೆ. ಹೀಗಂದಿರುವುದು ಮತ್ಯಾರೂ ಅಲ್ಲ. ಈಜಿಪ್ಟ್ ತಂಡದ ಸ್ಟಾರ್ ಫಾರ್ವರ್ಡ್ ಆಟಗಾರ ಮೊಸ್ತಫ ಝಿಕೊ. ಅರ್ಜೆಂಟೀನಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ಝಿಕೊ, “ಇಡೀ ಟೂರ್ನಮೆಂಟ್ ಫಿಕ್ಸ್ ಆಗಿದೆ” ಎಂದು ಅತ್ಯಂತ ಗಂಭೀರವಾದ ಆರೋಪ ಮಾಡಿದ್ದಾರೆ.

ಅನ್ಯಾಯದ ವಿರುದ್ಧ ಜಿಕೊ ಆಕ್ರೋಶ!

ಪಂದ್ಯ ಮುಗಿದ ತಕ್ಷಣ ಮಾಧ್ಯಮಗಳೊಂದಿಗೆ ಮಾತನಾಡಿದ ಮೊಸ್ತಫ ಝಿಕೊ, ಫ್ರೆಂಚ್ ರೆಫರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ಅವರ ತೀರ್ಪುಗಳು ಸಂಪೂರ್ಣವಾಗಿ ಅರ್ಜೆಂಟೀನಾ ಪರವಾಗಿದ್ದವು ಎಂದು ದೂರಿದ್ದಾರೆ.

“ಇದು ನ್ಯಾಯವಲ್ಲ, ರೆಫರಿ ಮಾಡಿದ್ದು ತಪ್ಪು. ನಮಗೆ ಸ್ಪಷ್ಟ ಅನ್ಯಾಯವಾಗಿದೆ. ಅವರು ಇಡೀ ದೇಶದ ಶ್ರಮವನ್ನು ವ್ಯರ್ಥ ಮಾಡಿದ್ದಾರೆ. ಪಂದ್ಯದ ಆರಂಭದಿಂದಲೂ ಅವರು ನಮ್ಮ ವಿರುದ್ಧವಾಗಿಯೇ ಇದ್ದರು. ನಾವು ಅರ್ಜೆಂಟೀನಾ ವಿರುದ್ಧ ಗೆಲ್ಲುವುದನ್ನು ಅವರು ಇಷ್ಟಪಡಲಿಲ್ಲ. ಈ ಟೂರ್ನಮೆಂಟ್ ಫಿಕ್ಸ್ ಆಗಿದೆ. ಕಪ್ ಅನ್ನು ಅರ್ಜೆಂಟೀನಾಗೆ ಕೊಡಲು ಮೊದಲೇ ನಿರ್ಧರಿಸಲಾಗಿದೆ,” ಎಂದು ಝಿಕೊ ಗಂಭೀರ ಆರೋಪದೊಂದಿಗೆ ಆಕ್ರೋಶ ಹೊರಹಾಕಿದ್ದಾರೆ.

ಝಿಕೊ ಆಕ್ರೋಶ ಮತ್ತು ವಿವಾದ:

ಈ ಪಂದ್ಯದಲ್ಲಿ ಈಜಿಪ್ಟ್ ತಂಡ 2-0 ಮುನ್ನಡೆ ಸಾಧಿಸಿ, ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಚ್ಚರಿಯ ಜಯದ ಹೊಸ್ತಿಲಲ್ಲಿತ್ತು. ಆದರೆ ಕೊನೆಯ 15 ನಿಮಿಷಗಳಲ್ಲಿ ಅರ್ಜೆಂಟೀನಾ 3 ಗೋಲುಗಳನ್ನು ಬಾರಿಸಿ ತಿರುಗೇಟು ನೀಡಿತು. ಈಜಿಪ್ಟ್ ತಂಡದ ಈ ಸೋಲಿಗೆ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ನೀಡಿದ ಎರಡು ತೀರ್ಪುಗಳೇ ಕಾರಣ ಎನ್ನಲಾಗುತ್ತಿದೆ.

  • ರದ್ದುಗೊಂಡ ಗೋಲು: ಪಂದ್ಯದ 59ನೇ ನಿಮಿಷದಲ್ಲಿ ಝಿಕೊ ಹೊಡೆದ ಅದ್ಭುತ ಗೋಲನ್ನು VAR ಮೂಲಕ ರದ್ದುಗೊಳಿಸಲಾಯಿತು. ಗೋಲು ಹೊಡೆಯುವುದಕ್ಕೂ ಮುನ್ನ ಅರ್ಜೆಂಟೀನಾದ ಲಿಸಾಂಡ್ರೊ ಮಾರ್ಟಿನೆಝ್ ಮೇಲಿನ ಸಣ್ಣ ಫೌಲ್ ಅನ್ನು ಗುರುತಿಸಿ ರೆಫರಿ ಈ ನಿರ್ಧಾರ ತಳೆದರು. ಆದರೆ ಈ ನಿರ್ಧಾರ ತೆಗೆದುಕೊಂಡಿದ್ದು ಗೋಲು ಬಾರಿಸಿದ ಬಳಿಕ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಈ ಫೌಲ್ ನಡೆದಿದ್ದು ಈಜಿಪ್ಟ್ ಗೋಲು ಪೋಸ್ಟ್ ಬಳಿ. ಇದಾದ ಬಳಿಕ ಈಜಿಪ್ಟ್ ಆಟಗಾರರ ಮೊಹಮ್ಮದ್ ಸಲಾಹ್ ಹಾಗೂ ಝಿಕೊ ಅದ್ಭುತ ಆಟದ ಮೂಲಕ ಚೆಂಡನ್ನು ತೆಗೆದುಕೊಂಡು ಹೋಗಿ ಗೋಲು ಬಾರಿಸಿದ್ದರು. ಆದರೆ ಅತ್ತ ಗೋಲು ದಾಖಲಾಗುತ್ತಿದ್ದಂತೆ ಮೆಸ್ಸಿ VAR ಪರಿಶೀಲಿಸಲು ರೆಫರಿಗೆ ಸೂಚನೆ ನೀಡಿದರು. VAR ಪರಿಶೀಲಿಸಿ ಮ್ಯಾಚ್ ರೆಫರಿ ಗೋಲು ರದ್ದುಗೊಳಿಸಿದರು. ರೆಫರಿಯ ಈ ನಿರ್ಧಾರದ ಬಗ್ಗೆ ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
  •  ಪೆನಾಲ್ಟಿ ನಿರಾಕರಣೆ: ಪಂದ್ಯದ ಕೊನೆಯ ಕ್ಷಣಗಳಲ್ಲಿ (92ನೇ ನಿಮಿಷ) ಎಂಜೊ ಫೆರ್ನಾಂಡಿಸ್ ಅರ್ಜೆಂಟೀನಾಗೆ ವಿನ್ನಿಂಗ್ ಗೋಲ್ ಹೊಡೆಯುವ ಮುನ್ನ, ಈಜಿಪ್ಟ್‌ನ ಮೊಹಮ್ಮದ್ ಸಲಾಹ್ ಅವರನ್ನು ಜೂಲಿಯನ್ ಅಲ್ವಾರೆಝ್ ಅರ್ಜೆಂಟೀನಾ ಗೋಲು ಪೋಸ್ಟ್ ಬಳಿ ಬೀಳಿಸಿದ್ದರು. ಪೆನಾಲ್ಟಿ ಬಾಕ್ಸ್‌ನಲ್ಲಿ ಫೌಲ್ ಮಾಡಿದ್ದರಿಂದ ಸಲಾಹ್ VAR ಪರಿಶೀಲನೆಗೆ ಮನವಿ ಮಾಡಿದರು. ಇದಾಗ್ಯೂ ರೆಫರಿ VAR ಪರಿಶೀಲಿಸದೇ ನಿರ್ಲಕ್ಷಿಸಿದರು. ರೆಫರಿಯ ಈ ನಿರ್ಧಾರಕ್ಕೆ ಫುಟ್​ಬಾಲ್​ ಜಗತ್ತಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ರೆಫರಿ ಈ ಎರಡು ಗೋಲುಗಳ ಅವಕಾಶವನ್ನು ಕಿತ್ತುಕೊಂಡಿದ್ದರಿಂದಲೇ ಅರ್ಜೆಂಟೀನಾ ನಮ್ಮ ವಿರುದ್ಧ ಗೆದ್ದಿದ್ದಾರೆ ಎಂದು ಮೊಸ್ತಫ ಝಿಕೊ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಶ್ವಕಪ್ ಈಗಾಗಲೇ ಫಿಕ್ಸ್ ಆಗಿದ್ದು, ಅದು ಅರ್ಜೆಂಟೀನಾಗೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿಯೇ ನಮ್ಮೆಲ್ಲಾ ಶ್ರಮಗಳನ್ನು ವ್ಯರ್ಥ ಮಾಡಿದ್ದಾರೆ ಎಂದು ಝಿಕೊ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಈ ಆರೋಪ ಮತ್ತು ಆಕ್ರೋಶಗಳು ಏನೇ ಇರಲಿ, 2026ರ ವಿಶ್ವಕಪ್‌ನ ಈ ರೋಮಾಂಚಕ ಪಂದ್ಯವು ಕೇವಲ ಗೋಲುಗಳ ಮಳೆಯಿಂದಷ್ಟೇ ಅಲ್ಲದೆ, ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ ಒಂದಾಗಿ ಫುಟ್‌ಬಾಲ್ ಪ್ರೇಮಿಗಳ ನೆನಪಿನಲ್ಲಿ ಉಳಿಯಲಿದೆ ಎಂಬುದೇ ಸತ್ಯ.

Follow Us