ನವದೆಹಲಿ, ಏಪ್ರಿಲ್ 10: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಬೆಳವಣಿಗೆಗೆ ಬೇಕಾದ ಪ್ರೋಸಸರ್ಗಳು ಸಾಕಷ್ಟಿಲ್ಲ. ಎನ್ವಿಡಿಯಾದ ಪ್ರಾಬಲ್ಯ ಇರುವ ಈ ಮಾರುಕಟ್ಟೆಯಲ್ಲಿ ಇಂಟೆಲ್ ಇತ್ಯಾದಿ ಕಂಪನಿಗಳು ನೆಲೆ ಕಂಡುಕೊಳ್ಳಲು ಹೆಣಗುತ್ತಿವೆ. ಇದೇ ವೇಳೆ, ಇಂಟೆಲ್ ಸಂಸ್ಥೆ ಗೌಡಿ-3 (Intel Gaudi-3) ಎಂಬ ಹೊಸ ಎಐ ಚಿಪ್ ಅನ್ನು ಮಾರುಕಟ್ಟೆ ಬಿಡಲು ಯೋಜಿಸುತ್ತಿದೆ. ಎನ್ವಿಡಿಯಾದ ಎಚ್100 ಪ್ರೋಸಸರ್ಗಿಂತಲೂ (NVidia H100) ಗೌಡಿ-3 ಶೇ. 50ಕ್ಕಿಂತ ಹೆಚ್ಚು ವೇಗ ಹೊಂದಿದೆ. ಲಾರ್ಜ್ ಲ್ಯಾಂಗ್ವೇಜ್ ಮಾಡಲ್ಗಳನ್ನು ಹೆಚ್ಚು ವೇಗವಾಗಿ ಇದು ಮಾಡಬಲ್ಲುದು. ಜನರೇಟಿವ್ ಎಐ ಸ್ಪಂದನೆಗಳನ್ನು ಹೆಚ್ಚು ವೇಗವಾಗಿ ಇದು ಗಣಿಸಬಲ್ಲುದು ಎಂದು ಹೇಳಲಾಗುತ್ತಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಪ್ರಬಲ ಚಿಪ್ಗಳ ಕೊರತೆ ಇದೆ. ಈ ಮಾರುಕಟ್ಟೆಯಲ್ಲಿ ಶೇ. ಎನ್ವಿಡಿಯಾ ಶೇ. 83ರಷ್ಟು ಪಾಲು ಹೊಂದಿದೆ. ಬಹಳ ಉತ್ಕೃಷ್ಟವಾದ ಚಿಪ್ಗಳನ್ನು ಎನ್ವಿಡಿಯಾ ತಯಾರಿಸುತ್ತದೆ. ಇಂಟೆಲ್ ಮತ್ತು ಎಎಂಡಿ ಸಂಸ್ಥೆಗಳೂ ಕೂಡ ಎಐ ಚಿಪ್ಗಳನ್ನು ತಯಾರಿಸುತ್ತವಾದರೂ ಎನ್ವಿಡಿಯಾದಷ್ಟು ಪರಿಪಕ್ವವಾದ ಮತ್ತು ಪರಿಣಾಮಕಾರಿಯಾದ ಚಿಪ್ಗಳು ಹಾಗೂ ಪೂರಕ ಸಾಫ್ಟ್ವೇರ್ ಹೊರತರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂಟೆಲ್ನ ಗೌಡಿ-3 ಚಿಪ್ ಒಂದಷ್ಟು ಭರವಸೆ ಮೂಡಿಸಿದೆ.
ಇದನ್ನೂ ಓದಿ: ಮಾನವ ವರ್ಸಸ್ ಯಂತ್ರ: ಇನ್ನೊಂದೇ ವರ್ಷದಲ್ಲಿ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಮೀರಿಸುತ್ತೆ ಎಐ: ಇದು ಇಲಾನ್ ಮಸ್ಕ್ ಭವಿಷ್ಯ
ಸದ್ಯ ವಿಶ್ವದ ಬಹುತೇಕ ಪ್ರಮುಖ ಕಂಪನಿಗಳೆಲ್ಲವೂ ಎಐ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿವೆ. ಈ ಸಂದರ್ಭದಲ್ಲಿ ಇಂಟೆಲ್ಗೆ ಗೌಡಿ-3 ಉತ್ತಮ ಸರಕಾಗಬಹುದು. ಡೆಲ್, ಎಚ್ಪಿ, ಲೆನೋವು, ಸೂಪರ್ ಮೈಕ್ರೋ ಮೊದಲಾದ ಕಂಪನಿಗಳು ಗೌಡಿ-3 ಚಿಪ್ ಬಳಸಲು ಮುಂದಾಗಿವೆ.
ಭಾರತದ ಐಟಿ ಸರ್ವಸ್ ಕಂಪನಿಯಾದ ಇನ್ಫೋಸಿಸ್ ಇದೀಗ ತನ್ನ ಟೋಪಾಜ್ ಎಂಬ ಎಐ ಸರ್ವಿಸ್ಗೆ ಇಂಟೆಲ್ನ 5ನೇ ತಲೆಮಾರಿನ ಕ್ಸಿಯಾನ್ ಪ್ರೋಸಸರ್, ಇಂಟೆಲ್ ಗೌಡಿ 2 ಎಐ ಆಕ್ಸಲರೇಟರ್ಸ್, ಇಂಟೆಲ್ ಕೋರ್ ಅಲ್ಟ್ರಾ ತಂತ್ರಜ್ಞಾನದ ಸಹಾಯ ಪಡೆಯಲಿದೆ.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾದ ನಿಮ್ಮ ಪೋಸ್ಟ್ಗಳು ವಿದೇಶೀ ಸರ್ವರ್ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್
ಓಲಾ ಕೃತ್ರಿಮ್ನ ಎಐ ಮಾಡಲ್ಗೆ ಪ್ರೀ ಟ್ರೈನಿಂಗ್ ನೀಡಲು ಇಂಟೆಲ್ನ ಚಿಪ್ಗಳನ್ನು ಬಳಸಲಾಗುತ್ತದೆ. 10 ಭಾರತೀಯ ಭಾಷೆಗಳಲ್ಲಿ ಕೃತ್ರಿಮ್ನ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ಗೆ ಟ್ರೈನಿಂಗ್ ಮಾಡಲಾಗುತ್ತಿದೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ