Viral: ರಾಜ ಗಾಂಭೀರ್ಯದಿಂದ ಹೆದ್ದಾರಿ ದಾಟಿದ ಕಾಡಿನ ರಾಜ; ವಿಡಿಯೋ ವೈರಲ್

ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಕಾಡಿನ ರಾಜ ಸಿಂಹ ಕಾಡನ್ನು ಬಿಟ್ಟು ನಾಡಿನಲ್ಲಿ ರಾಜಾರೋಷವಾಗಿ ಅಡ್ಡಾಡಿದೆ. ಒಂಟಿ ಸಿಂಹ ರಾಜ ಗಾಂಭೀರ್ಯದಿಂದ ಹೆದ್ದಾರಿ ದಾಟುತ್ತಾ ಹೋಗಿದ್ದು, ರಸ್ತೆ ಮಧ್ಯೆ ಸಿಂಹವನ್ನು ಕಂಡು ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಅರಣ್ಯ ನಾಶದಿಂದಾಗಿ ಕಾಡು ಪ್ರಾಣಿಗಳು ಆಹಾರವನ್ನರಸುತ್ತಾ ಕಾಡಿನಿಂದ ನಾಡಿನೆಡೆಗೆ ಬರುವುದು ಹೆಚ್ಚಾಗಿದೆ. ಹೀಗೆ ಹುಲಿ, ಚಿರತೆ, ಆನೆ ಇತ್ಯಾದಿ ಕಾಡು ಪ್ರಾಣಿಗಳು ಜನನಿಬಿಡ ಪ್ರದೇಶಗಳಿಗೆ ಬರುವಂತಹ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕಾಡಿನ ರಾಜ ಸಿಂಹ ಕಾಡನ್ನು ಬಿಟ್ಟು ನಾಡಿನಲ್ಲಿ ರಾಜಾರೋಷವಾಗಿ ಅಡ್ಡಾಡಿದೆ. ಹೌದು ಒಂಟಿ ಸಿಂಹವೊಂದು ಗುಜರಾತ್‌ನಲ್ಲಿ ರಾಜ ಗಾಂಭೀರ್ಯದಿಂದ ಹೆದ್ದಾರಿ ದಾಟುತ್ತಾ ಹೋಗಿದ್ದು, ರಸ್ತೆ ಮಧ್ಯೆ ಏಷ್ಯಾಟಿಕ್ ಸಿಂಹವನ್ನು ಕಂಡು ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ. ‌

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಭಾವನಗರ ಸೋಮನಾಥ ರಾಷ್ಟ್ರೀಯ ಹೆದ್ದಾರಿಯ ಬಳಿ ಏಷ್ಯಾಟಿಕ್‌ ಸಿಂಹವೊಂದು ರಾಜಾರೋಷವಾಗಿ ಅಡ್ಡಾಡಿದ್ದು, ಸಿಂಹ ರಸ್ತೆ ದಾಟುವವರೆಗೆ ವಾಹನ ಸವಾರರು ವಾಹನ ಚಲಾಯಿಸದೆ ತಾಳ್ಮೆಯಿಂದ ವರ್ತಿಸಿದ್ದಾರೆ.

ವಿಶೇಷವಾಗಿ ಗುಜರಾತ್‌ನಲ್ಲಿ ಏಷ್ಯಾಟಿಕ್ ಸಿಂಹಗಳು ಹೆಚ್ಚಾಗಿ ಕಂಡುಬರುತ್ತವೆ. ಸಿಂಹಗಳನ್ನು ಸಂರಕ್ಷಿಸಲು ರಚಿಸಲಾದ ಗಿರ್ ಅರಣ್ಯದಿಂದ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಈ ಸಿಂಹಗಳು ಅಲೆದಾಡುವುದು ಸಾಮಾನ್ಯವಾಗಿಬಿಟ್ಟಿದೆ. ವರದಿಗಳ ಪ್ರಕಾರ, ಕಾಡಿನಲ್ಲಿ ಬೇಟೆಯ ಕೊರತೆಯಿಂದಾಗಿ, ಈ ಸಿಂಹಗಳು ಹಸುಗಳು ಮತ್ತು ಬೀದಿ ನಾಯಿಗಳನ್ನು ಬೇಟೆಯಾಡಲು ಹತ್ತಿರದ ಹಳ್ಳಿಗಳಿಗೆ ಬರುತ್ತಿರುತ್ತವೆ.

timesofindia ಅಧೀಕೃತ ಎಕ್ಸ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಒಂಟಿ ಸಿಂಹವೊಂದು ಘರ್ಜಿಸುತ್ತಾ ರಾಜಾರೋಷವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಅಡ್ಡಾಡುತ್ತಾ ಬಂದ ಸಿಂಹ ನಂತರ ನಿಧಾನಕ್ಕೆ ರಸ್ತೆ ದಾಡಿ, ಹತ್ತಿರದ ದೇವಾಲಯದ ಕಡೆಗೆ ಹೋಗಿದೆ. ರಸ್ತೆಯಲ್ಲಿ ಸಿಂಹ ಓಡಾಟದ ಕಾರಣ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸಿಂಹ ರಸ್ತೆ ದಾಟಿ ಹೋಗುವವವರೆಗೂ ವಾಹನ ಚಲಾಯಿಸದೆ ವಾಹನ ಸವಾರರು ತಾಳ್ಮೆಯಿಂದ ವರ್ತಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿ ಈ 2 ರೂಪಾಯಿ ಹಳೆಯ ನೋಟು ಇದ್ರೆ ನೀವು ಗಳಿಸಬಹುದು ಬರೋಬ್ಬರಿ 5 ಲಕ್ಷ ರೂ.; ಹೇಗೆ ಇಲ್ಲಿದೆ ಮಾಹಿತಿ

ಫೆಬ್ರವರಿ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಪ್ರಾಣಿಗಳು ಓಡಾಡುವ ಸ್ಥಳಗಳಲ್ಲಿ ಏಕೆ ರಸ್ತೆ ನಿರ್ಮಿಸಬೇಕಿತ್ತುʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಿಂಹ ರಸ್ತೆ ದಾಟುತ್ತಿಲ್ಲ, ಸಿಂಹದ ಕಾಡನ್ನು ರಸ್ತೆ ಆವರಿಸಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ