
ಬೆಂಗಳೂರು, ಜನವರಿ 13: ಬೆಂಗಳೂರಿನಲ್ಲಿ (Bangalore) ಕನ್ನಡ (Kannada) ಮಾತನಾಡದೆ ಇರುವುದಕ್ಕೆ ಜಗಳವಾಗಿದ್ದು, ಹಿಂದಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಚರ್ಚೆಗಳು ಆಗುತ್ತಿರುವುದನ್ನು ಆಗಾಗ್ಗೆ ಕಾಣುತ್ತಿರುತ್ತೇವೆ. ಆದರೆ, ಅಚ್ಚರಿಯ ಸನ್ನಿವೇಶ ವೊಂದರಲ್ಲಿ, ಹಿಂದಿ ಮಾತನಾಡುವ ಜಪಾನ್ ಯುವತಿಯೊಬ್ಬರು ಪಟಪಟನೆ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಜಪಾನ್ ಯುವತಿ ಮೇಯೋ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಜತೆಗೆ, ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ. ಬಳಿಕ ಆ ವಿಡಿಯೋವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಹಿಂದಿ ಮಾತನಾಡುವ ಜಪಾನ್ ಹುಡುಗಿ ಬೆಂಗಳೂರಿನಲ್ಲಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದಾಳೆ’ ಎಂದು ಆಕೆ ಇನ್ಸ್ಟಾಗ್ರಾಮ್ ನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನಲ್ಲಿ ಒಟಾ ಟೋಕಿಯೋ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಇಲ್ಲಿನ ದೋಸೆಯ ರುಚಿ ಅದ್ಭುತ ಎಂದು ಅವರು ಬರೆದುಕೊಂಡಿದ್ದಾರೆ.
ಹಿಂದಿಯಲ್ಲಿ ಮಾತನಾಡುತ್ತಿದ್ದ ಮೇಯೋ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ. ‘ಚೆನ್ನಾಗಿದ್ದೀರಾ? ಇಲ್ಲಿ ಒಳ್ಳೆಯ ಅಡುಗೆ ಯಾವುದು’ ಎಂದು ಕೇಳಿದ್ದಾರೆ. ಅದಕ್ಕೆ ಪ್ರೇಕ್ಷಕರು ಮಸಾಲೆ ದೋಸೆ ಎಂದು ಉತ್ತರಿಸಿದ್ದಾರೆ. ತಕ್ಷಣ ಆಕೆಯೂ ‘ಮಸಾಲೆ ದೋಸೆ’ ಎಂದಿದ್ದಾರೆ. ಕನ್ನಡದಲ್ಲಿ ಥ್ಯಾಂಕ್ಯೂ ಹೇಳುವುದು ಹೇಗೆ ಎಂದು ಸಭಿಕರನ್ನು ಪ್ರಶ್ನಿಸಿದ್ದಾರೆ. ಅದಕ್ಕವರು ‘ಧನ್ಯವಾದ’ ಎಂದು ಹೇಳಿಕೊಡುತ್ತಿದ್ದಂತೆ ಆಕೆಯೂ ಪುನರ್ಚ್ಚರಿಸಿದ್ದಾರೆ.
ಸದ್ಯ ಮೇಯೋ ಇನ್ಸ್ಟಾಗ್ರಾಂ ವಿಡಿಯೋ ವೈರಲ್ ಆಗುತ್ತಿದ್ದು, ಕನ್ನಡ ಮಾತನಾಡಲು ಪ್ರಯತ್ನಿಸಿದ್ದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಮಾತನಾಡಲು ಪ್ರಯತ್ನಿಸಿದ ಬಳಿಕ ಆಕೆ, ನನ್ನ ಕನ್ನಡ ಭಾಷೆ ಇನ್ನಷ್ಟು ಸುಧಾರಿಸಬೇಕು ಎಂಬುದು ನನಗೆ ಗೊತ್ತಿದೆ. ಆದರೆ, ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದರಿಂದ ಬೆಂಗಳೂರಿಗರಿಗೆ ತುಂಬಾ ಖುಷಿಯಾಗಿದೆ ಎಂಬುದು ನನಗೆ ಗೊತ್ತು. ಧನ್ಯವಾದ ಎಂದು ಆಕೆ ಹೇಳುವುದೂ ವಿಡಿಯೋದಲ್ಲಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ