Woman : ಮಹಿಳಾ ಸಿಬ್ಬಂದಿಯು ಮುಟ್ಟಾದ ದಿನಗಳಲ್ಲಿ ಕೆಂಪು ಸ್ಟಿಕರ್ ಧರಿಸಬೇಕು ಎಂಬ ವಿಲಕ್ಷಣ ಹೇಳಿಕೆ ನೀಡಿದ ಆಸ್ಟ್ರೇಲಿಯಾದ ಕೆಫೆ ಮಾಲಿಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಲ್ ಮತ್ತು ಜಾಕಿ ಓ ಶೋನಲ್ಲಿ ಭಾಗವಹಿಸಿದ್ದ ಆ್ಯಂಟನಿಯೇ ಈ ಹೇಳಿಕೆ ನೀಡಿದ ಮಹಾನುಭಾವ. ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಹಾರ್ಮೋನ್ ಏರುಪೇರಿನಿಂದ ಭಾವನಾತ್ಮಕವಾಗಿ ಒತ್ತಡಕ್ಕೊಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆ ಅವಧಿಯಲ್ಲಿ ಕೆಂಪು ಸ್ಟಿಕರ್ ಧರಿಸಿದರೆ ಉಳಿದವರು ಅವರೊಂದಿಗೆ ಜಾಗ್ರತೆಯಿಂದ ವ್ಯವಹರಿಸಲು ಸೂಚನೆ ಸಿಕ್ಕಂತಾಗುತ್ತದೆ. ಏಕೆಂದರೆ ಇಬ್ಬರು ಮಹಿಳಾ ಸಿಬ್ಬಂದಿಯೊಂದಿಗೆ ತಾನು ಗ್ರಾಹಕರೆದುರೇ ಈ ವಿಷಯವಾಗಿ ಸಮಸ್ಯೆ ಎದುರಿಸಿದ್ದೇನೆ ಎಂದು ಶೋನಲ್ಲಿ ಹೇಳಿಕೊಂಡಿದ್ಧಾನೆ. ಕೆಂಪು ಸ್ಟಿಕರ್ ಧರಿಸಬೇಕು ಎಂಬ ಹೇಳಿಕೆಗೆ ರೇಡಿಯೋ ಜಾಕಿ ಪೂರ್ತಿ ಆಘಾತ ಮತ್ತು ಗೊಂದಲಕ್ಕೆ ಒಳಗಾಗಿದ್ದಾನೆ.
ಆ್ಯಂಟನಿಯ ಈ ಅರ್ಥಹೀನ ಪ್ರಸ್ತಾಪವನ್ನು ಅನೇಕರು ಟೀಕಿಸಿದ್ದಾರೆ. ಇವನ ಈ ಕಲ್ಪನೆಯೇ ಮಹಿಳೆಯರಿಗೆ ಅವಮಾನಕರ ಎಂದಿದ್ದಾರೆ. ಮಹಿಳೆಯರಿಗೆ ತಮ್ಮ ಮುಟ್ಟಿನ ದಿನಗಳನ್ನು ಬಹಿರಂಪಡಿಸಲು ಒತ್ತಾಯ ಮಾಡಬಾರದು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಆ್ಯಂಟನಿಗೆ ಗಂಭೀರವಾದ ಸಮಸ್ಯೆಗಳಿವೆ ಎಂದು ಕಿಡಿಕಾರಿದ್ದಾರೆ ಹಲವಾರು ಜನರು.
ಆ್ಯಂಟನಿ ಹೀಗೆ ಹೇಳಿಕೆ ನೀಡಿರುವುದು ಹೆಣ್ಣಿನ ವೈಯಕ್ತಿಕ ಮತ್ತು ಆತ್ಮಗೌರವನ್ನು ಕೆಣಕಿದಂತಾಗಿದೆ. ಕೆಲ ಮನೋವಿಕಾರಿಗಳು ಒಂದಿಲ್ಲಾ ಒಂದು ದಿನ ಹೀಗೆ ತಾವಾಗಿಯೇ ತಮ್ಮ ಮನಸ್ಥಿತಿಯನ್ನು ಪ್ರದರ್ಶಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಸೂಕ್ತ ನಿದರ್ಶನ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:36 pm, Mon, 22 August 22