ಚೀನಾ ಮೂಲದ ಸ್ಮಾರ್ಟ್ಫೋನ್ ಮತ್ತು ಗ್ಯಾಜೆಟ್ ತಯಾರಿಕಾ ಕಂಪನಿ ಟೆಕ್ನೋ, ಭಾರತದಲ್ಲಿ ಆಕರ್ಷಕ ಮಾದರಿಯ, ಬಜೆಟ್ ದರದ ಸ್ಮಾರ್ಟ್ಫೋನ್ ಪರಿಚಯಿಸಿದೆ. ಕಡಿಮೆ ದರಕ್ಕೆ ಉತ್ತಮ ಫೀಚರ್ ಅನ್ನು ಪರಿಚಯಿಸುವ ಮೂಲಕ ಟೆಕ್ನೋ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಭಾರತದಲ್ಲಿ ಗಳಿಸಿದೆ. ನೂತನ ಟೆಕ್ನೋ ಪಾಪ್ 7 ಪ್ರೊ (Tecno Pop 7 Pro) ಸ್ಮಾರ್ಟ್ಫೋನ್ ಭಾರತದಲ್ಲಿ ₹6,799 ಆರಂಭಿಕ ದರ ಹೊಂದಿದೆ. ಅಮೆಜಾನ್ ಇಂಡಿಯಾ ಮೂಲಕ ಹೊಸ ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.
ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್ಫೋನ್, 6.6 ಇಂಚಿನ HD+ IPS ಡಿಸ್ಪ್ಲೇ ಹೊಂದಿದೆ. ಅಲ್ಲದೆ, ಆ್ಯಂಡ್ರಾಯ್ಡ್ 12 ಆಧಾರಿತ HiOS 11.0 ಮೂಲಕ ಹೊಸ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುತ್ತದೆ. ಕ್ವಾಡ್ ಕೋರ್ ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸರ್ ಬೆಂಬಲವನ್ನು ಲೇಟೆಸ್ಟ್ ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್ಫೋನ್ ಹೊಂದಿದೆ. ಫೋಟೊಗ್ರಫಿ ಪ್ರಿಯರಿಗಾಗಿ ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್ಫೋನ್ನಲ್ಲಿದೆ. ಉಳಿದಂತೆ 5000mAh ಬ್ಯಾಟರಿ ಬೆಂಬಲ ಹಾಗೂ 10W Type C ಅಡಾಪ್ಟರ್ ನೂತನ ಟೆಕ್ನೋ ಸ್ಮಾರ್ಟ್ಫೋನ್ನ ವಿಶೇಷತೆಯಾಗಿದೆ.
ಹೊಸದಾಗಿ ಪರಿಚಯಿಸಲ್ಪಟ್ಟಿರುವ ಟೆಕ್ನೋ ಪಾಪ್ 7 ಪ್ರೊ ಸ್ಮಾರ್ಟ್ಫೋನ್ 6 GB RAM ಮತ್ತು 64 GBವರೆಗಿನ ಸ್ಟೋರೇಜ್ ಸಾಮರ್ಥ್ಯದಲ್ಲಿ ದೊರೆಯಲಿದೆ. 4 GB+64 GB ಮಾದರಿಗೆ ₹6,799 ಮತ್ತು 6 GB+ 64 GB ಆವೃತ್ತಿಗೆ ₹7,299 ದರ ನಿಗದಿಪಡಿಸಲಾಗಿದೆ. ಅಮೆಜಾನ್ ಇಂಡಿಯಾ ಮೂಲಕ ಎಂಡ್ಲೆಸ್ ಬ್ಲ್ಯಾಕ್ ಮತ್ತು ಯುನಿ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಹೊಸ ಸ್ಮಾರ್ಟ್ಫೋನ್ ಲಭ್ಯವಾಗುತ್ತದೆ.
Published On - 6:58 pm, Fri, 17 February 23