ಟ್ವಿಟರ್ ತನ್ನ ಬಹು ನಿರೀಕ್ಷಿತ ಎಡಿಟ್ ಟ್ವೀಟ್ ವೈಶಿಷ್ಟ್ಯವನ್ನು ಸೆಪ್ಟೆಂಬರ್ 21 ರಂದು ಹೊರತರಲಿದೆ. ಎಡಿಟ್ ಟ್ವೀಟ್ ವೈಶಿಷ್ಟ್ಯವು ಪ್ರಕಟಿಸಿದ ನಂತರ ಜನರು ತಮ್ಮ ಟ್ವೀಟ್‌ಗಳಲ್ಲಿ ಬದಲಾವಣೆಗಳನ್ನು ಮಾಡಲು ಅನುಮತಿಸುತ್ತದೆ. ಈ ವೈಶಿಷ್ಟ್ಯವು ತಿಂಗಳಿಗೆ 4.99 ರೂ. ಪಾವತಿಸುವ ನೀಲಿ ಟಿಕ್ ಮಾರ್ಕ್ ಚಂದಾದಾರರಿಗೆ ಮೊದಲು ಲಭ್ಯವಿರುತ್ತದೆ.
ಎಡಿಟ್ ಟ್ವೀಟ್ಗಳು ಐಕಾನ್, ಟೈಮ್ ಸ್ಟ್ಯಾಂಪ್, ಮತ್ತು ಲೇಬಲ್ನೊಂದಿಗೆ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮೂಲ ಟ್ವೀಟ್ ಅನ್ನು ಮಾರ್ಪಡಿಸಲಾಗಿದೆ ಎಂಬುದು ಓದುಗರಿಗೆ ಸ್ಪಷ್ಟವಾಗುತ್ತದೆ. ಲೇಬಲ್ ಅನ್ನು ಟ್ಯಾಪ್ ಮಾಡುವುದರಿಂದ ವೀಕ್ಷಕರನ್ನು ಟ್ವೀಟ್ನ ಎಡಿಟ್ ಹಿಸ್ಟರಿಗೆ ಕರೆದೊಯ್ಯುತ್ತದೆ.
ಮುಂದಿನ ವಾರದಿಂದ ಈ ವೈಶಿಷ್ಟ್ಯವನ್ನು ಸಾರ್ವಜನಿಕರಿಗೆ ಪರಿಚಯಿಸುವ ಸಾಧ್ಯತೆಯಿದೆ ಎಂದು ಪ್ಲಾಟ್ಫಾರ್ಮರ್ನ ಕೇಸಿ ನ್ಯೂಟನ್ ಶುಕ್ರವಾರ ಟ್ವೀಟ್ನಲ್ಲಿ ತಿಳಿಸಿದ್ದಾರೆ. “ಟ್ವಿಟರ್ ನನ್ನೊಂದಿಗೆ ಹಂಚಿಕೊಂಡ ಆಂತರಿಕ ದಾಖಲೆಗಳ ಪ್ರಕಾರ, ಬುಧವಾರ 9/21 ರಂದು ಟ್ವೀಟ್ಗಳನ್ನು ಎಡಿಟ್ ಮಾಡುವ ಸಾರ್ವಜನಿಕ ಪರೀಕ್ಷೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ ಬಳಕೆದಾರರು ವ್ಯಾಕರಣ ದೋಷಗಳನ್ನು ಸರಿಪಡಿಸಲು ಎಡಿಟ್ ಆಯ್ಕೆಗಳನ್ನು ನೀಡುವಂತೆ ವರ್ಷಗಳಿಂದ ಕೇಳುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಸಾರ್ವಜನಿಕ ವೈಶಿಷ್ಟ್ಯವನ್ನು ಹೊರತರುವ ಮೊದಲು ಆಂತರಿಕ ತಂಡದೊಂದಿಗೆ ಟ್ವಿಟರ್ ಎಡಿಟ್ ಟ್ವೀಟ್ ವೈಶಿಷ್ಟ್ಯಕ್ಕಾಗಿ ಒಂದು ಸಣ್ಣ ಪರೀಕ್ಷೆಯನ್ನು ಘೋಷಿಸಿತು. “ಜನರು ಟ್ವೀಟ್ಗಳನ್ನು ಓದುವ, ಬರೆಯುವ ಮತ್ತು ತೊಡಗಿಸಿಕೊಳ್ಳುವ ವಿಧಾನದ ಮೇಲೆ ಈ ವೈಶಿಷ್ಟ್ಯವು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆಯೂ ನಾವು ಹೆಚ್ಚು ಗಮನ ಹರಿಸಲಿದ್ದೇವೆ” ಎಂದು ಕಂಪನಿ ತಿಳಿಸಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Mon, 19 September 22