
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಭಾನುವಾರ ಟ್ರಕ್ ಚಾಲಕನೊಬ್ಬ ಎರಡು ವರ್ಷದ ಮಗುವಿನ ಮೇಲೆ ಟ್ರಕ್ ಹರಿಸಿರುವ ಭೀಕರ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಆಘಾತಕಾರಿ ಘಟನೆ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಗರ ನಿಗಮ ಗಾಜಿಯಾಬಾದ್ (ಜಿಎನ್ಎನ್) ಎಂದೂ ಕರೆಯಲ್ಪಡುವ ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನ ಕಸದ ಟ್ರಕ್ ಡ್ರೈವರ್ ಪುಟ್ಟ ಬಾಲಕಿಯ ನಿಂತಿರುವುದನ್ನು ನೋಡಿಯೂ ಆಕೆಯ ಮೇಲೆ ಟ್ರಕ್ ಹರಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಇಂದು(ಸೆ.01) ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೈಲಾ ಭಟ್ಟ ವಾರ್ಡ್ ಸಂಖ್ಯೆ 93 ರ ಇಸ್ಲಾಂ ನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಎಲಿನಾ ಎಂದು ಗುರುತಿಸಲಾಗಿರುವ ಬಾಲಕಿ ತನ್ನ ಸಹೋದರಿಯೊಂದಿಗೆ ಲೇನ್ನಲ್ಲಿ ನಿಂತಿದ್ದಾಗ ಕಸದ ಟ್ರಕ್ ಆಕೆಯ ಮೇಲೆ ಹರಿದಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಬಾಲಕಿಯನ್ನು ಸಂತೋಷ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಟ್ರಕ್ ಚಾಲಕ ಆಕೆಗೆ ಡಿಕ್ಕಿ ಹೊಡೆದಿದ್ದು, ಕಸದ ಲಾರಿಯ ಮುಂಭಾಗದ ಟೈರ್ 2 ವರ್ಷದ ಬಾಲಕಿಯ ಮೇಲೆ ಹರಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಟ್ರಕ್ನತ್ತ ಧಾವಿಸಿ ಬಾಲಕಿಯನ್ನು ಟ್ರಕ್ನ ಕೆಳಗೆಯಿಂದ ಎಳೆದಿದ್ದಾನೆ.
ಇದನ್ನೂ ಓದಿ: ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಗೂಬೆಗಳೆರಡು ಚುಂಬಿಸುತ್ತಿರುವ ಅಪರೂಪದ ದೃಶ್ಯ
ಟ್ರಕ್ ಚಾಲಕ ವಾಹನದಿಂದ ಇಳಿದು ಸಹಾಯ ಮಾಡುವ ಬದಲು ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತ ಸಂಭವಿಸಿದ ನಂತರ ಆರೋಪಿಯು ಟ್ರಕ್ ಅನ್ನು ಲೇನ್ ಮಧ್ಯದಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗುತ್ತಿರುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ವರದಿಗಳಿಲ್ಲ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ