Viral Video: ಸಾಯೋವರೆಗೆ ನಿಮ್ಮ ಗುಲಾಮರಾಗಿರುತ್ತೇವೆ; 17 ಗಂಟೆಗಳ ಕಾಲ ಅವಶೇಷಗಳಡಿ ತಮ್ಮನಿಗೆ ಕಾವಲಾಗಿದ್ದಳು ಸಿರಿಯಾದ 7 ವರ್ಷದ ಬಾಲಕಿ

|

Updated on: Feb 08, 2023 | 1:23 PM

ಸಿರಿಯಾದ 7 ವರ್ಷದ ಬಾಲಕಿ ತನ್ನ ತಮ್ಮನನ್ನು ಕಾಪಾಡಲು 17 ಗಂಟೆಗಳ ಕಾಲ ತನ್ನ ಜೀವವನ್ನೂ ಒತ್ತೆಯಾಗಿಟ್ಟು ಅವಶೇಷಗಳಡಿ ಅಲುಗಾಡದೆ ಮಲಗಿದ್ದ ವಿಡಿಯೋ ಭಾರೀ ವೈರಲ್ ಆಗಿದೆ.

Viral Video: ಸಾಯೋವರೆಗೆ ನಿಮ್ಮ ಗುಲಾಮರಾಗಿರುತ್ತೇವೆ; 17 ಗಂಟೆಗಳ ಕಾಲ ಅವಶೇಷಗಳಡಿ ತಮ್ಮನಿಗೆ ಕಾವಲಾಗಿದ್ದಳು ಸಿರಿಯಾದ 7 ವರ್ಷದ ಬಾಲಕಿ
ಸಿರಿಯಾದಲ್ಲಿ ಭೂಕಂಪದಲ್ಲಿ ಸಿಲುಕಿದ 7 ವರ್ಷದ ಬಾಲಕಿ- ಆಕೆಯ ತಮ್ಮ
Follow us on

ಡಮಾಸ್ಕಸ್: ಟರ್ಕಿ (Turkey Earthquake) ಮತ್ತು ಸಿರಿಯಾದಲ್ಲಿ (Syria Earthquake) 7.8 ತೀವ್ರತೆಯ ಭೂಕಂಪ ಸಂಭವಿಸಿ, 7,800ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಭೀಕರ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿರುವ ಲಕ್ಷಾಂತರ ಜನರ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಭೂಕಂಪ ಸಂಭವಿಸಿ ಒಂದೂವರೆ ದಿನವಾದರೂ ಕೆಲವರು ಅಚ್ಚರಿಯ ರೀತಿಯಲ್ಲಿ ಬದುಕಿ ಬಂದಿರುವ ಘಟನೆಗಳು, ಅದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಿರಿಯಾದಲ್ಲಿ ಉಂಟಾದ ಭೂಕಂಪದ ಸಂದರ್ಭದಲ್ಲಿ ಮಾನವೀಯ ಮುಖವನ್ನು ಪರಿಚಯಿಸುವ ಅನೇಕ ಘಟನೆಗಳು ಕೂಡ ನಡೆದಿವೆ. ಸಿರಿಯಾದಲ್ಲಿ ಅಪ್ಪನೊಬ್ಬ ತಾನು ಸಾಯುವ ಕೊನೆ ಕ್ಷಣದಲ್ಲೂ ಮಗನನ್ನು ತಬ್ಬಿ ಹಿಡಿದು, ಆತನನ್ನು ಕಾಪಾಡಲು ಹೆಣಗಾಡಿದ್ದ. ಆದರೆ, ಮಗನನ್ನು ತಬ್ಬಿಕೊಂಡ ರೀತಿಯಲ್ಲೇ ಆ ತಂದೆ-ಮಗು ಇಬ್ಬರೂ ಹೆಣ ಪತ್ತೆಯಾಗಿದ್ದಾರೆ. ಇದರ ನಡುವೆ, ಅವಶೇಷಗಳಡಿ ಸಿಲುಕಿದ್ದ 7 ವರ್ಷದ ಬಾಲಕಿಯೊಬ್ಬಳು ತನ್ನ ತಮ್ಮನನ್ನು ರಕ್ಷಿಸಲು ಆತನ ತಲೆ ಮೇಲೆ ಕೈಯನ್ನು ಇಟ್ಟುಕೊಂಡು, 17 ಗಂಟೆಗಳ ಕಾಲ ತಮ್ಮಿಬ್ಬರನ್ನೂ ಕಾಪಾಡುವ ಕೈಗಳಿಗಾಗಿ ಕಾಯುತ್ತಿದ್ದಳು. ಕೊನೆಗೂ ಆಕೆಯ ಪ್ರಾರ್ಥನೆ ನೆರವೇರಿದ್ದು, ರಕ್ಷಣಾ ಸಿಬ್ಬಂದಿ ಆಕೆ ಹಾಗೂ ಆಕೆಯ ಪುಟ್ಟ ತಮ್ಮನನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿನ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಹೆಲ್ಪಲೈನ್​​ ಆರಂಭ

7 ವರ್ಷದ ಬಾಲಕಿ ತನ್ನ ತಮ್ಮನನ್ನು ಕಾಪಾಡಲು 17 ಗಂಟೆಗಳ ಕಾಲ ತನ್ನ ಜೀವವನ್ನೂ ಒತ್ತೆಯಾಗಿಟ್ಟು ಅವಶೇಷಗಳಡಿ ಅಲುಗಾಡದೆ ಮಲಗಿದ್ದ ವಿಡಿಯೋ ಭಾರೀ ವೈರಲ್ ಆಗಿದೆ. ಈ ವೇಳೆ ರಕ್ಷಣಾ ಸಿಬ್ಬಂದಿ ಆಕೆಯ ಬಳಿ ಹೋದಾಗ ಆಕೆ ನಮ್ಮಿಬ್ಬರನ್ನೂ ಹೇಗಾದರೂ ಇಲ್ಲಿಂದ ಕಾಪಾಡಿ. ನಾವು ಜೀವನಪೂರ್ತಿ ನಿಮಗೆ ಗುಲಾಮರಾಗಿರುತ್ತೇವೆ ಎಂದು ಹೇಳಿರುವ ವಿಡಿಯೋ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಖಚಿತ.

ಈ ಫೋಟೋ ಮತ್ತು ವಿಡಿಯೋವನ್ನು ವಿಶ್ವಸಂಸ್ಥೆಯ ಪ್ರತಿನಿಧಿ ಮೊಹಮದ್ ಸಫಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದಾಗ ತಮ್ಮನನ್ನು ರಕ್ಷಿಸಲು ತನ್ನ ಕೈಗಳನ್ನು ಆತನ ತಲೆಯ ಮೇಲೆ ಇಟ್ಟುಕೊಂಡ 7 ವರ್ಷದ ಬಾಲಕಿ ಕೊನೆಗೂ ಅಪಾಯದಿಂದ ಪಾರಾಗಿದ್ದಾಳೆ. ಒಂದುವೇಳೆ ತಮ್ಮನನ್ನು ಕಾಪಾಡಲು ಹೋಗಿ ಆಕೆ ಮೃತಪಟ್ಟಿದ್ದರೆ ಎಲ್ಲರೂ ಆಕೆಯನ್ನು ಹೀರೋ ರೀತಿ ನೋಡುತ್ತಿದ್ದರು, ಆ ವಿಡಿಯೋವನ್ನು ಹಂಚಿಕೊಂಡು ಸಂತಾಪ ತೋರಿಸುತ್ತಿದ್ದರು. ಇಂತಹ ಪಾಸಿಟಿವ್ ವಿಡಿಯೋಗಳನ್ನೂ ಹಂಚಿಕೊಳ್ಳಿ. ಆ ಬಾಲಕಿಯ ಜೀವನಪ್ರೀತಿಯನ್ನು ಮೆಚ್ಚಿ ಈ ವಿಡಿಯೋ ಶೇರ್ ಮಾಡಿ ಎಂದು ಸಫಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Syria Earthquake: ಹುಟ್ಟು ಸಾವು ಎಲ್ಲವೂ ದೈವಿಚ್ಛೆ: ಅವಶೇಷಗಳಡಿ ಹುಟ್ಟಿ, ತಾಯಿ ಮೃತಪಟ್ಟರೂ ಹೊಕ್ಕುಳ ಬಳ್ಳಿ ಸಮೇತ ಬದುಕಿ ಬಂದ ಕೂಸು

ಸಿರಿಯಾ ಮತ್ತು ಟರ್ಕಿಯಲ್ಲಿ ಭಾನುವಾರ ಸಂಭವಿಸಿದ ಭೂಕಂಪದ ನಂತರ ಉಭಯ ದೇಶಗಳಲ್ಲಿ ಅನೇಕ ಕಟ್ಟಡಗಳು ನೆಲಸಮಗೊಂಡ ನಂತರ ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಸಿರಿಯಾದ ಅಲೆಪ್ಪೊ ಮತ್ತು ಹಮಾ ನಗರಗಳಿಂದ ಈಶಾನ್ಯಕ್ಕೆ 330 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಟರ್ಕಿಯ ದಿಯಾರ್‌ಬಕಿರ್‌ವರೆಗೆ ವಿಸ್ತಾರವಾದ ಪ್ರದೇಶದಲ್ಲಿ ಸಾವಿರಾರು ಕಟ್ಟಡಗಳು ಕುಸಿದಿವೆ ಎಂದು ವರದಿಯಾಗಿದೆ.

ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದಾಗಿ ಸಾವಿನ ಸಂಖ್ಯೆ 7,800 ದಾಟಿದೆ. ಟರ್ಕಿಯಲ್ಲಿ 5,894 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ಸಿರಿಯಾದಲ್ಲಿ 1,932 ಜನರು ಮೃತಪಟ್ಟ ವರದಿಯಾಗಿದ್ದು, ಈ ಭೂಕಂಪದಲ್ಲಿ ಒಟ್ಟು 7,826 ಜನರು ಬಲಿಯಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಮೃತಪಟ್ಟವರ ಸಂಖ್ಯೆ 20,000 ಇರಬಹುದು ಎಂದು ಅಂದಾಜಿಸಿದ್ದಾರೆ. ಮೃತಪಟ್ಟವರ ಶವಗಳನ್ನು ಹೊರತೆಗೆಯುವ ಕೆಲಸ ಇನ್ನೂ ನಡೆಯುತ್ತಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Wed, 8 February 23