ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಸಿಎಂ ವಾಹನ ಬರುತ್ತಿದ್ದ ವೇಳೆಯಲ್ಲಿಯೇ ಮಹಿಳೆಯೊಬ್ಬರು ತಮ್ಮ ಸ್ಕೂಟಿಯನ್ನು ದಿಢೀರನೆ ಬಲಕ್ಕೆ ತಿರುಗಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಕೂಟಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬ್ರೇಕ್ ಹಾಕಿದ ಪರಿಣಾಮ ಸಿ.ಎಂ ಕಾರು ಮತ್ತು ಬೆಂಗಾವಲು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಆಕ್ಸಿಂಡೆಂಟ್‌ನ ಭೀಕರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಭೀಕರ ಅಪಘಾತ ತಿರುವನಂತಪುರಂ ಬಳಿ ನಡೆದಿದ್ದು, ಕೊಟ್ಟಾಯಂಗೆ ಭೇಟಿ ನೀಡಿ ರಾಜ್ಯ ರಾಜಧಾನಿಗೆ ವಾಪಸ್ಸಾಗುತ್ತಿದ್ದ ವೇಳೆ ಮಹಿಳೆಯಿದ್ದ ಸ್ಕೂಟಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಿಎಂ ಮತ್ತು ಬೆಂಗಾವಲು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಪರಿಣಾಮ ವಾಹನಗಳು ಜಖಂಗೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಳಿಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಬೇರೆ ವಾಹನದಲ್ಲಿ ಕಳುಹಿಸಿಕೊಡಲಾಯಿತು.
IndiantechGuide ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಅಪಘಾತಕ್ಕೆ ತುತ್ತಾದ ಕೇರಳ ಸಿ.ಎಂ ಕಾರು; ಇಲ್ಲಿ ತಪ್ಪು ಯಾರದ್ದು?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿ.ಎಂ ಮತ್ತು ಬೆಂಗಾವಲು ವಾಹನಗಳು ಬರುತ್ತಿರುವ ವೇಳೆ ಮಹಿಳೆಯೊಬ್ಬರು ಒಮ್ಮೆಲೇ ತಮ್ಮ ಸ್ಕೂಟಿಯನ್ನು ಬಲ ಬದಿಗೆ ತಿರುಗಿಸುವಂತ ದೃಶ್ಯವನ್ನು ಕಾಣಬಹುದು.ಹೀಗೆ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಿಎಂ ಕಾರು ಮತ್ತು ಬೆಂಗಾವಲು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಕುಡಿದು ಟೈಟ್ ಆಗಿ ರಸ್ತೆಯಲ್ಲಿ ವಿಚಿತ್ರವಾಗಿ ಡಾನ್ಸ್ ಮಾಡಿದ ವ್ಯಕ್ತಿ
ಅಕ್ಟೋಬರ್ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಸ್ಕೂಟಿಯಲ್ಲಿದ್ದ ಮಹಿಳೆಯದ್ದೇ ತಪ್ಪು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಡಿವೈಡರ್ ಲೈನ್ ದಾಟಿ ಅತಿ ವೇಗದಲ್ಲಿ ಹೋದ ಇವರುಗಳದ್ದೇ ತಪ್ಪು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ