ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಯೋಜನೆ. ಇವುಗಳು ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳು (Congress Guarantees). ಈ ಬಗ್ಗೆ ರಾಜಕೀಯವಾಗಿ ಪರ ವಿರೋಧ ಚರ್ಚೆಗಳ ಮಾತ್ರ ನಡೆದಿಲ್ಲ. ಸಾರ್ವಜನಿಕ ವಲಯದಲ್ಲೂ ಚರ್ಚೆ ಹುಟ್ಟುಹಾಕಿದ್ದವು. ಈ ನಡುವೆ ಒಂದಷ್ಟು ಟ್ರೋಲ್ಗಳು ಕೂಡ ಆಗಿವೆ.
ಮಹಿಳೆಯೊಬ್ಬರು ಬಸ್ ಹತ್ತುವ ಸಾಹಸದ ವಿಡಿಯೋ ಒಂದನ್ನು ಮುಂದಿಟ್ಟುಕೊಂಡು ಉಚಿತ ಬಸ್ ಪ್ರಯಾಣದ ಬಗ್ಗೆ ಟ್ರೋಲ್ ಮಾಡಲಾಗಿದೆ. ವಿಡಿಯೋ ನೋಡುವಾಗ ಸಖತ್ ಮನರಂಜನೆಯನ್ನೂ ನೀಡುತ್ತದೆ. ಟ್ರೋಲ್ ವಿಡಿಯೋದಲ್ಲಿ ಇರುವಂತೆ, ಮಹಿಳೆಯೊಬ್ಬರು ಬಸ್ನ ಕಿಟಕಿಯಿಂದ ಒಳಗೆ ಹೋಗುವುದನ್ನು ಕಾಣಬಹುದಾಗಿದೆ.
ಅದೇ ರೀತಿ, ಪತ್ನಿ ಜೊತೆ ಜಗಳವಾಡುವ ಮುನ್ನ ಉಚಿತ ಬಸ್ ಪ್ರಯಾಣದ ಬಗ್ಗೆ ಯೋಚಿಸುವಂತೆ ಪುರುಷರಿಗೆ ಸೂಚಿಸುವ ಟ್ರೋಲ್ ಕೂಡ ಮಾಡಲಾಗಿದೆ. ಹೆಂಡತಿ ಜೊತೆ ಜಗಳ ಮಾಡುವ ಮುನ್ನ ವಿಚಾರ ಮಾಡಿಕೊಳ್ಳಿ. ಯಾಕೆಂದರೆ ಬಸ್ ಟಿಕೆಟ್ ಫ್ರೀ ಇದೆ ಅಂತ ಟ್ರೋಲ್ ಮಾಡಲಾಗಿದೆ. ಅಂದರೆ, ಪತ್ನಿ ಜೊತೆ ಜಗಳವಾಡಿದರೆ ಆಕೆ ಬಸ್ ಪ್ರಯಾಣ ಫ್ರೀ ಅಂತ ತವರು ಮನೆ ಹೋಗಲು ಮುಂದಾಗಬಹುದು ಎಂಬುದಾಗಿದೆ.
ಇನ್ನು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕಿದ ನಂತರ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿತ್ತು. ಒಂದೆಡೆ ಕೈ ನಾಯಕರ ಕಿತ್ತಾಟ ಇನ್ನೊಂದೆಡೆ ಕಾಂಗ್ರೆಸ್ನ ಗ್ಯಾರಂಟಿಗಳಿಗೆ ಕಾಯುತ್ತಿರುವ ಜನ. ಇದನ್ನೇ ಮುಂದಿಟ್ಟುಕೊಂಡು ಟ್ರೋಲ್ ಕೂಡ ಮಾಡಲಾಗಿದೆ. ಬೇಗ ಸಿಎಂ ಆಗಿ, ನಮ್ಮ ಮಂದಿ (ಜನರು) ನೀವು (ಕಾಂಗ್ರೆಸ್) ಕೊಟ್ಟ ಪುಕ್ಸಟ್ಟೆ ಯಾವಾಗ ಕೊಡುತ್ತೀರಿ ಅಂತ ಕಾಯುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು.
ಇನ್ನೊಂದು ಟ್ರೋಲ್ ಪೇಜ್ ಸ್ವಲ್ಪ ಮುಂದಕ್ಕೆ ಹೋಗಿ ಉಚಿತ ಎಣ್ಣೆಗಾಗಿ ಬೇಡಿಕೆ ಇಟ್ಟಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಂತೆ ಪುರುಷರಿಗೆ ಉಚಿತ ಎಣ್ಣೆ (ಮದ್ಯ) ಕೊಟ್ಟುಬಿಡಿ ಅಂತ ಟ್ರೋಲ್ ಮಾಡಿ ಹಾಸ್ಯ ಮಾಡಲಾಗಿದೆ.
ಇದೆಲ್ಲದರ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ನೀಡಿದ್ದ ಐದ ಭರವಸೆಗಳನ್ನು ಜಾರಿ ಮಾಡುವುದಾಗಿ ಘೋಷಿಸಿ ಯೋಜನೆಗಳು ಜಾರಿಗೆ ಬರುವ ದಿನಾಂಕಗಳನ್ನು ತಿಳಿಸಿದ್ದಾರೆ. ಇದರ ಜೊತೆಗೆ ಕೆಲವೊಂದು ಷರತ್ತುಗಳನ್ನು ಕೂಡ ವಿಧಿಸಿದೆ. ಈ ಬಗ್ಗೆಯೂ ಟ್ರೋಲ್ ಮಾಡಿ ಬಿಜೆಪಿಯ ಕಾಲೆಳೆಯಲಾಗಿದೆ.
ಕಾಂಗ್ರೆಸ್ ಪಕ್ಷ ಕೊಟ್ಟ ಎಲ್ಲ 5 ಗ್ಯಾರಂಟಿಗಳನ್ನು ಈಗ ಜಾರಿಗೆ ತಂದಿದೆ. ಸಿದ್ದರಾಮಯ್ಯ ಅವರನ್ನು ಟೀಕಿಸಲು ಬಿಜೆಪಿಗಿದ್ದ ಕೊನೆಯ ಅಸ್ತ್ರವೂ ಈಗ ಮಣ್ಣು ಪಾಲಾಗಿ ಹೋಯ್ತು ಅಂತ ಟ್ರೋಲ್ ಪೇಜ್ವೊಂದು ಟ್ರೋಲ್ ಮಾಡಿದೆ. ಹೀಗೆ ಅನೇಕ ರೀತಿಯಲ್ಲಿ ಟ್ರೋಲ್ ಪೇಜ್ಗಳು ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟ್ರೋಲ್ ಮಾಡಿವೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 pm, Fri, 2 June 23