ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಆ್ಯಪಲ್ (Apple) ಕಂಪನಿಯ ಐಫೋನ್ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಐಫೋನ್ 14 ಸರಣಿಗಳು (iPhone 14 Series) ಅನಾವರಣಗೊಂಡಿದ್ದವು. ಇದೀಗ ಮುಂದಿನ ಎರಡು ಮೂರು ತಿಂಗಳಲ್ಲಿ ಈ ಫೋನ್ ಭಾರತದಲ್ಲೇ ತಯಾರಾಗಲಿದೆ ಎಂದು ವರದಿಯಾಗಿದೆ. ಈ ಮೂಲಕ ಐಫೋನ್ ತಯಾರಿಕಾ ಸಂಸ್ಥೆಯಾದ ಆ್ಯಪಲ್ ಭಾರತದಲ್ಲಿ ಫೋನ್‌ಗಳ ತಯಾರಿಕೆಯನ್ನು ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಫಾಕ್ಸ್‌ಕಾನ್ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ (Wistron) ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಕೆಲಸ ನಡೆಯುತ್ತಿದೆ.
ಇದರ ನಡುವೆ ವಿಸ್ಟ್ರಾನ್ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ. ಪ್ರಸ್ತುತ ಐಫೋನ್‌ಗಳನ್ನು ತೈವಾನ್ ಮೂಲದ ಫಾಕ್ಸ್‌ಕಾನ್ ಮತ್ತು ವಿಸ್ಟ್ರಾನ್ ಕಂಪನಿ ತಯಾರಿಸುತ್ತಿದೆ. ಬಹುತೇಕ ಐಫೋನ್‌ಗಳ ಉತ್ಪಾದನೆ ಚೀನಾ ಮತ್ತು ತೈವಾನ್‌ನಲ್ಲಿ ಆಗುತ್ತಿದೆ.
ವಿಸ್ಟ್ರಾನ್ ಸಂಸ್ಥೆಯು ಟಾಟಾ ಸಹಯೋಗದೊಂದಿಗೆ ಜಂಟಿಯಾಗಿ ಐಫೋನ್ ತಯಾರಿಕಾ ಘಟಕವನ್ನು ದೇಶದಲ್ಲಿ ಸ್ಥಾಪಿಸಲು ನಡೆಸುತ್ತಿರುವ ಚರ್ಚೆ ಬಹುತೇಕ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ಹೇಳಿವೆ. 2008ರಲ್ಲಿ ಐಫೋನ್ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್ ಮಾರಾಟವಾಗಿದೆ. ಹೀಗಾಗಿ ಕ್ರಮೇಣ ಮಾರಾಟ ಹೆಚ್ಚಾಗುತ್ತಿದ್ದಂತೆ ಆ್ಯಪಲ್ ಭಾರತದಲ್ಲೇ ಹೆಚ್ಚು ಐಫೋನ್ ಉತ್ಪಾದನೆಗೆ ಮುಂದಾಗಿದೆ.
ಕಳೆದ ವರ್ಷ ಅಂದರೆ 2021ರಲ್ಲಿ ಆ್ಯಪಲ್ ಕಂಪನಿ ಭಾರತದಲ್ಲಿ 75 ಲಕ್ಷ ಐಫೋನ್ ಉತ್ಪಾದನೆ ಮಾಡಿತ್ತು. ಇದೀಗ 2022ರಲ್ಲಿ 1-2 ಕೋಟಿ ಫೋನ್ ಉತ್ಪಾದನೆ ಮಾಡಲು ಮುಂದಾಗಿದೆ. “ವಿಶ್ವಾದ್ಯಂತ ಆ್ಯಪಲ್‌ನ ಚಂದಾದಾರಿಕೆಗಳು ಬಲವಾದ ಬೆಳವಣಿಗೆಯನ್ನು ತೋರಿಸಿವೆ. ನಾವು ಈಗ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ವಿವಿಧ ಸೇವೆಗಳಾದ್ಯಂತ 86.0 ಕೋಟಿಗೂ ಹೆಚ್ಚು ಪಾವತಿಸಿದ ಚಂದಾದಾರರನ್ನು ಹೊಂದಿದ್ದೇವೆ. ಇದು ಕಳೆದ 12 ತಿಂಗಳುಗಳಲ್ಲಿ 16.0 ಕೋಟಿಗೂ ಹೆಚ್ಚು ಏರಿಕೆ ಕಂಡಿದೆ,” ಎಂದು ಆ್ಯಪಲ್ ಸಂಸ್ಥೆ ಮುಖ್ಯಸ್ಥ ಟಿಮ್ ಕುಕ್ ಹೇಳಿದ್ದಾರೆ.
ಬುಧವಾರ ರಾತ್ರಿ ನಡೆದ ‘ಫಾರ್ ಔಟ್‘ ಕಾರ್ಯಕ್ರಮದಲ್ಲಿ ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಹೀಗೆ ನಾಲ್ಕು ನೂತನ ಆಕರ್ಷಕ ಫೋನ್ಗಳು ಲಾಂಚ್ ಆಗಿದೆ. ಐಫೋನ್ 13 ಗೆ ಹೋಲಿಸಿದರೆ ಈ ಬಾರಿಯ ಸರಣಿಯಲ್ಲಿ ಅನೇಕ ವಿಶೇಷವಾದ ಆಯ್ಕೆಗಳನ್ನು ನೀಡಲಾಗಿದೆ. 14 ಪ್ರೊ ಮಾಡೆಲ್ನಲ್ಲಿ ಕೊನೆಗೂ ಪಂಚ್ ಹೋಲ್ ಡಿಸ್ ಪ್ಲೇ ಡಿಸೈನ್ ನೀಡಲಾಗಿದ್ದು, ಕ್ಯಾಮೆರಾ ಕೂಡ ಅದ್ಭುತವಾಗಿದೆ. ಐಫೋನ್ 14ನ ಮುಖ್ಯ ಫೀಚರ್ ಎಂದರೆ ಸೆಟಲೈಟ್ ಕನೆಟ್ಕಿವಿಟಿ. ಇದು ಹಿಂದಿನ ಐಫೋನ್ ಸರಣಿಗಳಲ್ಲಿ ಇಲ್ಲ. ಬ್ಯಾಟರಿ ಶಕ್ತಿ ಕೂಡ ಕೊಂಚ ಹೆಚ್ಚಿಸಲಾಗಿದೆ.