ಇಂದು ಭಾರತದಲ್ಲಿ ಪ್ರತಿ ವಾರ ಕಡಿಮೆ ಎಂದರೂ ಎರಡರಿಂದ ಮೂರು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತವೆ. ತಿಂಗಳಿಗೆ ಸುಮಾರು 10 ಫೋನುಗಳು ಲಾಂಚ್ ಆಗುತ್ತವೆ. ಇದರಲ್ಲಿ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಕೂಡ ಇರುತ್ತವೆ. ಈಗಂತು ಹೆಚ್ಚಾಗಿ ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಗಳ ಮೊಬೈಲ್ ರಿಲೀಸ್ ಆಗುತ್ತಿರುವ ಕಾರಣ ಅವುಗಳು ಎಗ್ಗಿಲ್ಲದೆ ಸೇಲ್ ಆಗುತ್ತವೆ. ಆದರೆ, ಇದರಲ್ಲಿ ಎಲ್ಲವೂ ಯಶಸ್ಸು ಸಾಧಿಸುವುದಿಲ್ಲ. ಕೆಲ ಫೋನ್ಗಳು ಭರ್ಜರಿ ದಾಖಲೆಯ ಮಾರಾಟ ಕಂಡರೆ ಇನ್ನೂ ಕೆಲ ಸ್ಮಾರ್ಟ್ಫೋನ್ಸ್ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು 2026 ರ ವೇಳೆಗೆ 1 ಶತಕೋಟಿ ತಲುಪುತ್ತದೆ ಎಂದು ಡೆಲಾಯ್ಟ್ ಹೇಳಿದೆ. ಈ ವರ್ಷ 2024 ರಲ್ಲಿ ಕೂಡ ಈವರೆಗೆ ಅನೇಕ ಫೋನುಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಈ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 ಫೋನುಗಳು ಯಾವುವು?, ಅವುಗಳ ವಿಶೇಷತೆ ಏನು? ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಆ್ಯಪಲ್ ಕಂಪನಿಯ ಐಫೋನ್ಗಳಿಗೆ ಈಗ ದೇಶದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಕೆಲ ವರ್ಷಗಳ ಹಿಂದೆ ದುಬಾರಿಯಾಗಿದ್ದ ಈ ಫೋನುಗಳು ಈಗ ಇಎಂಐ ಆಯ್ಕೆ ಮತ್ತು ಇ ಕಾಮರ್ಸ್ ತಾಣಗಳ ಸೇಲ್ನಿಂದ ಕಡಿಮೆ ಬೆಲೆಗೆ ಸಿಗುತ್ತವೆ. ಹೀಗಾಗಿ ಐಫೋನುಗಳ ಮಾರಾಟ ಭರ್ಜರಿ ಆಗಿ ಕರ್ನಾಟದಲ್ಲೂ ನಡೆದಿವೆ. ಕಳೆದ ವರ್ಷ ಐಫೋನ್ 14 ಪ್ರೊ ಮ್ಯಾಕ್ಸ್ 34 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಐಫೋನ್ 15 ಪ್ರೊ ಮ್ಯಾಕ್ಸ್ 33 ಮಿಲಿಯನ್ ಯುನಿಟ್ ಸೇಲ್ ಆಗಿತ್ತು. ಈ ವರ್ಷದ ಜನವರಿಯಿಂದ ಕೂಡ ಈ ಫೋನುಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಐಫೋನ್ 15 ಪ್ರೊ ಮ್ಯಾಕ್ಸ್ ಫೀಚರ್ಸ್ ಬಗ್ಗೆ ಗಮನಿಸುವುದಾದರೆ ಈ ಫೋನ್ 2796×1290 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 460 ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 6.7-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.
ಕ್ಯಾಮೆರಾಗಳಿಗೆ ಹೇಳಿ ಮಾಡಿಸಿರುವ ಈ ಫೋನ್ನಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ನೀಡಲಾಗಿದೆ. ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗೆ ಈ ಫೋನ್ ಸೂಕ್ತವಾಗಿದೆ. ಇದು f/1.78 ರ ದ್ಯುತಿರಂಧ್ರದೊಂದಿಗೆ 48 MP ಪ್ರಾಥಮಿಕ ಕ್ಯಾಮೆರಾ, f/2.2 ರ ದ್ಯುತಿರಂಧ್ರದೊಂದಿಗೆ 12 MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು f/1.78 ರ ದ್ಯುತಿರಂಧ್ರದೊಂದಿಗೆ 12 MP ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗೆ ಇದು f/1.9 ರ ದ್ಯುತಿರಂಧ್ರದೊಂದಿಗೆ 12 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಹೆಕ್ಸಾ-ಕೋರ್ ಆ್ಯಪಲ್ A17 ಬಯೋನಿಕ್ ಚಿಪ್‌ಸೆಟ್‌ನಿಂದ ಕೂಡಿದೆ. ಈ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್ ಮತ್ತು ದೀರ್ಘಾವಧಿಯ ಬಳಕೆಯನ್ನು ನೀಡುತ್ತದೆ. ಐಫೋನ್ 14 ಪ್ರೊ ಮ್ಯಾಕ್ಸ್ ಬೆಲೆ 1,48,900 ರೂ. ಆಗಿದೆ.
ಬಜೆಟ್ ಬೆಲೆಗೆ ಒಂದೊಳ್ಳೆ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುವುದರಲ್ಲಿ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿ ಎತ್ತಿದ ಕೈ. ಕರ್ನಾಟದಲ್ಲಿ ಕೂಡ ಅತಿ ಹೆಚ್ಚು ಸೇಲ್ ಆಗುವ ಫೋನುಗಳು ಸ್ಯಾಮ್ಸಂಗ್ ಆಗಿವೆ. ಈ ಕಂಪನಿಯ ಎ ಸರಣಿಯ ಸ್ಯಾಮ್ಸಂಗ್ ಗ್ಯಾಲಕ್ಸಿ A14 5G ಫೋನ್ ಭರ್ಜರಿ ಸೇಲ್ ಕಾಣುತ್ತಿದೆ. ಇದರ ಆರಂಭಿಕ ಬೆಲೆ 13,499 ರೂ. ಆಗಿದೆ. ಈ ಫೋನ್ 6.6-ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ, 90Hz ರಿಫ್ರೆಶ್ ದರ ಮತ್ತು 480 nits ವರೆಗಿನ ಗರಿಷ್ಠ ಹೊಳಪಿನೊಂದಿಗೆ ಬರುತ್ತದೆ.
ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಎಕ್ಸಿನೊಸ್ 1330 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ, ಗರಿಷ್ಠ 8GB RAM ನೊಂದಿಗೆ ಜೋಡಿಸಲಾಗಿದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತಿರುವ ಈ ಸಾಧನವನ್ನು ಸ್ಯಾಮ್ಸಂಗ್ನ One UI 5.0 ನೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಛಾಯಾಗ್ರಹಣದ ವಿಷಯದಲ್ಲಿ, ಗ್ಯಾಲಕ್ಸಿ A14 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಇದರಲ್ಲಿ 50MP ಮುಖ್ಯ ಸಂವೇದಕವು f/2.2 ಅಪರ್ಚರ್, 2MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಜೊತೆಗೆ f/2.4 ಅಪರ್ಚರ್ ಮತ್ತು 2MP ಸಂವೇದಕ f/2.4 ಅಪರ್ಚರ್ ಅನ್ನು ಒಳಗೊಂಡಿದೆ. 13MP ಮುಂಭಾಗದ ಕ್ಯಾಮೆರಾ ಇದೆ. 5000mAh ಬ್ಯಾಟರಿ ನೀಡಲಾಗಿದ್ದು, 15W ಚಾರ್ಜಿಂಗ್ ಬೆಂಬಲವಿದೆ.
ಪ್ರಸಿದ್ಧ ಶವೋಮಿ ಕಂಪನಿಯ ರೆಡ್ಮಿ A2 ಸ್ಮಾರ್ಟ್‌ಫೋನ್ ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಫೋನುಗಳ ಸಾಲಿನಲ್ಲಿ ಕಾಣಿಸಿಕೊಂಡಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಕಂಪನಿ ರೆಡ್ಮಿ A3 ಯನ್ನು ಬಿಡುಗಡೆ ಮಾಡಿದೆ. ಈ ಫೋನ್ಗೆ ಕೂಡ ಭರ್ಜರಿ ಬೇಡಿಕೆ ಇದೆ. ಕರ್ನಾಟಕದಲ್ಲಿ ಕೂಡ ಬಜೆಟ್ ಪ್ರೇಮಿಗಳು ರೆಡ್ಮಿ A3 ಫೋನನ್ನು ಖರೀದಿ ಮಾಡುತ್ತಿದ್ದಾರೆ. ಈ ಫೋನಿನ ಆರಂಭಿಕ ಬೆಲೆ 6,999 ರೂ. ಆಗಿದೆ. ಫೀಚರ್ಸ್ ಬಗ್ಗೆ ನೋಡಿದರೆ ಈ ಫೋನ್, 6.71-ಇಂಚಿನ HD+ ಡಿಸ್ಪ್ಲೇ ಜೊತೆಗೆ 720×1650 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಡಿಸ್ಪ್ಲೇಯು 90Hz ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಯಿಂದ ರಕ್ಷಿಸಲ್ಪಟ್ಟಿದೆ.
ರೆಡ್ಮಿ ಎ3 ಇದೊಂದು ಪಕ್ಕಾ ಬಜೆಟ್ ಸ್ಮಾರ್ಟ್ಫೋನಾಗಿದ್ದು ಆಕ್ಟಾ-ಕೋರ್ ಹೆಲಿಯೊ G36 ಚಿಪ್‌ಸೆಟ್‌ನಿಂದ 6GB RAM ವರೆಗೆ ಜೋಡಿಸಲ್ಪಟ್ಟಿದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ, ಇದು 8MP ಮುಖ್ಯ ಸಂವೇದಕ ಮತ್ತು ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 5MP ಸೆಲ್ಫಿ ಶೂಟರ್ ಇದೆ. ಇದು 10W ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಸ್ಯಾಮ್ಸಂಗ್ ಕಂಪನಿಯ ಮಧ್ಯಮ ಬೆಲೆಯ ಮತ್ತೊಂದು ಸ್ಮಾರ್ಟ್‌ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ A34 5G ಕೂಡ ಕರ್ನಾಟಕದಲ್ಲಿ ಉತ್ತಮವಾಗಿ ಸೇಲ್ ಆಗಿದೆ. ಇದರ ಆರಂಭಿಕ ಬೆಲೆ 26,499 ರೂ. ಆಗಿದೆ. ಈ ಫೋನ್ 6.6-ಇಂಚಿನ ಸೂಪರ್ AMOLED ಡಿಸ್ಪ್ಲೇ ಜೊತೆಗೆ FHD + ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ.
ಈ ಫೋನಿನಲ್ಲಿನ ಹಿಂಬದಿಯ ಕ್ಯಾಮೆರಾವು ದೈನಂದಿನ ಕ್ಷಣಗಳನ್ನು ಸುಲಭವಾಗಿ ಸೆರೆಹಿಡಿಯಲು ಸಜ್ಜುಗೊಂಡಂತಿದೆ. ಕಡಿಮೆ-ಬೆಳಕಿನ ಸ್ಥಿತಿಗಳಲ್ಲಿಯೂ ಸಹ ತೀಕ್ಷ್ಣವಾದ ಮತ್ತು ವಿವರವಾದ ಫೋಟೋಗಳನ್ನು ತೆಗೆಯಲು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಜೊತೆಗೆ ಪ್ರಬಲವಾದ 48MP ಮುಖ್ಯ ಕ್ಯಾಮೆರಾ ನೀಡಲಾಗಿದೆ. 8MP ಅಲ್ಟ್ರಾ-ವೈಡ್ ಸಂವೇದಕವಿದೆ. 5MP ಸಂವೇದಕವು ಕ್ಲೋಸ್-ಅಪ್ ಫೋಟೋ ಸೆರೆಹಿಡಿಯಲು ಬಳಸಬಹುದು. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 13MP ಮುಂಭಾಗದ ಕ್ಯಾಮೆರಾ ಲಭ್ಯವಿದೆ.
ಗ್ಯಾಲಕ್ಸಿ A34 5G5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಬಳಕೆದಾರರು ಒಂದೇ ಚಾರ್ಜ್‌ನಲ್ಲಿ ಪೂರ್ಣ ದಿನದ ಬಳಕೆಯನ್ನು ನಿರೀಕ್ಷಿಸಬಹುದು. ತ್ವರಿತ ಟಾಪ್-ಅಪ್ ಅಗತ್ಯಕ್ಕಾಗಿ ಫೋನ್ 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ವಿವೋ V29 ಸ್ಮಾರ್ಟ್‌ಫೋನ್ ಕಳೆದ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ಅನಾವರಣಗೊಂಡಿತ್ತು. ಈಗಲೂ ಈ ಫೋನಿಗೆ ಭರ್ಜರಿ ಬೇಡಿಕೆ ಇದೆ. ಕರ್ನಾಟಕದಲ್ಲೂ ಈ ಫೋನ್ ಮೊಬೈಲ್ ಅಂಗಡಿಗಳಲ್ಲಿ ಉತ್ತಮವಾಗಿ ಮಾರಾಟ ಆಗುತ್ತಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು, 32,999 ರೂ. ಗೆ ಖರೀದಿಸಬಹುದು. ಫೀಚರ್ಸ್ ಬಗ್ಗೆ ನೋಡುವುದಾದರೆ ವಿವೋ V29 ಫೋನ್, 6.78-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 1.5K ರೆಸಲ್ಯೂಶನ್, 120Hz ವರೆಗೆ ರಿಫ್ರೆಶ್ ದರ ಹೊಂದಿದೆ. ಸ್ನಾಪ್‌ಡ್ರಾಗನ್ 778G ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಫೋನ್ ಅಲ್ಟ್ರಾ-ಲಾರ್ಜ್ ವಿಸಿ ಬಯೋನಿಕ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ.
ಈ ಹ್ಯಾಂಡ್ಸೆಟ್ನಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದ್ದು, OIS ಬೆಂಬಲವನ್ನು ಹೊಂದಿರುವ 50MP ಪ್ರಾಥಮಿಕ ಕ್ಯಾಮೆರಾ ಇದೆ. ವಿವೋ V29 ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4600mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಕೇವಲ 18 ನಿಮಿಷಗಳಲ್ಲಿ ಬ್ಯಾಟರಿಯನ್ನು 50% ಚಾರ್ಜ್ ಮಾಡಬಹುದು ಎಂದು ಸ್ವತಃ ಕಂಪನಿಯೇ ಹೇಳಿದೆ.