ಮುಂಬೈ: ಚಿಕನ್ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿಗಷ್ಟೇ ತಮಿಳುನಾಡಿನ 14ರ ಹರೆಯದ ಬಾಲಕಿ ಸಾವನ್ನಪ್ಪಿರುವ ಘಟನೆ ವರದಿಯಾಗಿದ್ದು, ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ 19 ವರ್ಷದ ಯುವಕನೊಬ್ಬ ಮನ್‌ಖುರ್ದ್‌ನ ನಗರ ಪ್ರದೇಶದ ಸ್ಥಳೀಯ ಅಂಗಡಿಯಿಂದ ಚಿಕನ್ ಶವರ್ಮಾ ಸೇವಿಸಿದ್ದಾನೆ. ಕೆಲ ಹೊತ್ತಿನ ಬಳಿಕ ತೀವ್ರ ಆಸ್ವಸ್ಥಗೊಂಡ ಯುವಕನನ್ನು ಕೆಇಎಂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಇದಲ್ಲದೇ ಆತನೊಂದಿಗೆ ಶವರ್ಮಾ ತಿಂದಿದ್ದ ಐವರು ತೀವ್ರ ಅಸ್ವಸ್ಥರಾಗಿದ್ದಾರೆ.
ಟ್ರಾಂಬೆ ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತ ವ್ಯಕ್ತಿಯನ್ನು ಪ್ರಥಮೇಶ್ ಭೋಕ್ಸೆ ಎಂದು ಗುರುತಿಸಲಾಗಿದ್ದು, ಮೇ 3 ರಂದು ಸಂಜೆ ಆನಂದ್ ಕಾಂಬ್ಳೆ ಮತ್ತು ಮೊಹಮ್ಮದ್ ಅಹ್ಮದ್ ರೆಜಾ ಶೇಖ್ ಅವರು ತಮ್ಮ ಸ್ನೇಹಿತರೊಂದಿಗೆ ಚಿಕನ್ ಶವರ್ಮಾ ತಿನ್ನಲು ಹೋಗಿದ್ದರು.
ಭೋಕ್ಸೆ ಎಂದಿನಂತೆ ಮನೆಗೆ ಮರಳಿದ್ದು, ಮರುದಿನ ಆತನಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ವಾಂತಿ ಸಂಜೆಯವರೆಗೆ ನಿಲ್ಲದ ಕಾರಣ, ಆತನ ಪೋಷಕರು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಿದ್ದಾರೆ. ತೀವ್ರತೆಯ ಹಿನ್ನೆಲೆಯಲ್ಲಿ ಭೋಕ್ಸೆ ಅವರನ್ನು ಪರೇಲ್‌ನಲ್ಲಿರುವ ಕೆಇಎಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಭೋಕ್ಸೆಗೆ ಕೆಲವು ಔಷಧಿಗಳನ್ನು ನೀಡಿ ಮನೆಗೆ ವಾಪಸ್ ಕಳುಹಿಸಲಾಗಿದೆ. ಆದಾಗ್ಯೂ, ಅವರು ಮನೆಗೆ ತಲುಪುತ್ತಿದ್ದಂತೆ, ಮತ್ತೆ KEM ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದಾಗ್ಯೂ, ಚಿಕಿತ್ಸೆಯ ಹೊರತಾಗಿಯೂ, ಮಂಗಳವಾರ ಬೆಳಿಗ್ಗೆ 10:30 ಕ್ಕೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಹಾಳಾದ ಕೋಳಿ ಬಳಸಿದ್ದಕ್ಕಾಗಿ ಚಿಕನ್ ಷಾವರ್ಮಾ ಅಂಗಡಿ ನಡೆಸುತ್ತಿದ್ದ ಇಬ್ಬರು ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಡಿಸಿಪಿ ರಜಪೂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕನ್ ಶವರ್ಮಾ ತಿಂದು 14 ವರ್ಷದ ಬಾಲಕಿ ಸಾವು; 13 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಮತ್ತು 34ಅಡಿಯಲ್ಲಿ ಆರೋಪಗಳಿಗಾಗಿ ಆನಂದ್ ಕಾಂಬ್ಳೆ ಮತ್ತು ಮೊಹಮ್ಮದ್ ಅಹ್ಮದ್ ರೆಜಾ ಶೇಖ್ ಅವರನ್ನು ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ. ಅದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರರು ಸದ್ಯ ಅಪಾಯದಿಂದ ಪಾರಾಗಿದ್ದು, ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ