ಪುಟಾಣಿ ಮಕ್ಕಳಿಗೆ ತಮ್ಮ ಅಜ್ಜ-ಅಜ್ಜಿ ಎಂದ್ರೆ ಬಲು ಪ್ರೀತಿ. ಹೌದು ದಿನದ ಪ್ರತಿ ನಿಮಿಷವೂ ಕೂಡಾ ಅಜ್ಜ-ಅಜ್ಜಿಯ ಜೊತೆ ಕಳೆಯಲು ಇಷ್ಟ ಪಡ್ತಾರೆ. ಹೀಗೆ ಅವರೊಂದಿಗೆ ಆಟವಾಡುತ್ತಾ, ಕಥೆ, ಕೇಳುತ್ತಾ, ಕೈ ತುತ್ತು ತಿನ್ನುತ್ತಾ ಹಿರಿ ಜೀವಗಳೊಂದಿಗೆ ಸಮಯ ಕಳೆಯುತ್ತಾರೆ. ಇಂತಹ ತಮ್ಮ ಪ್ರೀತಿಯ ಅಜ್ಜ ಅಜ್ಜಿಗೆ ಪುಟಾಣಿ ಮಕ್ಕಳು ಯಾವುದೇ ಒಂದು ಸಣ್ಣ ನೋವಾಗಲೂ ಕೂಡಾ ಬಿಡಲ್ಲ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ತನ್ನ ಅಜ್ಜಿಯ ಮೇಲೆ ಹೋರಿ ದಾಳಿ ಮಾಡಿದಾಗ ಪುಟ್ಟ ಬಾಲಕನೊಬ್ಬ ಹೆದರಿ ಅಲ್ಲಿಂದ ಓಡಿ ಹೋಗದೆ, ತನ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ಹೋರಿಯನ್ನು ಒದ್ದೋಡಿಸಿ ತನ್ನ ಅಜ್ಜಿಯನ್ನು ಕಾಪಾಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ದಿಟ್ಟ ಬಾಲಕನ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಈ ಕುರಿತ ವಿಡಿಯೋವನ್ನು garrywalia_ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಗುವಿನ ಧೈರ್ಯಕ್ಕೆ ವಂದನೆಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಧೈರ್ಯಶಾಲಿ ಬಾಲಕ ತನ್ನ ಅಜ್ಜಿಯನ್ನು ಹೋರಿ ದಾಳಿಯಿಂದ ರಕ್ಷಿಸುವ ದೃಶ್ಯವನ್ನು ಕಾಣಬಹುದು. ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲಿಗೆ ಬಂದಂತಹ ಹೋರಿಯೊಂದು ಅಜ್ಜಿಯೊಬ್ಬರ ಮೇಲೆ ದಾಳಿ ಮಾಡುತ್ತದೆ. ಈ ದೃಶ್ಯವನ್ನು ಕಂಡು ಹೆದರಿ ಓಡಿ ಹೋಗದೆ ಪುಟ್ಟ ಬಾಲಕ ತನ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ಪೊರಕೆಯನ್ನು ಕೈಯಲ್ಲಿ ಹಿಡಿದು ಹೋರಿಯನ್ನು ಒದ್ದೋಡಿಸಿ ತನ್ನ ಅಜ್ಜಿಯನ್ನು ಕಾಪಾಡಿದ್ದಾನೆ. ಈ ದೃಶ್ಯ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ನಮ್ ಬಾಸ್ ರಿಲೀಸೋ.. ದೇವ್ರು ರಿಲೀಸ್ ಆಗ್ಬಿರ್ಟ್ರು ಕಣ್ರಲೇ!ವೈರಲ್ ಆಗ್ತಿದೆ ದರ್ಶನ್ ಮೀಮ್ಸ್
ಅಕ್ಟೋಬರ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮಗುವಿನ ಧೈರ್ಯಕ್ಕೆ ಸೆಲ್ಯೂಟ್ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಭಯದಿಂದ ಓಡಿ ಹೋಗದೆ ಅಜ್ಜಿಯನ್ನು ಕಾಪಾಡಿದ ಆ ಮಗುವಿನ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ