
Viral Video : ಕತ್ತರಿ, ಸಣ್ಣಕತ್ತಿ, ಬ್ಲೇಡ್ ಇವು ಕ್ಷೌರದ ಸಾಧನಗಳು ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದು. ಆದರೆ ತಾನು ಚೆಂದ ಕಾಣಬೇಕೆನ್ನುವ ಹುಚ್ಚಿನಲ್ಲಿ ಮನುಷ್ಯ ಹೊಸ ಹೊಸ ಪ್ರಯತ್ನಗಳಿಗೆ ಬೀಳುತ್ತಾನೆ. ಆದರೆ ಕೆಲವೊಮ್ಮೆ ಆ ಪ್ರಯತ್ನಗಳು ಕೈಕೊಟ್ಟಾಗ!? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಗುಜರಾತಿನ ವಲಸಾಡ್ ಜಿಲ್ಲೆಯ ವಾಪಿ ನಗರದ ಸಲೂನ್ ಒಂದರಲ್ಲಿ ನಡೆದ ಆತಂಕಕಾರೀ ಘಟನೆ ಇದು. ಕ್ಷೌರಿಕನು ಗ್ರಾಹಕರೊಬ್ಬರಿಗೆ ಫೈರ್ ಹೇರ್ ಕಟ್ ವಿನ್ಯಾಸವನ್ನು ಮಾಡಲು ಹೋದಾಗ ಈ ಅವಾಂತರ ಸಂಭವಿಸಿದೆ.
ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಕೇಶವಿನ್ಯಾಸಗಳಲ್ಲಿ ಫೈರ್ ಹೇರ್ ಕಟ್ ಕೂಡ ಒಂದು. ಸ್ಥಳೀಯ ಕ್ಷೌರಿಕ ಯುವಕನೊಬ್ಬನ ಮೇಲೆ ಈ ಪ್ರಯೋಗ ವೈಫಲ್ಯಗೊಂಡಾಗ ಈ ದುರ್ಘಟನೆ ನಡೆದಿದೆ. ಈ ವಿಡಿಯೋದಲ್ಲಿ ಯುವಕನ ತಲೆತುಂಬಾ ಎಂಥದೋ ರಾಸಾಯನಿಕ ಪುಡಿಯನ್ನು ಉದುರಿಸುತ್ತಾನೆ ಕ್ಷೌರಿಕ. ನಂತರ ಬೆಂಕಿಕಡ್ಡಿ ಗೀರುತ್ತಿದ್ದಂತೆ ಭಗ್ಗನೆ ಬೆಂಕಿ ಹೊತ್ತಿಕೊಂಡುಬಿಡುತ್ತದೆ. ನೋವಿನಿಂದ ನರಳುತ್ತ ಎದ್ದು ಓಡಾಡತೊಡಗುತ್ತಾನೆ ಯುವಕ.
ಐಎಎನ್ಎಸ್ ವರದಿಯ ಪ್ರಕಾರ, ಆರೀಫ್ ಎಂಬ ಯುವಕ ಬುಧವಾರದಂದು ಬಂಟಿ ಸಲೂನಿಗೆ ಹೋಗಿದ್ದ. ಅಲ್ಲಿದ್ದ ಕ್ಷೌರಿಕನಿಗೆ ಫೈರ್ ಹೇರ್ ಕಟ್ ಮಾಡು ಎಂದು ವಿನಂತಿಸಿಕೊಂಡ. ಆ ಪ್ರಕಾರ ಕ್ಷೌರಿಕನು ಸಿದ್ಧತೆ ಮಾಡಿಕೊಂಡು ಮುಂದುವರೆದ. ಇತ್ತ ತನ್ನ ಗೆಳೆಯನಿಗೆ ಕ್ಷೌರ ಮಾಡುವ ದೃಶ್ಯವನ್ನು ವಿಡಿಯೋ ಮಾಡು, ಅದನ್ನು ಇನ್ಸ್ಟಾಗ್ರಾಂಗೆ ಹಾಕಬೇಕು ಎಂದು ಆರೀಫ್ ಕೇಳಿಕೊಂಡ. ಸ್ನೇಹಿತ ವಿಡಿಯೋ ಮಾಡಲಾರಂಭಿಸಿದ. ಇತ್ತ ಆರೀಫ್ ಸೋಶಿಯಲ್ ಮೀಡಿಯಾದಲ್ಲಿ ಬೆರಳಾಡಿಸುತ್ತ ಮುಳುಗಿದ. ಅಷ್ಟರಲ್ಲಿ ಈ ಅಚಾತುರ್ಯ ಸಂಭವಿಸಿತು.
‘ಆರೀಫನ ತಲೆ, ಎದೆ, ಕುತ್ತಿಗೆಗೆ ತೀವ್ರವಾಗಿ ಸುಟ್ಟು, ಗಾಯಗಳಾಗಿವೆ. ಆಗ ಸ್ಥಳೀಯ ಆಸ್ಪತ್ರೆಗೆ ಈತನನ್ನು ಕರೆತಂದಿದ್ದಾರೆ. ನಂತರ ಈ ಘಟನೆಯ ಕುರಿತು ಆಸ್ಪತ್ರೆಯ ಸಿಬ್ಬಂದಿ ವಲಸಾಡ್ ಪೊಲೀಸ್ರಿಗೆ ಮಾಹಿತಿ ನೀಡಿದೆ.’ ಎಂದು ವಾಪಿ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಯೂರಿ ಬೆನ್ ಐಎಎನ್ಎಸ್ಗೆ ತಿಳಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಆರೀಫನನ್ನು ಸೂರತ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹೇರ್ ಕಟ್ ಪ್ರಯೋಗ ಮಾಡುತ್ತಿದ್ದಾಗ ಸಲೂನಿನಲ್ಲಿ ಯಾರೆಲ್ಲ ಇದ್ದರೋ ಅವರೆಲ್ಲರ ಹೇಳಿಕೆಯನ್ನು ದಾಖಲಿಸಿದ ನಂತರವೇ ತನಿಖೆ ನಡೆಸಲಾಗುವುದು ಎಂದು ಮಯೂರಿ ಬೆನ್ ತಿಳಿಸಿದ್ದಾರೆ.
ಸದ್ಯ ಭಾರತದಲ್ಲಿ ಟ್ರೆಂಡಿಂಗ್ ಆಗಿರುವ ಫೈರ್ ಹೇರ್ ಕಟ್ಗೆ ಉದ್ದ ಕೂದಲನ್ನು ಹೊಂದಿರುವ ಮಹಿಳೆಯರು, ಪುರುಷರಾದಿಯಾಗಿ ಮೊರೆ ಹೋಗುತ್ತಿದ್ದಾರೆ.
ಏನೆನ್ನಿಸುತ್ತಿದೆ ಇಂಥ ಹೊಸ ಪ್ರಯೋಗಗಳ ವಿಷಯವಾಗಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:54 pm, Thu, 27 October 22