Explainer: ತನ್ನ ಓದುಗರಿಂದ ದೇಣಿಗೆ ಕೇಳುವ ಅನಿವಾರ್ಯತೆ ವಿಕಿಪಿಡಿಯಗೆ ಯಾಕೆ ಸೃಷ್ಟಿಯಾಗಿದೆ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 11, 2022 | 8:00 AM

ವಿಕಿಮೀಡಿಯ ಫೌಂಡೇಶನ್‌ನ ವಕ್ತಾರರನ್ನು ಈ ಬಗ್ಗೆ ಕೇಳಿದಾಗ, ‘ಮಿಲಿಯನ್ ಗಟ್ಟಲೆ ಜನ ನಮ್ಮ ವೆಬ್‌ಸೈಟ್‌ ಮೇಲೆ ಅವಲಂಬಿತರಾಗಿದ್ದಾರೆ, ವಿಕಿಪಿಡಿಯನಲ್ಲಿ ನಾವು ಅದರ ಓದುಗರಿಗೆ ಸುಲಭವಾಗಿ ಎಟಕುವ, ನವೀಕೃತ ಮತ್ತು ಪ್ರಸ್ತುತವೆನಿಸುವ ಸಾಮಗ್ರಿ ಒದಗಿಸಲು ಬದ್ಧರಾಗಿದ್ದೇವೆ ಅದು ನಮ್ಮ ಕರ್ತವ್ಯವೂ ಆಗಿದೆ,’ ಎಂದು ಹೇಳಿದರು.

Explainer: ತನ್ನ ಓದುಗರಿಂದ ದೇಣಿಗೆ ಕೇಳುವ ಅನಿವಾರ್ಯತೆ ವಿಕಿಪಿಡಿಯಗೆ ಯಾಕೆ ಸೃಷ್ಟಿಯಾಗಿದೆ?
ವಿಕಿಪಿಡಿಯ ಎಂಬ್ಲೆಮ್
Follow us on

2001ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ವಿಕಿಪಿಡಿಯ (Wikipedia) ಇಂದು ವಿಶ್ವದ ಸೀಮಾತೀತ ಆನ್ಲೈನ್ ವೆಬ್ಸೈಟ್ ಆಗಿ ಬೆಳೆದು ಒಂದು ಸಾಂಸ್ಕೃತಿಕ ಹೆಗ್ಗರುತನ್ನು ಮೂಡಿಸಿದೆ. ವಿಶ್ವಾದಾದ್ಯಂತ ಕೋಟ್ಯಾಂತರ ಜನ ತಮ್ಮ ಯಾವುದೇ ಸಂದೇಹಕ್ಕೆ ಎಡತಾಕುವುದೇ ಈ ವಿಕಿಪಿಡಿಯ ವೆಬ್ ಸೈಟ್. ಪರಿಸ್ಥಿತಿ ಹೀಗಿರುವಾಗ ಈ ವರ್ಷದ ಆರಂಭದಲ್ಲಿ ಪ್ರತಿ ವಿಕಿಪೀಡಿಯಾ ಪುಟದ ಮೇಲ್ಭಾಗದಲ್ಲಿ ಎಚ್ಚರಿಕೆಯ ಕೆಂಪು ಮತ್ತು ಬಿಳಿ ಬ್ಯಾನರ್ (red and white banner) ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ – ಸೈಟ್ ಅನ್ನು ಮುಂದುವರಿಸಲು ಮತ್ತು ಚಾಲನೆಯಲ್ಲಿಡಲು ದೇಣಿಗೆಗಳನ್ನು ಕೇಳುವುದು- ಕಾಣಿಸಳಾರಂಭಿಸಿದ ಬಳಿಕ ಭಾರತದಲ್ಲಿನ ಅನೇಕ ಬಳಕೆದಾರರು ಗೊಂದಲಕ್ಕೊಳಗಾದರು.

ನಿಧಿಸಂಗ್ರಹಣೆಯ ಡ್ರೈವ್ (donation drive) ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಬಿಸಿಬಿಸಿ ಚರ್ಚೆಗಳನ್ನು ಹುಟ್ಟುಹಾಕಿತು. ಅವರಲ್ಲಿ ಕೆಲವರು ವಿಶ್ವದ ಅತ್ಯಂತ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಒಂದಾಗಿರುವ ವಿಕಿಪಿಡಿಯಗೆ ನಿಜವಾಗಿಯೂ ದೇಣಿಗೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಪ್ರತಿ ವಿಕಿ ಮೇಲ್ಭಾಗದಲ್ಲಿ ಮುದ್ರಣಗೊಂಡಿರುವ ಈ ಸಂದೇಶ ನಮಗೆ ಕಾಣಿಸುತ್ತದೆ. ‘ನಾವು ನಿಮ್ಮನ್ನು ವಿನಮ್ರತೆಯಿಂದ ಕೇಳುತ್ತಿದ್ದೇವೆ, ದಯವಿಟ್ಟು ಈ ಸಂದೇಶವನ್ನು ಕಡೆಗಾಣಿಸಬೇಡಿ. ನಮ್ಮ ಮೇರು ಬುದ್ಧಿವಂತ ಓದುಗರ ದೇಣಿಗೆ ಮೇಲೆಯೇ ನಾವು ಅವಲಂಬಿತರಾಗಿದ್ದೇನೆ. ಅದರೆ ಶೇಕಡ 2ಕ್ಕಿಂತ ಕಡಿಮೆ ಜನ ಚಂದಾ ನೀಡುತ್ತಿದ್ದಾರೆ. ನೀವು ನೀಡಬಹುದಾದ ರೂ.150 ಅಥವಾ ನಿಮಗೆ ಸರಿ ಅನಿಸಿದಷ್ಟು ದೇಣಿಗೆಯಾಗಿ ನೀಡಿದರೆ, ನಾವು ಚಿಗಿತುಕೊಳ್ಳಲು, ಬೆಳೆಯಲು ಸಾಧ್ಯವಾಗುತ್ತದೆ. ದನ್ಯವಾದಗಳು.’

ವಿಕಿಪಿಡಿಯ ಸಂಸ್ಥಾಪಕರು ಹೇಳುವ ಪ್ರಕಾರ ಎಲ್ಲರಿಗೂ ಉಚಿತವಾಗಿ ಜ್ಞಾನಾರ್ಜನೆ ಮಾಡಿಕೊಳ್ಳುವ ಅವಕಾಶ ಸಿಗಬೇಕೆನ್ನುವುದು ಅವರ ಉದ್ದೇಶವಾಗಿದೆ. ವೆಬ್ ಸೈಟ್ ದೇಣಿಗೆ ಕೋರಲು ಆರಂಭಿಸಿದ ನಂತರವೇ ಜನರಿಗೆ ಉಚಿತವಾಗಿ ಜ್ಞಾನ ಕೈಗೆಟುಕುವಂತೆ ಮಾಡುವುದು ಎಷ್ಟು ದುಬಾರಿಯಾದ ಕೆಲಸವಾಗಿದೆ ಅನ್ನೋದು ಮನವರಿಕೆಯಾಗಿದೆ.

‘ವಿಕಿಪೀಡಿಯವ ಇತರ ಉಚಿತ ಸೈಟ್‌ಗಳಿಗಿಂತ ಭಿನ್ನವಾಗಿದೆ, ಅದು ಜಾಹೀರಾತುಗಳನ್ನು ಮಾರಾಟ ಮಾಡುವ ಮೂಲಕ ತನ್ನ ಬದುಕುಳಿಯುವಿಕೆಯನ್ನು ಖಚಿತಪಡಿಸಿಕೊಳ್ಳಲು ತನ್ನ ವ್ಯವಹಾರದ ಮಾದರಿಯನ್ನು ಬದಲಾಯಿಸಬೇಕಾಗಿತ್ತು, ಅದರೆ ನಾವು ಹಾಗೆ ಮಾಡದೆ, ಇವತ್ತು ಇಂಟರ್ನೆಟ್‌ನಲ್ಲಿ ಉಳಿದಿರುವ ಕೆಲವು ಯಶಸ್ವಿ ಉಚಿತ ಜ್ಞಾನದ ಸೈಟ್‌ಗಳಲ್ಲಿ ವಿಕಿಪಿಡಿಯ ಕೂಡ ಒಂದಾಗಿದೆ. ಏಕೆಂದರೆ ಪ್ರಪಂಚದಾದ್ಯಂತದ ಇರುವ ಓದುಗರ ಮೇಲೆಯೇ ಇದರ ಆದಾಯದ ಮೂಲ ಅವಲಂಬಿತವಾಗಿದೆ,’ ಎಂದು ವಿಕಿಪೀಡಿಯದ ಮೂಲ ಸಂಸ್ಥೆಯಾದ ವಿಕಿಮೀಡಿಯಾ ಫೌಂಡೇಶನ್‌ನ ವಕ್ತಾರರೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಗೆ ತಿಳಿಸಿದ್ದಾರೆ.

ಸಿಮಿಲರ್ ವೆಬ್ ನೀಡಿರುವ ಮಾಹಿತಿ ಪ್ರಕಾರ, Wikipedia.org ಜುಲೈ 2020 ರಲ್ಲಿ 5.2 ಬಿಲಿಯನ್ ವಿಸಿಟ್ ಗಳನ್ನು ಹೊಂದಿದ್ದು ಇದು ವಿಶ್ವದ ಎಂಟು ಅತ್ಯಂತ ಜನಪ್ರಿಯ ಸೈಟ್ ಒಂದಾಗಿದೆ.

ಹಾಗಾದರೆ, ಈಗ್ಯಾಕೆ ವಿಕಿಪಿಡಿಯ ದೇಣಿಗೆಗಳನ್ನು ಕೇಳುತ್ತಿದೆ?

ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ, ವಿಕಿಮೀಡಿಯ ಫೌಂಡೇಶನ್‌ನ ಪಾವತಿ ಮತ್ತು ಆಪರೇಶನ್ಸ್ ನಿರ್ದೇಶಕ ಪ್ಯಾಟ್ ಪೆನಾ ಭಾರತದಲ್ಲಿ ಕೆಲದಿನಗಳಿಂದ ಪ್ರಾರಂಭಿಸಿದ ನಿಧಿಸಂಗ್ರಹ ಅಭಿಯಾನದ ಕುರಿತು ಕೆಲವು ಸ್ಪಷ್ಟೀಕರಣಗಳನ್ನು ನೀಡಿದರು.

‘ವಿಕಿಪೀಡಿಯದ ಜಾಗತಿಕ ಉಪಸ್ಥಿತಿಯನ್ನು ಬೆಂಬಲಿಸಲು ಓದುಗರ ದೇಣಿಗೆಗಳು ನಿರ್ಣಾಯಕವಾಗಿವೆ” ಎಂದು ಪೆನಾ ಬರೆದಿದ್ದಾರೆ. “ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಓದುಗರ ಅಗತ್ಯಗಳನ್ನು ಪೂರೈಸಲು, ನಾವು ವಿಶ್ವದ ಅತಿದೊಡ್ಡ ವಾಣಿಜ್ಯ ವೆಬ್‌ಸೈಟ್‌ಗಳಿಗೆ ಹೋಲಿಸಬಹುದಾದ ಅಂತರರಾಷ್ಟ್ರೀಯ ತಂತ್ರಜ್ಞಾನ ಮೂಲಸೌಕರ್ಯವನ್ನು ನಿರ್ವಹಿಸುತ್ತೇವೆ,’ ಎಂದು ಅವರು ಬರೆದಿದ್ದಾರೆ.

ಲಾಭರಹಿತ ವಿಕಿಮೀಡಿಯ ಫೌಂಡೇಶನ್‌ನಿಂದ ನಡೆಸಲ್ಪಡುತ್ತಿರುವ, ವಿಕಿಪೀಡಿಯವು ನಿರಂತರವಾಗಿ ಬೆಳೆಯುತ್ತಿರುವ ಮಾಹಿತಿಯ ಭಂಡಾರವನ್ನು ವಿಸ್ತರಿಸಲು ಮತ್ತು ಪ್ರಪಂಚದಾದ್ಯಂತ ಬಳಕೆದಾರರಿಗೆ ಅದು ಉಚಿತವಾಗಿ ಲಭ್ಯವಾಗುವಂತೆ ಮಾಡಲು ಸ್ವಯಂಸೇವಕ ಕೊಡುಗೆದಾರರು, ಸಂಪಾದಕರು ಮತ್ತು ಎಂಜಿನಿಯರ್‌ಗಳ ನೆರವನ್ನು ಬಳಸುತ್ತದೆ. ವಿಕಿಪೀಡಿಯವು ಯಾವುದೇ ಜಾಹೀರಾತುಗಳನ್ನು ಹೊಂದಿರುವುದಿಲ್ಲವಾದ್ದರಿಂದ, ಇದು ಪ್ರಪಂಚದಾದ್ಯಂತದ ಲಕ್ಷಾಂತರ ಓದುಗರು ನೀಡಿದ ದೇಣಿಗೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.

ವೆಬ್‌ಸೈಟ್‌ನ ಒಟ್ಟು ಆದಾಯದ ಒಂದು ಚಿಕ್ಕ ಪ್ರಮಾಣವನ್ನು ವಿಕಿಪೀಡಿಯಾದ ಬ್ರ್ಯಾಂಡಿಂಗ್‌ನೊಂದಿಗೆ ಕೆತ್ತಲಾದ ಟೀ-ಶರ್ಟ್‌ಗಳು, ಪೆನ್ಸಿಲ್‌, ನೋಟ್‌ಬುಕ್ ಮತ್ತು ಪಿನ್‌ಗಳ ಮಾರಾಟದಿಂದ ಜನರೇಟ್ ಮಾಡಲಾಗುತ್ತದೆ.

ವೆಬ್‌ಸೈಟ್ ಹಲವಾರು ಕಾರ್ಪೊರೇಟ್ ಕೊಡುಗೈ ದಾನಿಗಳನ್ನು ಸಹ ಹೊಂದಿದೆ. ಗಮನಿಸಬೇಕಾದ ಸಂಗತಿಯೇನೆಂದರೆ, ಕಳೆದ ವರ್ಷ, ಇ-ಕಾಮರ್ಸ್ ದೈತ್ಯ ಅಮೆಜಾನ್, ವಿಕಿಮೀಡಿಯಾ ಫೌಂಡೇಶನ್‌ಗೆ ₹1 ಮಿಲಿಯನ್ ದೇಣಿಗೆ ನೀಡಿತು. “ಅಲೆಕ್ಸಾ ತಂಡವು ವಿಕಿಪೀಡಿಯ ಮತ್ತು ವಿಕಿಮೀಡಿಯ ಫೌಂಡೇಶನ್‌ನೊಂದಿಗೆ ಸಮಾನ ದೃಷ್ಟಿಕೋನವನ್ನು ಹೊಂದಿದೆ: ‘ಜ್ಞಾನವನ್ನು ಜಾಗತಿಕವಾಗಿ ಹಂಚಿಕೊಳ್ಳುವುದ ಸುಲಭವಾಗಿಸಲು’ ಎಂದು ಅಮೆಜಾನ್ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿತ್ತು.

‘ಈ ದೇಣಿಗೆಗಳ ಮೂಲಕ ಗಳಿಸುವ ಹಣದಿಂದ, ವಿಕಿಪೀಡಿಯ ತನ್ನ ಸರ್ವರ್‌ಗಳನ್ನು ಚಾಲನೆಯಲ್ಲಿಡಲು ಮತ್ತು ಸೈಟ್ ಅನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ಅದು ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ಲೋಡ್ ಆಗುವುದರ ಜೊತೆಗೆ ಬಳಕೆದಾರರ ಡಾಟಾ ರಕ್ಷಿಸುತ್ತದೆ. ಅದರ ಬೃಹತ್ ಬಳಕೆದಾರರ ನೆಲೆಯಿಂದ ಉದಾರ ದೇಣಿಗೆಗಳು ಸೈಟ್ ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ‘ನೀವು ಜಗತ್ತಿನಲ್ಲಿ ಎಲ್ಲೇ ಇದ್ದರೂ-ಡಯಲ್-ಅಪ್ ಮೋಡೆಮ್‌ನಿಂದ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ವರೆಗೆ ನಿಮ್ಮ ಆದ್ಯತೆಯ ಸಾಧನದಲ್ಲಿ ಮತ್ತು ಆದ್ಯತೆಯ ಭಾಷೆಯಲ್ಲಿ ವಿಕಿಪೀಡಿಯವನ್ನು ಪ್ರವೇಶಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಎಂಜಿನಿಯರಿಂಗ್ ಸಂಪನ್ಮೂಲಗಳನ್ನು ಅರ್ಪಿಸಲು ಈ ದೇಣಿಗೆಗಳು ನಮಗೆ ಅವಕಾಶ ಮಾಡಿಕೊಡುತ್ತವೆ,’ ಅಂತ ಪೆನಾ ಇತ್ತೀಚಿನ ಬ್ಲಾಗ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ವಿಕಿಪಿಡಿಯ ವೆಬ್ಸೈಟ್ ಸುಮಾರು 250 ಉದ್ಯೋಗಿಗಳು ಹಾಗೂ ಸುಮಾರು 2.5 ಲಕ್ಷ ವಲಂಟೀಯರ್ ಗಳಿಂದ ನಡೆಸಲ್ಪಡುತ್ತಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಸುಮಾರು 300 ಬಾಷೆಗಳ 500 ಮಿಲಿಯನ್ ಗಿಂತ ಹೆಚ್ಚು ಲೇಖನಗಳನ್ನು ವಿಕಿಪಿಡಿಯ ಸಂಗ್ರಹಿಸಿದೆ. ದೇಣಿಗೆಗಳಿಂದ ಸಂಗ್ರಹವಾಗುವ ಹಣ ಇಲ್ಲಿ ಕೆಲಸಮಾಡುವವರಿಗೆ ಸಂಬಳ ನೀಡಲು ವಿನಿಯೋಗಿಸಲಾಗುತ್ತದೆ ಮತ್ತು ವಲಂಟೀಯರ್ ಗಳು ನಮ್ಮ ವೆಬ್ ಸೈಟ್ ಗೆ ಉಚಿತವಾಗಿ ಸೇವೆ ಒದಗಿಸುತ್ತಾರೆ, ಎಂದು ವಕ್ತಾರರು ಹೇಳಿದ್ದಾರೆ

ವರ್ಷಗಳಲ್ಲಿ, ನಿಧಿಸಂಗ್ರಹಣೆ ಅಭಿಯಾನಗಳು ಮತ್ತು ಉದಾರವಾದ ಕಾರ್ಪೊರೇಟ್ ದತ್ತಿಗಳ ಮೂಲಕ, ವಿಕಿಪೀಡಿಯದ ಆಸ್ತಿಗಳು ಗಣನೀಯವಾಗಿ ಬೆಳೆದಿವೆ. ಇದು ಕೆಲವರ ಕಣ್ಣು ಕುಕ್ಕಿಸಿದೆ, ಅಷ್ಟೆಲ್ಲ ಇದ್ದರೂ ವಿಕಿಪಡಿಯ ದೇಣಿಗೆ ಕೇಳುವುದು ಯಾಕೆ ಅನ್ನುತ್ತಾರೆ.

ವಿಕಿಮೀಡಿಯ ಫೌಂಡೇಶನ್‌ನ ವಕ್ತಾರರನ್ನು ಈ ಬಗ್ಗೆ ಕೇಳಿದಾಗ, ‘ಮಿಲಿಯನ್ ಗಟ್ಟಲೆ ಜನ ನಮ್ಮ ವೆಬ್‌ಸೈಟ್‌ ಮೇಲೆ ಅವಲಂಬಿತರಾಗಿದ್ದಾರೆ, ವಿಕಿಪಿಡಿಯನಲ್ಲಿ ನಾವು ಅದರ ಓದುಗರಿಗೆ ಸುಲಭವಾಗಿ ಎಟಕುವ, ನವೀಕೃತ ಮತ್ತು ಪ್ರಸ್ತುತವೆನಿಸುವ ಸಾಮಗ್ರಿ ಒದಗಿಸಲು ಬದ್ಧರಾಗಿದ್ದೇವೆ ಅದು ನಮ್ಮ ಕರ್ತವ್ಯವೂ ಆಗಿದೆ,’ ಎಂದು ಹೇಳಿದರು.

ಪೆನಾ ಅವರ ಬ್ಲಾಗ್ ಒಂದು ಪೋಸ್ಟ್ ಪ್ರಕಾರ ಸುಮಾರು 75 ಕೋಟಿಗೂ ಹೆಚ್ಚು ಭಾರತೀಯರು ತಿಂಗಳೊಂದರಲ್ಲಿ ವಿಕಿಪಿಡಿಯ ವಿಸಿಟ್ ಮಾಡುತ್ತಾರೆ ಮತ್ತು ವಿಸಿಟ್ ಮಾಡುವ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಭಾರತ 5 ನೇ ಸ್ಥಾನದಲ್ಲಿದೆ. ಓದುಗರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಭಾರತದಲ್ಲಿ ಕೇವಲ ಈ ವರ್ಷ ದೇಣಿಗೆ ಅಭಿಯಾನ ಆರಂಭಿಸಿದ್ದು ಆಶ್ಚರ್ಯ ಹುಟ್ಟಿಸುತ್ತದೆ.

ನಾವು ಬೇರೆ ಪ್ರಾಂತ್ಯಗಳಲ್ಲಿ ಪ್ರಾರಂಭಿಸಿದ ಇತರ ಅಭಿಯಾನಗಳಂತೆ, ಇತರ ದೇಶಗಳ ಜನರಿಗೆ ಒದಗಿಸುತ್ತಿರುವ ಅಮೂಲ್ಯವಾದ ಅನುಭವವನ್ನು ಭಾರತೀಯ ಓದುಗರಿಗೂ ತಲುಪಿಸುತ್ತಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಇಚ್ಛಿಸುತ್ತೇವೆ,’ ಎಂದು ವಿಕಿಮೀಡಿಯಾ ಫೌಂಡೇಶನ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.

‘ಆ ಮಾನದಂಡವನ್ನು ಪೂರೈಸಲು, ದೇಣಿಗೆ ನೀಡಲು ಅನುಕೂಲಕರ ಮಾರ್ಗವನ್ನು ಒದಗಿಸಲು, ನಾವು ಭಾರತದಲ್ಲಿ ಹೊಸ ಪಾವತಿ ವಿಧಾನಗಳನ್ನು ಅಳವಡಿಸಬೇಕಾಗಿದೆ, ಅದು ಇಲ್ಲಿಯವರೆಗೆ ನಮ್ಮಲ್ಲಿ ಇರಲಿಲ್ಲ,’ ಎಂದು ಫೌಂಡೇಶನ ಹೇಳಿದೆ.

ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಪ್ರಪಂಚದಾದ್ಯಂತ ಲಕ್ಷಾಂತರ ಜನರ ಜೀವನ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಕಿಪೀಡಿಯ ಈ ವರ್ಷ ವಸಂತಕಾಲದಲ್ಲಿ ನಿಗದಿಪಡಿಸಿದ್ದ ನಿಧಿಸಂಗ್ರಹ ಅಭಿಯಾನವನ್ನು ವಿಳಂಬಗೊಳಿಸಲು ಒತ್ತಾಯಿಸಲಾಯಿತು. ಅಸಲು ಸಂಗುತಿಯೇನೆಂದರೆ ನಾವು ಈಗ ಸಾಂಕ್ರಾಮಿಕ ರೋಗದ ಮೊದಲ ಎಂಟನೇ ತಿಂಗಳಲ್ಲಿದ್ದೇವೆ, ಮತ್ತು ಅದು ನಾವೆಲ್ಲ ಯೋಚಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊವಿಡ್ ಸೃಷ್ಟಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲ ನಮ್ಮ ನಿಧಿಸಂಗ್ರಹ ಕಾರ್ಯಕ್ರಮವನ್ನು ಬಹಳ ಎಚ್ಚರಿಕೆಯಿಂದ ಜಾರಿಯಲ್ಲಿಡುವ ಅನಿವಾರ್ಯತೆ ಸೃಷ್ಟಿಯಾಗಿದೆ, ಎಂದು ವಕ್ತಾರರು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.