ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಗಳು (Cyber Crime) ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಯಾವ ತಂತ್ರಜ್ಞಾನವು ಮನುಷ್ಯನ ಜೀವನವನ್ನು ಸುಲಭಗೊಳಿಸಿದೆಯೋ, ಅದೇ ತಂತ್ರಜ್ಞಾನ ಇಂದು ಕಂಟಕವಾಗಿ ಪರಿಣಮಿಸುತ್ತಿದೆ. ಸೈಬರ್ ಅಪರಾಧಿಗಳು ವಿವಿಧ ಮಾರ್ಗಗಳನ್ನು ಕಂಡುಹಿಡಿದು ಅಮಾಯಕರ ಹಣವನ್ನು ದೋಚುತ್ತಿದ್ದಾರೆ. ಸೈಬರ್ ಕಳ್ಳರು ದಿನಕ್ಕೊಂದು ಹೊಸ ಹೊಸ ಮಾರ್ಗವನ್ನು ಸೃಷ್ಟಿಸಿದ್ದಾರೆ. ಈ ಬಗ್ಗೆ ನೀವು ಎಚ್ಚರದಿಂದ ಇರದಿದ್ದರೆ ದೊಡ್ಡ ನಷ್ಟ ಅನುಭವಿಸುವುದು ಖಚಿತ. ಇಂದು ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್‌ನಲ್ಲಿ ಕಂಡುಬರುವ ನಕಲಿ ಉದ್ಯೋಗದ ಮಾಹಿತಿಯಿಂದ ಹಿಡಿದು ರಿಯಲ್ ಎಸ್ಟೇಟ್ ವೆಬ್‌ಸೈಟ್‌ಗಳಲ್ಲಿ ಕೂಡ ಕಳ್ಳರು ಕರಾಮತ್ತು ತೋರಿಸುತ್ತಿದ್ದಾರೆ.
ಸದ್ಯ ದೇಶದಲ್ಲಿ ಚಾಲ್ತಿಯಲ್ಲಿರುವ ಕೆಲವು ಸಾಮಾನ್ಯ ಆನ್‌ಲೈನ್ ಸ್ಕ್ಯಾಮ್‌ಗಳು, ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳಿಂದ ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
ಹೆಚ್ಚಾಗಿ ಯೂಟ್ಯೂಬ್ ವಿಡಿಯೋಗಳನ್ನು ನೋಡುವವರು ಅಥವಾ ಆನ್ಲೈನ್ನಲ್ಲಿ ಯಾವುದಾದರು ಪ್ರಾಡಕ್ಟ್ಗಳಿಗೆ ವಿಮರ್ಶೆಗಳನ್ನು ಬರೆಯುವರು ಈ ಸ್ಕ್ಯಾಮರ್ಗಳ ಟಾರ್ಗೆಟ್. ನೀವು ಯೂಟ್ಯೂಬ್ನಲ್ಲಿ ಈ ವಿಡಿಯೋ ಇಷ್ಟು ನಿಮಿಷಗಳ ಕಾಲ ನೋಡಿದರೆ ಹಣ ಗಳಿಸುತ್ತೀರಿ ಎಂದು ವಿದೇಶಿ ಸಂಖ್ಯೆಯಿಂದ ಒಂದು ಮೆಸೇಜ್ ಬರುತ್ತದೆ. ಆರಂಭದಲ್ಲಿ ನಿಮಗೆ ಅವರು ಸಣ್ಣ ಮಟ್ಟದ ಹಣವನ್ನು ಕೂಡ ಪಾವತಿಸುತ್ತಾರೆ. ಬಳಿಕ ನಿಮ್ಮ ನಂಬಿಕೆಯನ್ನು ಗಳಿಸಿ ನಿಮ್ಮ ಹಣವನ್ನು ಕದಿಯಲು ಮುಂದಾಗುತ್ತಾರೆ. ನೀವು ಇನ್ನಷ್ಟು ಹಣವನ್ನು ಹೂಡಿಕೆ ಮಾಡಲು ಈ ಸ್ಕ್ಯಾಮರ್‌ಗಳು ನಿಮ್ಮ ಬಗ್ಗೆ ಸೂಕ್ಷ್ಮವಾದ ವಿವರಗಳನ್ನು ಕೇಳುತ್ತಾರೆ. ಈ ರೀತಿಯ ವಂಚನೆಯನ್ನು ಎಂದಿಗೂ ನಂಬಬೇಡಿ.
ಸೈಬರ್ ಅಪರಾಧಿಗಳು ಬಳಕೆದಾರರ ಮೊಬೈಲ್ ಸಂಖ್ಯೆಯ ಮಾಹಿತಿಯನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಸಂಗ್ರಹಿಸುತ್ತಿದ್ದಾರೆ. ನೀವು ಯಾವ ವಿವರಗಳೊಂದಿಗೆ ಸಿಮ್ ಕಾರ್ಡ್ ತೆಗೆದುಕೊಂಡಿದ್ದೀರಿ?, ಸಿಮ್ ಕಾರ್ಡ್ ಯಾರ ಹೆಸರಿನಲ್ಲಿದೆ? ಮುಂತಾದ ವಿವರಗಳನ್ನು ಸಂಗ್ರಹಿಸುತ್ತಾರೆ. ನಂತರ ಅವರು ನಿಮ್ಮ ಹೆಸರಿನಲ್ಲಿ ಮಾತನಾಡಿ, ಸೂಕ್ತ ವಿವರಗಳನ್ನು ನೀಡಿ ಟೆಲಿಕಾಂ ಕಂಪನಿಗೆ ವಿಶ್ವಾಸ ಮೂಡಿಸುತ್ತಾರೆ. ಈ ಮೂಲಕ ಅವರು ಹೊಸ ಸಿಮ್ ಅನ್ನು ಪಡೆಯುತ್ತಾರೆ. ಇದಕ್ಕಾಗಿ ಬಳಕೆದಾರರ ನಕಲಿ ಐಡಿ ಸೃಷ್ಟಿಸಲಾಗುತ್ತಿದೆ.
Google Pixel 8a: ಗೂಗಲ್ ಕಂಪನಿಯಿಂದ ಬರುತ್ತಿದೆ ಮತ್ತೊಂದು ಸ್ಮಾರ್ಟ್ಫೋನ್: ಪಿಕ್ಸೆಲ್ 8a ಸದ್ಯದಲ್ಲೇ ಬಿಡುಗಡೆ
ಹೀಗೆ ಮಾಡುವುದರಿಂದ ಮೊಬೈಲ್ ಬಳಕೆದಾರರ ಸಂಖ್ಯೆ ಅವರಿಗೆ ತಿಳಿಯದಂತೆ ನಿಷ್ಕ್ರಿಯಗೊಳ್ಳುತ್ತದೆ. ಈ ವೇಳೆ ನಕಲಿ ಸಿಮ್ ಕಾರ್ಡ್ ಪಡೆದಿರುವ ಸೈಬರ್ ಅಪರಾಧಿಗಳು ಒಟಿಪಿ ಮೂಲಕ ನಿಮ್ಮ ಖಾತೆಯಿಂದ ಹಣ ಕದಿಯುತ್ತಾರೆ. ಇಂತಹ ಅಪರಾಧಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿವೆ. ಮೊನ್ನೆಯಷ್ಟೆ ದೆಹಲಿಯ ಮಹಿಳಾ ವಕೀಲರು ಸಿಮ್ ಸ್ವಾಪ್ನಿಂದ ಹಣ ಕಳೆದುಕೊಂಡಿದ್ದರು. ಮಹಿಳೆಗೆ ಮೂರು ಬಾರಿ ಕರೆ ಬಂದಿದ್ದು, ಕೆಲ ಸಮಯದ ಬಳಿಕ ಆಕೆಯ ಬ್ಯಾಂಕ್ ಖಾತೆಯಿಂದ ಲಕ್ಷಗಟ್ಟಲೆ ಹಣ ಮಾಯವಾಗಿದೆ. ಮಹಿಳೆ ಕರೆ ಸ್ವೀಕರಿಸಲಿಲ್ಲ ಅಥವಾ ಕಾಲ್ ಕಟ್ ಮಾಡಲಿಲ್ಲ, ಆದರೂ ಅವರು ಹಣ ಕಳೆದುಕೊಂಡಿದ್ದಾರೆ.
Olx ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತುಗಳನ್ನು ಪೋಸ್ಟ್ ಮಾಡುವ ಜನರಿಂದ ಅಥವಾ ಮ್ಯಾಜಿಕ್‌ಬ್ರಿಕ್ಸ್ ಮತ್ತು 99acres ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಾಪರ್ಟಿ ಜಾಹೀರಾತುಗಳನ್ನು ಪೋಸ್ಟ್ ಮಾಡುವ ಜನರಿಂದ ಹಣವನ್ನು ಕದಿಯಲು ಸ್ಕ್ಯಾಮರ್‌ಗಳು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಜನರ ವಿಶ್ವಾಸವನ್ನು ಗಳಿಸಲು, ಅವರು ಭಾರತೀಯ ಸೇನೆ, ಸಿಐಎಸ್ಎಫ್, ಪೊಲೀಸ್ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ಇವರು ಫೇಕ್ ಭಾರತೀಯ ಸೇನೆಯ ಐಡಿ ಕಾರ್ಡ್ ತೋರಿಸಿ ಸಂತ್ರಸ್ತರನ್ನು ನಂಬುವಂತೆ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಸ್ಕ್ಯಾಮರ್‌ಗಳು ಹೆಚ್ಚಿನ ಹಣದ ಆಮೀಷವೊಡ್ಡಿ ಮಾರಾಟಗಾರ/ಖರೀದಿದಾರರ ನಂಬಿಕೆ ಪಡೆಕೊಂಡು ಮೋಸ ಮಾಡುತ್ತಾರೆ.
ಈ ಹಗರಣದಿಂದ ಜನರನ್ನು ಮೋಸಗೊಳಿಸಲು ಸ್ಕ್ಯಾಮರ್‌ಗಳು ಭಯವನ್ನು ಹುಟ್ಟಿಸುತ್ತಾರೆ. ಹೆಚ್ಚಾಗಿ, ಅವರು ಫೆಡ್‌ಎಕ್ಸ್‌ನಂತಹ ಕೊರಿಯರ್ ವಿತರಣಾ ಕಂಪನಿಯಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿ ಮೋಸಗೊಳಿಸುತ್ತಾರೆ. ನಿಮ್ಮ ಪ್ಯಾಕೇಜ್ನಲ್ಲಿ ಡ್ರಗ್ಸ್, ನಕಲಿ ಪಾಸ್‌ಪೋರ್ಟ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಂತಹ ಕಾನೂನು ವಿರೋಧ ವಸ್ತುಗಳಿವೆ ಎಂದು ಹೇಳುತ್ತಾರೆ. ಪೊಲೀಸ್ ಅಧಿಕಾರಿ ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ವೀಡಿಯೊ ಕರೆ ಮಾಡಲು ಕೇಳುತ್ತಾರೆ. ಬಳಿಕ ಸ್ವಲ್ಪ ಹಣವನ್ನು ವರ್ಗಾಯಿಸಿ ಎಂದು ಆಮೀಷವೊಡ್ಡುತ್ತಾರೆ. ಹಾಗೆಂದು ನೀವು ಹಣವನ್ನು ವರ್ಗಾಯಿಸಿದರೆ ನಂತರ ಅವರು ನಿಮ್ಮ ಸಂಪರ್ಕಕ್ಕೆ ಸಿಗುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 am, Thu, 23 November 23