ಕಾಫಿ ಪ್ರಿಯರು ಮೆಚ್ಚುಗೆಯಿಂದ ಆರಾಧಿಸುವ ಎಸ್ಪ್ರೆಸೊ ಯಂತ್ರಗಳನ್ನು (Espresso Machines) ಆವಿಷ್ಕರಿಸಿದ ಏಂಜೆಲೊ ಮೊರಿಯೊಂಡೊ (Angelo Moriondo) ಅವರ 171ನೇ ಜನ್ಮದಿನ ಇಂದು. ಕಲಾತ್ಮಕ ಡೂಡಲ್ ಮೂಲಕ ಗೂಗಲ್ ಮೊರಿಯೊಂಡೊಗೆ ಗೌರವ ಸಲ್ಲಿಸಿದೆ. 1884ರಲ್ಲಿ ಎಸ್ಪ್ರೆಸೊ ಮಷೀನ್ ಅನ್ನು ಇವರು ಪರಿಚಯಿಸಿದದರು. ಇಂದು ಪ್ರಕಟವಾಗಿರುವ ಕಾಫಿ ಬಣ್ಣದ ಗೂಗಲ್ ಡೂಡಲ್ಗಾಗಿ ಕಲಾವಿದ ಒಲಿವಿಯಾ (Olivia) ಚಿತ್ರ ಬಿಡಿಸಿದ್ದಾರೆ.
ಜೂನ್ 6, 1851ರಲ್ಲಿ ಇಟಲಿಯ ಟುರಿನ್ನಲ್ಲಿ ಏಂಜೆಲೊ ಮೊರಿಯೊಂಡೊ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದರು. ಹೊಸ ವ್ಯಾಪಾರಿ ಯೋಜನೆಗಳ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದರು. ಮೊರಿಯೊಂಡೊ ಅವರ ತಾತ ಮದ್ಯ ಉತ್ಪಾದನೆ ಕಂಪನಿ ಆರಂಭಿಸಿದ್ದರು. ಮೊರಿಯೊಂಡೊ ಅವರ ತಂದೆ ಅದನ್ನು ನಂತರದ ದಿನಗಳಲ್ಲಿ ನಿರ್ವಹಿಸುತ್ತಿದ್ದರು. ತಮ್ಮ ಸೋದರ ಮತ್ತು ಸಂಬಂಧಿಯೊಬ್ಬರ ನೆರವಿನಿಂದ ಮೊರಿಯೊಂಡೊ ಜನಪ್ರಿಯ ಚಾಕೊಲೇಟ್ ಕಂಪನಿಯೊಂದನ್ನು ಆರಂಭಿಸಿದರು. ‘ಮೊರಿಯೊಂಡೊ ಅಂಡ್ ಗರಿಗ್ಲಿಯೊ’ ಹೆಸರಿನ ಚಾಕೊಲೇಟ್ ಕಂಪನಿಯು ಶೀಘ್ರದಲ್ಲಿಯೇ ವ್ಯಾಪಾರ ವಿಸ್ತರಿಸಿತ್ತು.
ಇಟಲಿಯಲ್ಲಿ ಕಾಫಿ ಅತ್ಯಂತ ಜನಪ್ರಿಯ ಪಾನೀಯವಾಗಿದ್ದನ್ನು ಗಮನಿಸಿದ್ದ ಮೊರಿಯೊಂಡೊ ಅದಕ್ಕೆ ಸಂಬಂಧಿಸಿದಂತೆ ಸಂಶೋಧನೆಗಳನ್ನು ಆರಂಭಿಸಿದರು. ಕಾಫಿ ಬೀಜ ಹುರಿಯುವುದು, ಡಿಕಾಕ್ಷನ್ ತಯಾರಿಕೆಗೆ ಸಾಕಷ್ಟು ಸಮಯ ವ್ಯಯಿಸಬೇಕಾಗಿದ್ದ ಕಾರಣ ಕಾಫಿ ಪ್ರಿಯರಿಗೆ ತೊಂದರೆಯಾಗುತ್ತಿದೆ. ಇದನ್ನೆ ಗಮನಿಸಿದ ಮೊರಿಯೊಂಡೊಗೆ ಅಲ್ಲೊಂದು ಮಹತ್ವದ ವ್ಯಾಪಾರಿ ಸಾಧ್ಯತೆ ಮನಸ್ಸಿಗೆ ಬಂತು.
‘ಒಂದಾನೊಂದು ಕಾಲದಲ್ಲಿ, 19ನೇ ಶತಮಾನದಲ್ಲಿ ಕಾಫಿ ಇಟಲಿಯಲ್ಲಿ ಅತ್ಯಂತ ಜನಪ್ರಿಯ ಪಾನೀಯವಾಗಿತ್ತು. ಆದರೆ ಆಗ ಪ್ರಚಲಿತದಲ್ಲಿದ್ದ ಕಾಫಿ ಸಿದ್ಧಪಡಿಸುವ ತಂತ್ರಗಳಿಂದಾಗಿ ಕಾಫಿಗಾಗಿ ಗ್ರಾಹಕರು ಕನಿಷ್ಠ 5 ನಿಮಿಷ ಕಾಯಬೇಕಾಗುತ್ತಿತ್ತು. ಈ ಹಂತದಲ್ಲಿ ಮೊದಲ ಎಸ್ಪ್ರೆಸೊ ಮಷೀನ್ ರೂಪಿಸಿದ ಏಂಜೆಲೊ ಮೊರಿಯೊಂಡೊ ಪ್ರವೇಶವಾಯಿತು’ ಎಂದು ಗೂಗಲ್ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ.
ಟ್ಯುರಿನ್ನಲ್ಲಿ 1884ರಲ್ಲಿ ಮೊದಲ ಬಾರಿಗೆ ಮೊರಿಯೊಂಡೊ ಎಸ್ಪ್ರೆಸೊ ಮಷೀನ್ಗಳನ್ನು ಪ್ರದರ್ಶಿಸಲಾಯಿತು. ಮೊರಿಯೊಂಡೊ ರೂಪಿಸಿದ್ದ ಯಂತ್ರದಲ್ಲಿ ಒಂದು ದೊಡ್ಡ ಬಾಯಲರ್ ಇತ್ತು. ಇದು ಬಿಸಿನೀರನ್ನು ಕಾಫಿಯ ಮೇಲೆ ಹಾಯಿಸುತ್ತಿತ್ತು. ಎರಡನೇ ಬಾಯ್ಲರ್ ಆವಿಯನ್ನು (Steam) ಕಾಫಿಯ ಮೇಲೆ ಬಿಡುತ್ತಿತ್ತು. ಹೀಗಾಗಿ ಕಾಫಿಪ್ರಿಯರಿಗೆ ತಮ್ಮಿಷ್ಟದ ಕಾಫಿಯನ್ನು ತಕ್ಷಣ ಪಡೆಯಲು ಸಾಧ್ಯವಾಗುತ್ತಿತ್ತು. ಈ ಯಂತ್ರಕ್ಕೆ ಅಕ್ಟೋಬರ್ 23, 1885ರಂದು ಅಂತರರಾಷ್ಟ್ರೀಯ ಪೇಟೆಂಟ್ ಸಿಕ್ಕಿತು.
‘ಇಂದಿನ ಕಾಫಿ ಪ್ರಿಯರು ಎಸ್ಪ್ರೆಸೊ ಮಷೀನ್ಗಳ ಗಾಡ್ಫಾದರ್ ಮೊರಿಯೊಂಡೊಗೆ ಕೃತಜ್ಞರಾಗಿರುತ್ತಾರೆ’ ಎಂದು ಗೂಗಲ್ನ ಟಿಪ್ಪಣಿ ತಿಳಿಸಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:54 am, Mon, 6 June 22