Viral Video : ಜೀವನದ ಪ್ರತೀ ಘಟ್ಟವನ್ನೂ ವಿಶೇಷವಾಗಿ ದಾಖಲಿಸುವುದನ್ನು ಇಂದು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಿದ್ದಾರೆ. ಅದರಲ್ಲೂ ಡಿಜಿಟಲ್ಯುಗದಲ್ಲಿ ಈ ಸೃಜನಶೀಲತೆಗೆ ಎಲ್ಲೆಯೇ ಇಲ್ಲ. ಪ್ರೀವೆಡ್ಡಿಂಗ್ ಶೂಟ್ ಇರಬಹುದು, ವೆಡ್ಡಿಂಗ್ ಶೂಟ್ ಇರಬಹುದು ಸಿನೆಮಾ ದೃಶ್ಯಗಳಂತೆಯೇ ಕಂಗೊಳಿಸುತ್ತಿರುತ್ತವೆ. ಕೇರಳದ ವಧುವೊಬ್ಬರು ತಮ್ಮ ಮದುವೆಯ ಕ್ಷಣಗಳನ್ನು ದಾಖಲಿಸಲು ಆಲೋಚಿಸಿದ ರೀತಿ ಬಹಳ ಗಮನ ಸೆಳೆಯುವಂತಿದೆ. ತಾವಿರುವ ಊರಿನ ರಸ್ತೆಗಳ ಹದಗೆಟ್ಟ ಸ್ಥಿತಿಯನ್ನು ಈ ವಿಡಿಯೋದಲ್ಲಿ ಹಿಡಿದಿಡಲು ನೋಡಿದ್ದಾರೆ. ತುಂಬಿದ ಹೊಂಡಗಳ ಮಧ್ಯೆ ಕೆಂಪು ಸೀರೆ ಉಟ್ಟು ನಡೆದು ಬರುವ ವಧುವಿನ ವಿಡಿಯೋ ಇಲ್ಲಿದೆ.
ಓಡಾಡುವ ವಾಹನಗಳು, ಎಲ್ಲೆಂದರಲ್ಲಿ ತುಂಬಿಕೊಂಡ ರಸ್ತೆಹೊಂಡಗಳು. ಸಂಪೂರ್ಣ ಅಲಂಕರಿಸಿಕೊಂಡು ಹುಷಾರಿನಿಂದ ನಡೆದುಬರುತ್ತಿರುವ ಈ ವಧು… ಈ ದೃಶ್ಯ ನೋಡಿದ ಯಾರೂ ಮತ್ತೆ ಮತ್ತೆ ನೋಡುವಂತಿದೆ.
Arrow_weddingcompany ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಸೆಪ್ಟೆಂಬರ್ 11ರಂದು ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈತನಕ 4.3 ಮಿಲಿಯನ್ ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 3,70,400 ಜನರಿಂದ ಮೆಚ್ಚುಗೆ ಪಡೆದಿದೆ.
ವಧುವಿನ ಈ ಸೃಜನಶೀಲ ಆಲೋಚನೆಯಿಂದ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಆದರೆ, ಕೇರಳ ರಸ್ತೆಯ ಅವಸ್ಥೆಯ ಬಗ್ಗೆ ಸಾಕಷ್ಟು ಗೇಲಿ ಮಾಡಿದ್ದಾರೆ. ‘ಫೋಟೋ ಶೂಟ್ ರಸ್ತೆಯಲ್ಲಿ ನಡೆಯುತ್ತಿಲ್ಲ, ಹೊಂಡದಲ್ಲಿ’ ಎಂದಿದ್ದಾರೆ. ‘ನೈಸ್ ರೋಡ್’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಅದು ರಸ್ತೆಯೇ? ಕೆಲವು ಮರಿ ಮೀನುಗಳನ್ನು ಖರೀದಿಸಿ ಇಲ್ಲಿಯೇ ಮೀನುಸಾಕಾಣಿಕೆ ಪ್ರಾರಂಭಿಸಬಹುದು’ ಎಂದಿದ್ದಾರೆ ಒಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:41 am, Wed, 21 September 22