
Love Propose: ತಾನು ಪ್ರೀತಿಸುವ ಹುಡುಗಿಗೆ/ಹುಡುಗನಿಗೆ ವಿಶೇಷವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆನ್ನುವುದು ಅನೇಕರ ಕನಸಾಗಿರುತ್ತದೆ. ಅವರವರ ಆಸಕ್ತಿ ಅಭಿರುಚಿಗೆ ತಕ್ಕಂತೆ ಅವರು ಪ್ರೇಮನಿವೇದನೆಗೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ ತಮ್ಮ ಗೆಳತಿಗೆ/ಗೆಳೆಯನಿಗೆ (Friends) ಅಚ್ಚರಿಯನ್ನೂ ನೀಡುತ್ತಾರೆ. ನೀರಿನಾಳದಲ್ಲಿ, ವಿಮಾನದಲ್ಲಿ, ಸಂಗೀತ ಸಭೆಯಲ್ಲಿ, ಕ್ರೀಡಾಂಗಣದಲ್ಲಿ, ಬೆಟ್ಟದ ತುದಿಯಲ್ಲಿ ಹೀಗೆ ಎಲ್ಲೆಲ್ಲೋ ಪ್ರೇಮನಿವೇದನೆ ಮಾಡಿಕೊಂಡ ಅನೇಕರ ವಿಡಿಯೋಗಳನ್ನು ನೋಡಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. NBCಯ ಅಂಗಸಂಸ್ಥೆ WRCB-TV ಚಾನೆಲ್ನ ನ್ಯೂಸ್ ಆ್ಯಂಕರ್ ಸ್ನೇಹಿತೆಗೆ ಲೈವ್ನಲ್ಲಿಯೇ ರಿಪೋರ್ಟರ್ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ!
ನೆಟ್ಟಿಗರನೇಕರು ಈ ಹೃದಯಸ್ಪರ್ಶಿ ಮತ್ತು ಅಚ್ಚರಿಯಿಂದ ಕೂಡಿದ ಪ್ರೇಮನಿವೇದನೆಯ ವಿಡಿಯೋ ನೋಡಿ ಈ ಜೋಡಿಗೆ ಅಭಿನಂದಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಮ್ಯಾಜಿಕಲಿ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನ್ಯೂಸ್ ಆ್ಯಂಕರ್ ನಿಕೋಲ್ಸನ್ ಟೆಲಿಪ್ರಾಂಪ್ಟರ್ನೆಡೆ ನೋಡುತ್ತಿರುತ್ತಾರೆ. ಇದ್ದಕ್ಕಿದ್ದ ಹಾಗೆ ಸ್ಟುಡಿಯೋ ಪ್ರವೇಶಿಸಿದ ಆಕೆಯ ಗೆಳೆಯ ಮತ್ತು ರಿಪೋರ್ಟರ್ ರಿಲೇ ನಗೆಲ್ ಹೂಗುಚ್ಛ ಮತ್ತು ಉಂಗುರವನ್ನು ಆಕೆ ಎದುರು ಹಿಡಿಯುತ್ತಾರೆ.
‘ನನ್ನ ಬಳಿ ವಿಶೇಷವಾದ ಒಂದು ವರದಿ ಇದೆ. ಕಾರ್ನೇಲಿಯಾ ಮತ್ತು ನಾನು ನಾಲ್ಕು ವರ್ಷಗಳ ಹಿಂದೆ ಮೋಂಟಾನಾದ ನ್ಯೂಸ್ ಸೆಂಟರ್ನಲ್ಲಿ ಭೇಟಿಯಾಗಿದ್ದೆವು. ನಾನು ನಿನ್ನನ್ನು ಭೇಟಿಯಾದಾಗ ಮೊದಲ ನೋಟದಲ್ಲಿಯೇ ಆಕರ್ಷಿತನಾಗಿದ್ದೆ. ನಿನ್ನದು ಅದ್ಭುತ ವ್ಯಕ್ತಿತ್ವ, ನೀ ಇರುವಲ್ಲೆಲ್ಲ ನಗುವನ್ನು ಹಂಚುತ್ತೀ, ಬೆಳಕನ್ನು ಹರಡುತ್ತೀ’ ಎಂದು ಹೇಳುತ್ತ ಪ್ರೇಮನಿವೇದನೆ ಮಾಡಿಕೊಳ್ಳುತ್ತಾರೆ ರಿಪೋರ್ಟರ್.
ಈತನಕ ಸುಮಾರು 19,000 ಜನರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡು ಜೋಡಿಗೆ ಶುಭ ಹಾರೈಸಿದ್ದಾರೆ. ನನಗೆ ಸಂತೋಷದಿಂದ ಕಣ್ಣುಕ್ಕುತ್ತಿದೆ ಎಂದಿದ್ದಾರೆ ಒಬ್ಬರು. ಇವರಿಬ್ಬರೂ ತುಂಬಾ ಮುದ್ದಾಗಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ, ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದಿದ್ದಾರೆ ಮಗದೊಬ್ಬರು. ನಿಜಕ್ಕೂ ಇದು ಬಹಳ ಆಪ್ತವಾದ ಚಿತ್ರಣ, ಮನಸ್ಸು ತುಂಬಿತು ನಿಮಗೆ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ.
Published On - 4:44 pm, Fri, 25 August 23