
Viral Video : ಕೊವಿಡ್ ಎರಗುತ್ತಿದ್ದಂತೆ ತಂತ್ರಜ್ಞಾನ ಕ್ಷೇತ್ರದ ಮೇಲೆ ಅತಿವೇಗದಲ್ಲಿ ನಾವು ಅವಲಂಬಿತರಾದೆವು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಡಿಜಿಟಲ್ ಜಗತ್ತಿನ ಮೂಲಕ ಬದುಕುವುದನ್ನು ಕಲಿತುಬಿಟ್ಟೆವು. ಎಲ್ಲಕ್ಕಿಂತ ಮುಖ್ಯವಾಗಿ ತಂತ್ರಜ್ಞಾನದ ಮೂಲಕ ನಮ್ಮನ್ನು ತನ್ನೆಡೆ ಸೆಳೆದುಕೊಂಡಿದ್ದು ಹೋಟೆಲ್ ಉದ್ಯಮ. ಅದಕ್ಕೆ ಪೂರಕವಾಗಿ ಆನ್ಲೈನ್ ಡೆಲಿವರಿ ವ್ಯವಸ್ಥೆ ಕ್ಷಿಪ್ರಗತಿಯಲ್ಲಿ ವ್ಯಾಪಿಸಿಕೊಂಡಿತು. ಇನ್ನು ದೊಡ್ಡ ದೊಡ್ಡ ರೆಸ್ಟೋರೆಂಟ್ಗಳಲ್ಲಿ ಸರ್ವರ್ ಮತ್ತು ಅಡುಗೆಭಟ್ಟರ ಬದಲಾಗಿ ರೋಬೋಟ್ಗಳು ಕಾಣಿಸಿಕೊಂಡವು. ಕ್ರಮೇಣ ಹೋಟೆಲ್ಗಳಲ್ಲಿಯೂ ರೋಬೋಟ್ಗಳು ಕಾಲಿಟ್ಟರೆ ಅಚ್ಚರಿ ಪಡಬೇಕಿಲ್ಲ. ಅಷ್ಟೇ ಏಕೆ ಎಟಿಎಂ ಮಶೀನ್ಗಳಂತೆ ತಿಂಡಿ ಮಶೀನ್ಗಳು ಅಲ್ಲಲ್ಲಿ ಸ್ಥಾಪಿಸಲ್ಪಡುವ ದಿನಗಳು ದೂರವೇನಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಅದಿತಿ ಅಹುಜಾ ಕಂಪೆನಿಯು ಆವಿಷ್ಕರಿಸಿದ ಇಡ್ಲಿ ವೆಂಡಿಂಗ್ ಮಶೀನಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ FreshHot ಹೊಸ ಮಾದರಿಯ ಈ ಇಡ್ಲಿ ವೆಂಡಿಂಗ್ ಮಶೀನ್ ಅನ್ನು ಸ್ಥಾಪಿಸಿದೆ. ಮೊಬೈಲ್ನಲ್ಲಿ ಮೆನು ಸೆಲೆಕ್ಟ್ ಮಾಡಿಕೊಂಡು ಮಶೀನಿಗೆ ಸ್ವೈಪ್ ಮಾಡಿದರೆ ಕೆಲ ನಿಮಿಷಗಳಲ್ಲಿಯೇ ಈ ಮಶೀನ್ನಿಂದ ಬಿಸಿಬಿಸಿ ಇಡ್ಲಿ ಮತ್ತು ಚಟ್ನಿಯ ಪೊಟ್ಟಣ ಕೈಗೆ ಬರುತ್ತದೆ. ಹೋಟೆಲ್ ಮುಚ್ಚಿತು ಎಂದೋ, ಆನ್ಲೈನ್ ಸರ್ವೀಸ್ ಇಲ್ಲವೆಂದೋ ಬೇಸರಿಸಬೇಕಿಲ್ಲ. 24 ಗಂಟೆಗಳ ಕಾಲವೂ ಇಲ್ಲಿ ಇಡ್ಲಿ ಚಟ್ನಿ ಲಭ್ಯ. ಇಡ್ಲಿ ಅಷ್ಟೇ ಅಲ್ಲ ವಡಾ, ಉಪ್ಪಿಟ್ಟು ಮುಂತಾದ ಖಾದ್ಯಗಳೂ ಲಭ್ಯ. ಬೆಂಗಳೂರು ಮೂಲದ ಫುಡ್ ಬ್ಲಾಗರ್ ಒಬ್ಬರು ಇದನ್ನು ವಿಡಿಯೋ ಮಾಡಿದ್ದಾರೆ. ಪಿ. ಪದ್ಮನಾಭನ್ ಎನ್ನುವವರು ಟ್ವಿಟರ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋ 2 ಮಿಲಿಯನ್ ಜನರನ್ನು ತಲುಪಿದೆ.
ಈ ವಿಡಿಯೋ ನೆಟ್ಟಿಗರನ್ನು ಬಹುವಾಗಿ ಆಕರ್ಷಿಸಿದೆ ಮತ್ತು ಹಲವಾರು ರೀತಿಯಲ್ಲಿ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚಿಸುವಂತೆಯೂ ಮಾಡಿದೆ. ಇದು ಬಹಳ ಆಕರ್ಷಕವಾಗಿದೆ, ಅತ್ಯುತ್ತಮವಾದ ತಾಂತ್ರಿಕತೆಯಿಂದ ಕೂಡಿದೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ. ಬಹಳಷ್ಟು ಜನಕ್ಕೆ ಆಹಾರದ ಅವಶ್ಯಕತೆ ಇದೆ, ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಮಶೀನುಗಳನ್ನು ಸ್ಥಾಪಿಸಿ. ಅವರು ಉಚಿತವಾಗಿ ತಿಂಡಿ ಪಡೆಯಲಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಮನೆಯಲ್ಲಿ ಇಡ್ಲಿ ಮಾಡಿಕೊಂಡು ತಿನ್ನುವುದು ಸುಲಭ ಮತ್ತು ಆರೋಗ್ಯಕರ. ನಾನು ಇಂಥ ಮಶೀನ್ ಇಡ್ಲಿಗಳನ್ನು ತಿಂದು ಅನಾರೋಗ್ಯಕ್ಕೆ ಈಡಾಗಿದ್ದಿದೆ ಎಂದಿದ್ದಾರೆ ಮಗದೊಬ್ಬರು. ಶುಚಿ ರುಚಿ ಬಿಸಿ ಎಲ್ಲವೂ ಸರಿ ಆದರೆ ಬೆಲೆ? ಎಂದು ಕಳವಳಕ್ಕೀಡಾಗಿದ್ದಾರೆ ಇನ್ನೂ ಒಬ್ಬರು. ಈ ಕುರಿತು ಸಾಕಷ್ಟು ತಮಾಷೆಯುಕ್ತ ಮೀಮ್ಗಳನ್ನು ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.
ನಿಮಗೇನು ಅನ್ನಿಸುತ್ತೆ ಈ ಇಡ್ಲಿ ವೆಂಡಿಂಗ್ ಮಶೀನ್ ಬಗ್ಗೆ?
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ
Published On - 4:07 pm, Fri, 14 October 22