Fact check: ವಾಟ್ಸಾಪ್ ಚಾಟ್, ಕರೆಗಳ ಮೇಲೆ ಸರ್ಕಾರದ ಕಣ್ಣಿರುವುದು ನಿಜವೇ? ಇಲ್ಲಿದೆ ಸತ್ಯ ಸಂಗತಿ

|

Updated on: May 29, 2021 | 1:49 PM

WhatsApp fake message: ವಾಟ್ಸಾಪ್ ಚಾಟ್, ಮಾಹಿತಿಗಳನ್ನು ಸರ್ಕಾರ ನೋಡುತ್ತದೆ ಎಂಬ ಬಗ್ಗೆ ಸಂದೇಶವೊಂದು ಹರಿದಾಡುತ್ತಿದೆ. ಆ ಬಗೆಗಿನ ಫ್ಯಾಕ್ಟ್ ಚೆಕ್ ಇಲ್ಲಿದೆ.

Fact check: ವಾಟ್ಸಾಪ್ ಚಾಟ್, ಕರೆಗಳ ಮೇಲೆ ಸರ್ಕಾರದ ಕಣ್ಣಿರುವುದು ನಿಜವೇ? ಇಲ್ಲಿದೆ ಸತ್ಯ ಸಂಗತಿ
ಪ್ರಾತಿನಿಧಿಕ ಚಿತ್ರ
Follow us on

ಸರ್ಕಾರದಿಂದ ವಾಟ್ಸಾಪ್ ಬಳಕೆದಾರರ ಮೇಲೆ ಹತೋಟಿ ಸಾಧಿಸಲಾಗುತ್ತಿದೆ ಎಂಬ ಸಂದೇಶವೊಂದು ವೈರಲ್ ಆಗಿ ಹರಿದಾಡುತ್ತಿದೆ. ಇದೊಂದು ಸುಳ್ಳು ಸಂದೇಶ ಆಗಿದ್ದು, ವಾಟ್ಸಾಪ್​ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸರ್ಕಾರವು ಯಾರದೇ ವಾಟ್ಸಾಪ್ ಸಂದೇಶವನ್ನು ನೋಡುವುದಿಲ್ಲ ಮತ್ತು ಕೇಳಿಸಿಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿಪಡಿಸಲಾಗಿದೆ. ಈಗ ಹರಿದಾಡುತ್ತಿರುವ ಸುಳ್ಳು ಸಂದೇಶ ಏನೆಂದರೆ, ಎರಡು ನೀಲಿ ಟಿಕ್ ಮತ್ತು ಒಂದು ಕೆಂಪು ಟಿಕ್ ಬಂದಲ್ಲಿ ಬಂದಲ್ಲಿ ಅಂಥವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದು, ಮೂರು ಕೆಂಪು ಟಿಕ್ ಬಂದಲ್ಲಿ ಸರ್ಕಾರವು ಕೋರ್ಟ್ ಕ್ರಮವನ್ನು ನಿಮ್ಮ ವಿರುದ್ಧ ಆರಂಭಿಸಿದೆ ಎಂದರ್ಥ ಎನ್ನಲಾಗಿದೆ. ಅಂದ ಹಾಗೆ ಸರ್ಕಾರದಿಂದ ಹೊಸದಾಗಿ ಐ.ಟಿ. ನಿಯಮಾವಳಿಗಳನ್ನು ಪರಿಚಯಿಸಲಾಗಿದ್ದು, ಫೇಸ್​ಬುಕ್ ಒಡೆತನದ ವಾಟ್ಸಾಪ್ ಮತ್ತು ಕೇಂದ್ರದ ಮಧ್ಯೆ ತಿಕ್ಕಾಟ ನಡೆದಿರುವ ಸಂದರ್ಭದಲ್ಲಿ ಹೀಗೊಂದು ಸುಳ್ಳು ಸಂದೇಶ ಹಲವಾರು ವಾಟ್ಸಾಪ್ ಗ್ರೂಪ್​ಗಳಲ್ಲಿ ಹರಿದಾಡುತ್ತಿದೆ.

ಆ ಸಂದೇಶದಲ್ಲಿ ಇರುವ ಸುಳ್ಳಾದ ಒಕ್ಕಣೆ ಏನೆಂದರೆ, ವಾಟ್ಸಾಪ್​ನಿಂದ ಕರೆ ಮತ್ತು ಸಂದೇಶಗಳಿಗೆ ಸಂಬಂಧಿಸಿದಂತೆ ಹೊಸ ಸಂವಹನ ನಿಯಮಗಳು ಬರುತ್ತಿವೆ. ಇದರ ಮೂಲಕ ಸಾಧನವು ಸರ್ಕಾರಕ್ಕೆ ಜೋಡಣೆ ಆಗುತ್ತದೆ. ಇನ್ನು ಸರ್ಕಾರದ ವಿರುದ್ಧವಾಗಿ ಟೀಕೆ- ವಿಮರ್ಶೆಗಳು ಮಾಡಿದ ವಿಡಿಯೋ ಅಥವಾ ಟೆಕ್ಸ್ಟ್ ಹಾಕಿದಲ್ಲಿ ಕಾನೂನು ಜಾರಿ ಸಂಸ್ಥೆಗಳು ಕ್ರಮ ಕೈಗೊಳ್ಳಬಹುದು ಎನ್ನಲಾಗುತ್ತಿದೆ. ಈ ಎಲ್ಲ ಮಾಹಿತಿಯೂ ಸುಳ್ಳು. ವಾಟ್ಸಾಪ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮತ್ತೊಂದು ಮುಖ್ಯ ಸಂಗತಿ ಗೊತ್ತಾಗಬೇಕಾದದ್ದು ಏನೆಂದರೆ, ಖಾಸಗಿ ಚಾಟ್​ಗಳಿಗೆ (ಮಾತುಕತೆಗೆ) ವಾಟ್ಸಾಪ್ ಎಂಡ್-ಟು-ಎಂಡ್ ಎನ್​ಕ್ರಿಪ್ಷನ್ ಬಳಸುತ್ತದೆ. ವಾಟ್ಸಾಪ್ ಸೇರಿದಂತೆ ಯಾರೂ ಈ ಚಾಟ್​ನ ನೋಡಲು ಸಾಧ್ಯವಿಲ್ಲ. ಅದರಿಂದ ಸರ್ಕಾರ ಕೂಡ ಹೊರತಲ್ಲ.

ಈಚೆಗಂತೂ ವಾಟ್ಸಾಪ್ ಬಗ್ಗೆ ಇಂಥ ಸಂದೇಶಗಳು ಸಾಮಾನ್ಯ ಎಂಬಂತಾಗಿದೆ. ಕಳೆದ ವರ್ಷ ಕೂಡ ವಾಟ್ಸಾಪ್ ಬಗ್ಗೆ ಇಂಥದದೇ ಸಂದೇಶ ಹರಿದಾಡಿತ್ತು. ಕೆಂಪು ಟಿಕ್ ಇದಲ್ಲಿ ಅಂಥ ವಾಟ್ಸಾಪ್ ಬಳಕೆದಾರರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ಮಾಹಿತಿಯನ್ನು ಹಬ್ಬಿಸಲಾಗಿತ್ತು. ಇಂಥ ಸಂದೇಶಗಳನ್ನು ನಿಮ್ಮ ಕಾಂಟ್ಯಾಕ್ಟ್​ನಲ್ಲಿ ಇರುವವರಿಗೆ ಫಾರ್ವರ್ಡ್ ಮಾಡಬೇಡಿ ಎಂದು ಸಲಹೆ ನೀಡುತ್ತಾ ಬಂದಿದೆ ವಾಟ್ಸಾಪ್. ಈಗ ಸರ್ಕಾರ ತಂದಿರುವ ನಿಯಮದ ವಿರುದ್ಧ ವಾಟ್ಸಾಪ್ ಕಾನೂನು ಹೋರಾಟ ನಡೆಸುತ್ತಿದ್ದು, ನಿಯಮ ಪಾಲನೆ ಮಾಡದ ಸೋಷಿಯಲ್ ಮೀಡಿಯಾ ಸೇರಿ ಇತರ ಪ್ಲಾಟ್​ಫಾರ್ಮ್ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ ಎಂಬ ಸಂಗತಿಯು ಸುಳ್ಳು ಸಂದೇಶಗಳನ್ನು ನಂಬುವುದಕ್ಕೆ ಪುಷ್ಟಿ ನೀಡುತ್ತಿದೆ.

ಇದನ್ನೂ ಓದಿ: WhatsApp privacy policy 2021: ವಾಟ್ಸಾಪ್ ಖಾಸಗಿತನ ನೀತಿ ಹೆಸರಲ್ಲಿ ನಕಲಿ ಸಂದೇಶ; ಸುಳ್ಳು ಹಬ್ಬಿಸಬೇಡಿ ಎಂದ ಕಂಪೆನಿ

(Fake messages circulating as government intervention in WhatsApp messaging app. Here is the fact check)